ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ | ಶಾಲೆಗೆ ಹೊರಡಬೇಕಿದ್ದ ಬಾಲಕಿ ಸಾವಿನ ಮನೆಗೆ

Published 12 ಆಗಸ್ಟ್ 2023, 20:30 IST
Last Updated 12 ಆಗಸ್ಟ್ 2023, 20:30 IST
ಅಕ್ಷರ ಗಾತ್ರ

ಬೆಳಗಾವಿ: ಆ ಬಾಲಕಿ ಶನಿವಾರ ಬೆಳಿಗ್ಗೆ 6ಕ್ಕಿಂತ ಮುಂಚೆಯೇ ಎದ್ದಳು. ತನ್ನ ನೋಟ್‌ಬುಕ್ಕಿನಲ್ಲಿ ಅಜ್ಜನ ದಿನಗೂಲಿಯ ಹಾಜರಿ ಹಾಕಿದಳು. ಇನ್ನೊಂದು ಗಂಟೆ ದಾಟಿದ್ದರೆ ಪುಟಾಣಿ ನಲಿಯುತ್ತ ಶಾಲೆ ಸೇರುತ್ತಿದ್ದಳು. ಆದರೆ, ಕಾದು ಕುಳಿತಿದ್ದ ಜವರಾಯ ಮುಗ್ದ ಜೀವವನ್ನು ಸಾವಿನ ಮನೆಗೆ ತಳ್ಳಿದ...

ಇಲ್ಲಿನ ಶಾಹೂನಗರದ ಮೂರನೇ ಕ್ರಾಸ್‌ನಲ್ಲಿ ಶನಿವಾರ ಸಂಭವಿಸಿದ ವಿದ್ಯುತ್‌ ಅವಘಡದಲ್ಲಿ ಮೃತಪಟ್ಟ ಬಾಲಕಿಯನ್ನು ಕಂಡು ಮಮ್ಮಲ ಮರುಗದವರೇ ಇಲ್ಲ. ಮುದ್ದಿನ ಮೊಮ್ಮಗಳನ್ನು ರಕ್ಷಿಸಲು ಹೋದ ಅಜ್ಜ– ಅಜ್ಜಿಯನ್ನೂ ವಿಧಿ ಬಿಡಲಿಲ್ಲ.

ಸಂಗಮೇಶ್ವರ ನಗರದ ಸರ್ಕಾರಿ ಶಾಲೆಯಲ್ಲಿ ಎರಡನೇ ತರಗತಿ ಓದುತ್ತಿದ್ದ ಬಾಲಕಿ, ವಾರದ ಹಿಂದಷ್ಟೇ ಅಜ್ಜ– ಅಜ್ಜಿ ಮನೆಗೆ ಬಂದಿದ್ದಳು. ಶನಿವಾರ ತನ್ನ ಅಜ್ಜನಿಗೆ ವಾರದ ಕೂಲಿ ಬರಬೇಕಿತ್ತು. ಗುತ್ತಿಗೆದಾರ ಬರುವ ಮುನ್ನ ನೋಟ್‌ಬುಕ್‌ನಲ್ಲಿ ಅಜ್ಜನ ವಾರದ ಹಾಜರಿಯನ್ನು ಬಾಲಕಿ ಗೀಟು ಹಾಕಿದಳು. ಇದಾಗಿ ಕೆಲವೇ ಕ್ಷಣಗಳಲ್ಲಿ ಮೂವರೂ ಪ್ರಾಣ ಬಿಟ್ಟರು. ಬದುಕು ಕಟ್ಟಿಕೊಳ್ಳಲು ದೂರದೂರಿನಿಂದ ವಲಸೆ ಬಂದಿದ್ದ ಈ ಜೀವಗಳು ಯಾರದೋ ತಪ್ಪಿಗೆ ಸ್ಮಶಾನ ಸೇರಿದವು.

ರಾಮದುರ್ಗ ತಾಲ್ಲೂಕಿನ ಅರಬೆಂಚಿ ತಾಂಡಾ ಮೂಲದವರಾದ ಈರಪ್ಪ ಗಣಗಪ್ಪ ರಾಠೋಡ– ಲಮಾನಿ (55) ಇವರು ಪತ್ನಿ ಶಾಂತವ್ವ (50), ಪುತ್ರ ಹೊನ್ನಪ್ಪ, ಇವರ ಪತ್ನಿ ಅಮಿಶಾ, ಅಲ್ಲದೇ ಈರಪ್ಪ ಅವರ ಪುತ್ರಿ– ಅಳಿಯ ಕೂಡ ದುಡಿಮೆಗಾಗಿ ಬೆಳಗಾವಿ ನಗರಕ್ಕೆ ಬಂದಿದ್ದರು.

ಈರಪ್ಪ– ಶಾಂತವ್ವ ಅವರು ಶಾಹೂ ನಗರದ ಮೂರನೇ ಕ್ರಾಸಿನ ಕಟ್ಟಡಕ್ಕೆ ವಾಚಮನ್‌ ಆಗಿದ್ದರು. ಮಗ ಹೊನ್ನಪ್ಪ– ಸೊಸೆ ಅಮಿಶಾ ದಂಪತಿ ಸಂಗಮೇಶ್ವರ ನಗರದ ಇನ್ನೊಂದು ಮನೆಗೆ ವಾಚಮನ್‌ ಆಗಿದ್ದರು. ಸಿಮೆಂಟ್ ಕಟ್ಟಡಗಳ ಮುಂದೆ ಕಟ್ಟಿದ ತಗಡಿನ ಶೆಡ್‌ನಲ್ಲಿಯೇ ಬೇರೆ ಬೇರೆ ಕಡೆ ವಾಸವಾಗಿದ್ದರು.

ಈರಪ್ಪ ಅವರ ಮಗನ ಮಗಳಾದ ಅನ್ನಪೂರ್ಣಾ (8) ಹಾಗೂ ಮಗಳ ಮಗಳಾದ ಪ್ರಿಯಾ (10) ಕಳೆದೊಂದು ವಾರದಿಂದ ಅಜ್ಜಿ ತಾತನ ಜತೆಗಿದ್ದರು.

ಘಟನೆ ನಡೆದಿದ್ದು ಹೇಗೆ?

‘ಎಂದಿನಂತೆ ಶನಿವಾರ ಬೆಳಿಗ್ಗೆ ಕೂಡ ಈರಪ್ಪ ಅವರು ಕಟ್ಟಡಕ್ಕೆ ನೀರು ಸಿಂಪಡಿಸಲು ಅಣಿಯಾಗಿದ್ದರು. ಬಟನ್‌ ಒತ್ತಿ ನೀರೆತ್ತುವ ಮೋಟಾರ್‌ ಚಾಲೂ ಮಾಡುವಂತೆ ಅನ್ನಪೂರ್ಣಾಗೆ ಹೇಳಿದರು. ಶೆಡ್‌ ಒಳಗೆ ಇದ್ದ ಬಟನ್‌ ಒತ್ತಿದ ಬಾಲಕಿ, ಮೋಟಾರ್‌ ನೋಡಲು ಹೊರಗೆ ಬಂದಳು. ನೆಲದಲ್ಲಿ ಬಿದ್ದಿದ್ದ ವೈರ್‌ ಮೇಲೆ ಕಾಲಿಟ್ಟಳು. ನೆಲ ಹಸಿಯಾಗಿದ್ದರಿಂದ ವಿದ್ಯುತ್‌ ಬಾಲಕಿಗೆ ತಾಗಿ ಕುಸಿದುಬಿದ್ದಳು. ಆಕೆಯನ್ನು ರಕ್ಷಿಸಲು ಒಳಗೆ ಇದ್ದ ಅಜ್ಜಿ ಶಾಂತವ್ವ ಓಡಿಬಂದರು. ಅವರಿಗೂ ವಿದ್ಯುತ್‌ ಸ್ಪರ್ಶವಾಯಿತು. ಇಬ್ಬರೂ ಒದ್ದಾಡುವುದನ್ನು ಕಂಡು ಅಜ್ಜ ಈರಪ್ಪ ಧಾವಿಸಿದರು. ಅವರಿಗೂ ವೈರ್‌ ತಾಗಿ ಮೂವರೂ ಸ್ಥಳದಲ್ಲೇ ಕೊನೆಯಿಸಿರೆಳೆದರು’ ಎಂದು ಪೊಲೀಸ್‌ ಮೂಲಗಳು ಮಾಹಿತಿ ನೀಡಿವೆ.

ಇದೇ ಶೆಡ್‌ನ ಒಳಗಿದ್ದ ಪ್ರಿಯಾ ಕೂದಲೆಳೆ ಅಂತರದಲ್ಲೇ ಬದುಕಿದ್ದಾಳೆ. ಪ್ರಿಯಾ ಕೂಡ ಈರಪ್ಪ ಅವರ ಮಗಳ ಪುತ್ರಿ. ಮೂವರೂ ಬಿದ್ದಿದ್ದನ್ನು ಕಂಡು ಹೊರಗೆ ಓಡಿಬಂದ ಪ್ರಿಯಾ ಸುತ್ತಲಿನ ಜನರಿಗೆ ತಿಳಿಸಿದಳು. ತಮ್ಮ ತಂದೆ–ತಾಯಿ, ಅತ್ತೆ ಮಾವಂದಿರಿಗೆ ಫೋನ್‌ ಮಾಡಿದಳು. ಈರಪ್ಪ ಅವರ ಪುತ್ರ ಹೊನ್ನಪ್ಪ ಹಾಗೂ ಸೊಸೆ ಅಮಿಶಾ ಸ್ಥಳಕ್ಕೆ ಬಂದು ನೋಡುವಷ್ಟರಲ್ಲಿ ಮೂವರೂ ಕೊನೆಯುಸಿರೆಳೆದಿದ್ದರು.

ಬಾಲಕಿ ತಂದೆ ಅಂಗವಿಕಲ

ಹೊನ್ನಪ್ಪ ಅವರು ಜನ್ಮತಃ ಅಂಗವಿಕಲರಾಗಿದ್ದಾರೆ. ತಂದೆ– ತಾಯಿಗೂ ವಯಸ್ಸಾಗಿತ್ತು. ಪತ್ನಿ ಅಮಿಶಾಗೆ ಪುಟ್ಟ ಮಗು ಇತ್ತು. ಹೀಗಾಗಿ, ವಾಚಮನ್‌ ಕೆಲಸಕ್ಕೆ ಬೆಳಗಾವಿಗೆ ಬಂದಿದ್ದರು.

ಕಣ್ಣೀರಾದ ತಾಂಡಾ ತಾಯಂದಿರು

ಲಂಬಾಣಿ ಜನರ ಒಗ್ಗಟ್ಟೇ ಹಾಗೆ. ಸಂಭ್ರಮವನ್ನೂ ಸಂತಸವನ್ನೂ ಸಮನಾಗಿ ಹಂಚಿಕೊಳ್ಳುತ್ತಾರೆ ಅವರು. ಮೂವರ ಸಾವಿನ ಸುದ್ದಿ ಕೇಳಿ ನಗರದ ಎಲ್ಲೆಡೆ ಇದ್ದ ತಾಂಡಾದ ಜನ ಓಡೋಡಿ ಬಂದರು. ಅಪಾರ ಸಂಖ್ಯೆಯಲ್ಲಿ ಸೇರಿದ ಎಲ್ಲರ ಕಣ್ಣುಗಳೂ ಒದ್ದೆಯಾದವು. ಮಹಿಳೆಯರಂತೂ ನೆಲಕ್ಕೆ ಬಿದ್ದು ಗೋಳಿಟ್ಟು ದೇವರನ್ನು ಶಪಿಸಿದರು. ಕರುಳಿನ ಕುಡಿಗಾಗಿ ನಿರಂತರ ಗೋಳಿಡುತ್ತಿದ್ದ ಅಮಿಶಾ ಅವರನ್ನು ಸಂತೈಸಲು ಸಾಧ್ಯವಾಗಲಿಲ್ಲ. ಶವ ಸಾಗಿಸುವ ವಾಹನದಲ್ಲಿ ದೇಹಗಳನ್ನು ಹಾಕುತ್ತಿದ್ದಂತೆ ಕುಟುಂಬದವರು ಸಮುದಾಯದವರ ಆಕ್ರಂದನ ಮುಗಿಲು ಮುಟ್ಟಿತು. ಅತ್ತ ಕಡೆ ಶವಗಳನ್ನು ಹೊತ್ತ ವಾಹನ ಹೊರಡುತ್ತಿದ್ದಂತೆ ಜನರೂ ಅದರ ಹಿಂದೆ ಸಾಗಿದರು. ಅವಘಡ ಸಂಭವಿಸಿದ ಮನೆ ಖಾಲಿ ಆಯಿತು. ನೀರವ ಮೌನ ಆವರಿಸಿತು.

10 ಸಾವಿರಕ್ಕೂ ಹೆಚ್ಚು ಲಂಬಾಣಿಗರ ವಲಸೆ

ಬೆಳಗಾವಿ ಜಿಲ್ಲೆಯ ರಾಮದುರ್ಗ ಸವದತ್ತಿ ಯರಗಟ್ಟಿ ತಾಲ್ಲೂಕಿನಲ್ಲಿ 40ಕ್ಕೂ ಹೆಚ್ಚು ಲಂಬಾಣಿ ತಾಂಡಾಗಳಿವೆ. ಊರ ಹೊರಗಿರುವ ತಾಂಡಾದ ಜನರಿಗೆ ತುತ್ತಿನಚೀಲ ತುಂಬಿಸಿಕೊಳ್ಳಲು ಉದ್ಯೋಗ ಇಲ್ಲ. ಅವರೆಲ್ಲ ಬೆಳಗಾವಿ ಬಾಗಲಕೋಟೆ ಹುಬ್ಬಳ್ಳಿ ಹಾಗೂ ಗೋವಾಗಳಿಗೆ ವಲಸೆ ಹೋಗುತ್ತಾರೆ. ಹೀಗೆ ವಲಸೆ ಬಂದ 10 ಸಾವಿರಕ್ಕೂ ಹೆಚ್ಚು ಜನ ಬೆಳಗಾವಿ ನಗರದಲ್ಲೇ ಇದ್ದಾರೆ. ಪ್ರತಿ ಬಾರಿ ಮಳೆಗಾಲ ಬಂದರೆ ಹೊಲಗಳಲ್ಲಿ ಕೆಲಸ ಸಿಗುತ್ತದೆ ಎಂದು ಊರಿಗೆ ಮರಳುತ್ತಿದ್ದರು. ಆದರೆ ಈ ಬಾರಿ ಮಳೆ ಕೈಕೊಟ್ಟಿತು. ಅದರಲ್ಲೂ ರಾಮದುರ್ಗ ತಾಲ್ಲೂಕಿನಲ್ಲಿ ಸರಾಸರಿಗಿಂತ ಶೇ 30ರಷ್ಟು ಕಡಿಮೆ ಮಳೆಯಾಗಿದೆ. ಹೀಗಾಗಿ ಈರಪ್ಪ ಅವರಂಥ ನೂರಾರು ಕುಟುಂಬಗಳು ಊರಿಗೆ ಮರಳದೇ ನಗರದಲ್ಲೇ ಕಟ್ಟಡ ಕಾಮಗಾರಿಗಳ ಕೆಲಸ ಮಾಡಿಕೊಂಡಿವೆ.

ತಲಾ ₹2 ಲಕ್ಷ ಪರಿಹಾರ

‘ಸಾವಿಗೀಡಾದ ಮೂವರ ಕುಟುಂಬಕ್ಕೆ ತಲಾ ₹2 ಲಕ್ಷ ಪರಿಹಾರ ನೀಡಲಾಗುವುದು’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ತಿಳಿಸಿದರು. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಅವರು ಘಟನೆ ಪರಿಶೀಲಿಸಿ ಸ್ಥಳದಿಂದಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕರೆ ಮಾಡಿ ಘಟನೆಯ ಮಾಹಿತಿ ನೀಡಿದರು. ಬಡ ಕುಟುಂಬಕ್ಕೆ ಸಹಾಯ ನೀಡಬೇಕು ಎಂದು ಕೋರಿದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ ‘ಘಟನೆಯಿಂದ ತೀವ್ರ ನೋವಾಗಿದೆ. ತನಿಖೆ ನಂತರ ಘಟನೆಯ ಪೂರ್ಣ ವಿವರ ಸಿಗಲಿದೆ. ಲಕ್ಷ್ಮೀತಾಯಿ ಫೌಂಡೇಷನ್‌ನಿಂದ ಕೂಡ ತುರ್ತು ನೆರವು ನೀಡಿದ್ದೇನೆ’ ಎಂದರು.

ಬೆಳಗಾವಿಯಲ್ಲಿ ಶನಿವಾರ ವಿದ್ಯುತ್‌ ಅವಘಡದಲ್ಲಿ ಮೃತಪಟ್ಟ ಬಾಲಕಿಯ ತಾಯಿ ಅಮಿಶಾ ಅವರನ್ನು ಜನ ಸಂತೈಸಿದರು / ಪ್ರಜಾವಾಣಿ ಚಿತ್ರ
ಬೆಳಗಾವಿಯಲ್ಲಿ ಶನಿವಾರ ವಿದ್ಯುತ್‌ ಅವಘಡದಲ್ಲಿ ಮೃತಪಟ್ಟ ಬಾಲಕಿಯ ತಾಯಿ ಅಮಿಶಾ ಅವರನ್ನು ಜನ ಸಂತೈಸಿದರು / ಪ್ರಜಾವಾಣಿ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT