ಗುರುವಾರ , ಮೇ 6, 2021
31 °C
ಗೋವಾದಲ್ಲಿ ಮೂವರ ಬಂಧನ

ಮಹದಾಯಿ ಅಭಯಾರಣ್ಯದಲ್ಲಿ 4 ಹುಲಿಗಳ ಕೊಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಖಾನಾಪುರ (ಬೆಳಗಾವಿ ಜಿಲ್ಲೆ): ಕರ್ನಾಟಕ-ಗೋವಾ ಗಡಿಯಲ್ಲಿ ವ್ಯಾಪಿಸಿರುವ ಪಶ್ಚಿಮ ಘಟ್ಟದ ಪೈಕಿ ಉತ್ತರ ಗೋವಾ ಜಿಲ್ಲೆಯಲ್ಲಿರುವ ಮಹದಾಯಿ ಅಭಯಾರಣ್ಯದಲ್ಲಿ ವಿಷಪ್ರಾಶನದಿಂದಾಗಿ 4 ಹುಲಿಗಳು ಸಾವಿಗೀಡಾದ ಘಟನೆ ಈಚೆಗೆ ನಡೆದಿದ್ದು, ಕಳೇಬರಗಳು ಮಹದಾಯಿ ಅರಣ್ಯದ ಸತ್ತೇರಿ ಎಂಬ ಗ್ರಾಮದ ಬಳಿ ಗುರುವಾರ ಪತ್ತೆಯಾಗಿವೆ.

‘ಮಹದಾಯಿ ಅರಣ್ಯದ ಜನವಸತಿ ಪ್ರದೇಶಗಳ ಮೇಲೆ ಹುಲಿಗಳು ದಾಳಿ ನಡೆಸಿ ಸಾಕುಪ್ರಾಣಿಗಳನ್ನು ಕೊಲ್ಲುತ್ತಿರುವುದರಿಂದ ಕೆರಳಿದ ಸ್ಥಳೀಯ ನಿವಾಸಿಗಳು ಹುಲಿಗಳಿಗೆ ವಿಷಪ್ರಾಶನ ಮಾಡಿದ್ದಾರೆ’ ಎನ್ನಲಾಗುತ್ತಿದೆ. ಘಟನೆಗೆ ಸಂಬಂಧಿಸಿದಂತೆ ಮೂವರನ್ನು ಗೋವಾ ಪೊಲೀಸರು ಮತ್ತು ಅಲ್ಲಿನ ಅರಣ್ಯ ಇಲಾಖೆಯ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎಂದು ಗೊತ್ತಾಗಿದೆ.

ಮಹದಾಯಿ ಅರಣ್ಯದ ಸತ್ತೇರಿ ಬಳಿಯ ಗೊಲ್ವಳ್ಳಿ ಅರಣ್ಯದಲ್ಲಿ ಪತ್ತೆಯಾದ ಹುಲಿಗಳ ಕಳೇಬರಗಳನ್ನು ಪರಿಶೀಲಿಸಿದಾಗ, ಒಂದು ಮಧ್ಯವಯಸ್ಕ ಗಂಡು ಮತ್ತು ಹೆಣ್ಣು ಹಾಗೂ ಎರಡು 4ರಿಂದ 5 ವರ್ಷ ವಯಸ್ಸಿನ ಹೆಣ್ಣು ಹುಲಿಗಳು ಎಂದು ಗುರುತಿಸಲಾಗಿದೆ. ಅರಣ್ಯ ಇಲಾಖೆ ಮತ್ತು ಕೇಂದ್ರ ವನ್ಯಜೀವಿ ಸಂರಕ್ಷಣಾ ಸಚಿವಾಲಯ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದೆ. ಘಟನೆಯ ಬಗ್ಗೆ ಉನ್ನತ ಮಟ್ಟದ ತನಿಖೆ ಕೈಗೊಳ್ಳಲಾಗಿದೆ. ಮುಂಬರುವ ದಿನಗಳಲ್ಲಿ ಪಶ್ಚಿಮ ಘಟ್ಟದ ಅರಣ್ಯ ಪ್ರದೇಶದಲ್ಲಿ ವಾಸಿಸುವ ಹುಲಿಗಳ ಸಂರಕ್ಷಣೆಗೆ ಮತ್ತಷ್ಟು ಪ್ರಬಲ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಗೋವಾದ ಮುಖ್ಯ ವನ್ಯಜೀವಿ ವಾರ್ಡನ್ ಸಂತೋಷಕುಮಾರ ಹೇಳಿದ್ದಾರೆ.

‘ತನಿಖೆ ಮುಂದುವರಿದಿದೆ. ಹುಲಿಗಳ ಸಾವಿನ ತನಿಖೆ ಮತ್ತು ಭವಿಷ್ಯದಲ್ಲಿ ಹುಲಿಗಳ ಸಂರಕ್ಷಣೆಯ ವಿಷಯದಲ್ಲಿ ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳ ಅರಣ್ಯ ಮತ್ತು ಪೊಲೀಸ್ ಇಲಾಖೆಯ ನೆರವು ಕೋರಲಾಗಿದೆ’ ಎಂದು ಮಾಹಿತಿ ನೀಡಿದ್ದಾರೆ.

‘ನಮ್ಮ ವ್ಯಾಪ್ತಿಯಲ್ಲಿ ಯಾವುದೇ ಹುಲಿ ಸತ್ತಿಲ್ಲ. ಭೀಮಗಡ ವನ್ಯಜೀವಿ ಪ್ರದೇಶ ಸೇರಿದಂತೆ ಕರ್ನಾಟಕದ ವ್ಯಾಪ್ತಿಯಲ್ಲಿ ಬರುವ ಸಂರಕ್ಷಿತ ಅರಣ್ಯಪ್ರದೇಶದಲ್ಲಿ ಕೂಂಬಿಂಗ್‌ ಕಾರ್ಯಾಚರಣೆ ನಡೆಸುತ್ತಿದ್ದೇವೆ. ಹೆಚ್ಚಿನ ಹದ್ದುಗಳು ಕಂಡ ಸ್ಥಳದಲ್ಲೂ ಪರಿಶೀಲನೆ ನಡೆಸುತ್ತಿದ್ದೇವೆ. ಆದರೆ, ಯಾವುದೇ ಕಳೇಬರ ಪತ್ತೆಯಾಗಿಲ್ಲ. ವನ್ಯಜೀವಿಗಳಿಗೆ ವಿಷಪ್ರಾಶನ ಮಾಡಿದ ಘಟನೆಗಳು ನಮ್ಮಲ್ಲಿ ಈವರೆಗೂ ನಡೆದಿಲ್ಲ. ಮುಂಜಾಗ್ರತಾ ಕ್ರಮ ವಹಿಸಲಾಗಿದೆ’ ಎಂದು ಖಾನಾಪುರ ಎಸಿಎಫ್‌ ಶಶಿಧರ್ ಜಿ.ಆರ್. ‘‍ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು