ಬುಧವಾರ, ಜನವರಿ 27, 2021
21 °C
ತವರಲ್ಲಿ ಸಂಭ್ರಮ

4ನೇ ಬಾರಿಗೆ ಸಚಿವರಾಗಿ ಪ್ರಮಾಣವಚನ; ಹಲವು ಖಾತೆ ನಿಭಾಯಿಸಿದ ‘ಕತ್ತಿ’

ಎನ್.ಪಿ. ಕೊಣ್ಣೂರ Updated:

ಅಕ್ಷರ ಗಾತ್ರ : | |

Prajavani

ಹುಕ್ಕೇರಿ: ಉತ್ತರ ಕರ್ನಾಟಕದ ಪ್ರಗತಿಗಾಗಿ ಆಗಾಗ ದನಿ ಎತ್ತಿ ಕಾಳಜಿ ಪ್ರದರ್ಶಿಸುವ ಮತ್ತು ಸಹಕಾರ ತಳಹದಿಯ ಕ್ಷೇತ್ರ ಹುಕ್ಕೇರಿ ಪ್ರತಿನಿಧಿಸುವ ಶಾಸಕ ಉಮೇಶ ಕತ್ತಿ ವಿಶಿಷ್ಟ ರಾಜಕಾರಣಿ.

ತಾಲ್ಲೂಕಿನ ಬೆಲ್ಲದ ಬಾಗೇವಾಡಿಯ ಅವರು, ಸದಾ ಒಂದಿಲ್ಲೊಂದು ವಿದ್ಯಮಾನದಿಂದ ಹೆಸರುವಾಸಿ. ಜಿಲ್ಲೆಯಲ್ಲಿ ರಾಜಕೀಯವಾಗಿ ಸ್ವಸಾಮರ್ಥ್ಯದಿಂದ ಬೆಳೆದವರೆಂದು ಗುರುತಿಸಿಕೊಂಡಿದ್ದಾರೆ. ಉಪ ಚುನಾವಣೆ ಸೇರಿ 8ನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿ ಪ್ರಸ್ತುತ ವಿಧಾನಸಭೆಯಲ್ಲಿ ಹಿರಿಯ ಶಾಸಕರಲ್ಲಿ ಒಬ್ಬರಾಗಿದ್ದಾರೆ.

ಜೆ.ಎಚ್. ಪಟೇಲ್ ಮತ್ತು ಬಿ.ಎಸ್. ಯಡಿಯೂರಪ್ಪ ಮಂತ್ರಿಮಂಡಲದಲ್ಲಿ ಸಕ್ಕರೆ, ಲೋಕೋಪಯೋಗಿ, ತೋಟಗಾರಿಕೆ ಹಾಗೂ ಬಂದಿಖಾನೆ ಹಾಗೂ ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ. 60 ವರ್ಷದ ಅವರು ಆಡಳಿತದಲ್ಲಿ ಅಪಾರ ಅನುಭವ ಹೊಂದಿದ್ದಾರೆ. 1960 ಮಾರ್ಚ್‌ 14ರಂದು ಆಗರ್ಭ ಶ್ರೀಮಂತ ಕತ್ತಿ ಮನೆತನದಲ್ಲಿ ಹಿರಿಯ ಸಹಕಾರಿ ದಿ.ವಿಶ್ವನಾಥ–ರಾಜೇಶ್ವರಿ ದಂಪತಿ ಜೇಷ್ಠ ಪುತ್ರನಾಗಿ ಜನಿಸಿದರು. ಸ್ವಗ್ರಾಮದಲ್ಲಿ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣ ಪಡೆದು, ಬೆಳಗಾವಿ ಲಿಂಗರಾಜ ಕಾಲೇಜಿನಲ್ಲಿ ಪಿಯು ಶಿಕ್ಷಣ ಅಭ್ಯಾಸ ಮಾಡಿದರು.

ಬೆಳಗಾವಿ ಜಿಲ್ಲಾ ಉಸ್ತುವಾರಿ ಮತ್ತು ಕೃಷಿ ಸಚಿವರಾಗಿ 2011 ಮಾರ್ಚ್ 11ರಿಂದ 13ರವರೆಗೆ ವಿಶ್ವಕನ್ನಡ ಸಮ್ಮೇಳನವನ್ನು ಅಭೂತಪೂರ್ವವಾಗಿ ಆಯೋಜಿಸಿ, ಮರಾಠಿಗರಿಂದಲೂ ಭೇಷ್ ಎನಿಸಿಕೊಂಡ ಧುರೀಣ. 86 ಸ್ಥಾನಗಳ ಪೈಕಿ 64ರಲ್ಲಿ ಸ್ಥಾನಗಳನ್ನು ಗೆಲ್ಲಿಸಿ ಪ್ರಪ್ರಥಮ ಬಾರಿಗೆ ಜಿಲ್ಲಾ ಪಂಚಾಯ್ತಿಯಲ್ಲಿ ಬಿಜೆಪಿ ಅಧಿಕಾರ ಚುಕ್ಕಾಣಿ ಹಿಡಿಯುವಲ್ಲಿ ಕಾರಣರಾದವರು.

1985ರಲ್ಲಿ ತಂದೆ ವಿಶ್ವನಾಥ ಕತ್ತಿ ಅವರ ಅಕಾಲಿಕ ನಿಧನದಿಂದ ತೆರವಾದ ಹುಕ್ಕೇರಿ ಕ್ಷೇತ್ರದಿಂದ ಜನತಾ ಪಕ್ಷದಿಂದ ಶಾಸಕರಾಗಿ ಪ್ರಥಮ ಬಾರಿಗೆ ವಿಧಾನಸಭೆ ಪ್ರವೇಶಿಸಿದರು. ಆಗ ಅವರಿಗೆ 25ರ ಹರೆಯ. 1989, 1994ರಲ್ಲಿ ಶಾಸಕರಾಗಿ ಪುನರಾಯ್ಕೆಯಾದ ನಂತರ ರಾಜಕೀಯ ಜೀವನದಲ್ಲಿ ಅನೇಕ ಬದಲಾವಣೆಗಳಾದವು. 2008ರಲ್ಲಿ ಜೆಡಿಎಸ್ ಪಕ್ಷದಿಂದ ಆಯ್ಕೆಯಾಗಿದ್ದರು. ಈ ನಡುವೆ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿ ಮತ್ತೆ ಶಾಸಕರಾದರು.

1995ರಲ್ಲಿ ಸಂಕೇಶ್ವರದ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆಗೆ ನಡೆದ ಆಡಳಿತ ಮಂಡಳಿ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿ ಇಂದಿನವರೆಗೂ ಮಾರ್ಗದರ್ಶನ ಮಾಡುತ್ತಿದ್ದಾರೆ. ಒಮ್ಮೆ ಸೋತರೂ ದೃತಿಗೆಡದೆ ತಂದೆ ಹೆಸರಿನಲ್ಲಿ ಬೆಲ್ಲದ ಬಾಗೇವಾಡಿಯಲ್ಲಿ ‘ವಿಶ್ವನಾಥ ಸಕ್ಕರೆ ಕಾರ್ಖಾನೆ’ ಸ್ಥಾಪಿಸಿ ಈ ಭಾಗದ ಸಾವಿರಾರು ರೈತರು ಮತ್ತು ಕಾರ್ಮಿಕರಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಆರ್ಥಿಕ ಎಳಿಗೆಗೆ ಕಾರಣರಾಗಿದ್ದಾರೆ. ಕಾರ್ಖಾನೆಯ ಆಡಳಿತವನ್ನು ಈಗ ಪುತ್ರ ನಿಖಿಲ್ ಕತ್ತಿಗೆ ವಹಿಸಿದ್ದಾರೆ.

2017ರಲ್ಲಿ ಹಿರಾ ಶುಗರ್ಸ್ ಚುನಾವಣೆಯಲ್ಲಿ ಅವಿರೋಧ ಆಯ್ಕೆ ಪ್ರಕ್ರಿಯೆಗೆ ಮಾರ್ಗದರ್ಶನ ನೀಡಿದವರು. ಪುತ್ರ ನಿಖಿಲ್ ಕತ್ತಿ ಅವರನ್ನು ಅಮ್ಮಣಗಿ ಜಿಲ್ಲಾ ಪಂಚಾಯ್ತಿ ಹಾಗೂ ಸಹೋದರ ರಮೇಶ ಕತ್ತಿ ಅವರ ಪುತ್ರ ಪವನ್ ಕತ್ತಿಯನ್ನು ನಾಗರಮುನ್ನೋಳಿ ಜಿಲ್ಲಾ ಪಂಚಾಯ್ತಿ ಕ್ಷೇತ್ರಗಳಿಂದ ಗೆಲ್ಲಿಸಿದ್ದಾರೆ.

ಗಮನಾರ್ಹ ಕೆಲಸಗಳು

* ಹುಕ್ಕೇರಿ ಮತ್ತು ಸಂಕೇಶ್ವರದಲ್ಲಿ ನಿರಂತರ ಕುಡಿಯುವ ನೀರು ಪೂರೈಕೆ ಯೋಜನೆ ಅನುಷ್ಠಾನ.

* ಎರಡೂ ಪಟ್ಟಣಗಳಲ್ಲಿ ಹೈಟೆಕ್ ಬಸ್ ನಿಲ್ದಾಣ, ಅಗ್ನಿಶಾಮಕ ಠಾಣೆ, ರಾಣಿ ಚನ್ನಮ್ಮ ಮಹಿಳಾ ವಸತಿ ಶಾಲೆ, ಕ್ರೀಡಾಂಗಣ ನಿರ್ಮಾಣ.

* ಕ್ಷೇತ್ರದ 27 ಕೆರೆಗಳ ನೀರು ತುಂಬಿಸುವ ಕಾರ್ಯ.

* ಎರಡೂ ಪುರಸಭೆಗಳ ಅಭಿವೃದ್ಧಿಗೆ ಕ್ರಮ.

* ಕ್ಷೇತ್ರದಲ್ಲಿ ₹ 20ಕೋಟಿ ವೆಚ್ಚದಲ್ಲಿ 240 ಕಿ.ಮೀ. ರಸ್ತೆ ಸುಧಾರಣೆ

* 6 ಗ್ರಾಮಗಳನ್ನು ಸುವರ್ಣ ಗ್ರಾಮ ಯೋಜನೆಯಲ್ಲಿ ಸೇರಿಸಿದ್ದು.

* ಬಸ್ ಡಿಪೊ ಮಂಜೂರು.

* ಬಡ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಪಡೆಯಲು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮಂಜೂರು

* ವಿವಿಧ ನೀರಾವರಿ ಯೋಜನೆಗಳ ಅನುಷ್ಠಾನ

* 1998ರಲ್ಲಿ ಲೋಕೋಪಯೋಗಿ ಸಚಿವರಾಗಿ ಅವರಗೋಳ-ಘೋಡಗೇರಿ ನಡುವೆ ಹಿರಣ್ಯಕೇಶಿ ನದಿಗೆ ತೂಗುಸೇತುವೆ, ಕೊಟಬಾಗಿ ಏತ ನೀರಾವರಿ ಯೋಜನೆ, ಬಡಕುಂದ್ರಿ ಬಳಿಯ ಹಿರಣ್ಯಕೇಶಿ ನದಿಗೆ ಸರ್ವಋತು ಸೇತುವೆ, ಸುಲ್ತಾನಪುರ ಬಳಿ ಬ್ರಿಜ್ ಕಂ ಬಾಂದಾರ, ಸಮುದಾಯ ಭವನ ನಿರ್ಮಾಣ ಮಾಡಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು