ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ | ಇಂದಿರಾ ಕ್ಯಾಂಟೀನ್‌ ಬಗ್ಗೆ ನಿರ್ಲ‌ಕ್ಷ್ಯ ವಹಿಸದಂತೆ ಸಚಿವರ ತಾಕೀತು

Published 6 ಅಕ್ಟೋಬರ್ 2023, 15:44 IST
Last Updated 6 ಅಕ್ಟೋಬರ್ 2023, 15:44 IST
ಅಕ್ಷರ ಗಾತ್ರ

ಬೆಳಗಾವಿ: ‘ವಿಭಾಗ ಮಟ್ಟದಲ್ಲಿ ಬರುವ ಎಲ್ಲ ಜಿಲ್ಲೆಗಳಲ್ಲಿ ನಿಗದಿತ ಅವಧಿಯೊಳಗೆ ಇಂದಿರಾ ಕ್ಯಾಂಟೀನ್‌ ಪ್ರಾರಂಭಿಸಬೇಕು. ಕುಡಿಯುವ ನೀರು, ಬೋರ್‌ವೆಲ್ ದುರಸ್ತಿ, ಪೈಪ್‌ಲೈನ್ ಅಳವಡಿಕೆ ಸೇರಿದಂತೆ ಸಮರ್ಪಕ ಸೇವೆ ಒದಗಿಸಬೇಕು’ ಎಂದು ನಗರಾಭಿವೃದ್ಧಿ ಸಚಿವ ಬಿ‌.ಎಸ್.ಸುರೇಶ್‌ ತಿಳಿಸಿದರು.

ಸುವರ್ಣ ವಿಧಾನ ಸೌಧದ ಸೆಂಟ್ರಲ್ ಹಾಲ್‌ನಲ್ಲಿ ಶುಕ್ರವಾರ ನಡೆದ ಬೆಳಗಾವಿ ವಿಭಾಗದ ನಗರ ಸ್ಥಳೀಯ ಸಂಸ್ಥೆಗಳ ವಿವಿಧ ಅಭಿವೃದ್ಧಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ವಿಭಾಗದ ಬಾಗಲಕೋಟೆ, ಜಮಖಂಡಿ, ಮುಧೋಳ ತಾಲ್ಲೂಕಿನ ಹೊಸ ಇಂದಿರಾ ಕ್ಯಾಂಟೀನ್ ಪ್ರಾರಂಭಕ್ಕೆ ಈಗಾಗಲೇ ಸ್ಥಳ ಗುರುತಿಸಲಾಗಿದೆ. ನಿಗದಿತ ಅವಧಿಯೊಳಗೆ ಟೆಂಡರ್ ಕರೆಯಬೇಕು. ಬೆಳಗಾವಿ ಜಿಲ್ಲೆಯಲ್ಲಿ 9 ಕ್ಯಾಂಟೀನ್‌ ಇದ್ದು, ಇನ್ನೂ 28 ಪ್ರಾರಂಭಿಸಬೇಕು. ಧಾರವಾಡ ವ್ಯಾಪ್ತಿಯಲ್ಲಿ 8 ಇದ್ದು, 20 ಹೊಸದಾಗಿ ಪ್ರಾರಂಭಕ್ಕೆ ಸ್ಥಳ ಗುರುತಿಸಬೇಕು. ಹಾವೇರಿಯಲ್ಲಿ 3 ಇದ್ದು, 7 ಹೊಸ ಕ್ಯಾಂಟೀನ್ ಪ್ರಾರಂಭಿಸಬೇಕು’ ಎಂದರು.

‘ಗೋಕಾಕ್‌ ತಾಲ್ಲೂಕಿನಲ್ಲಿ ಈಗಾಗಲೇ ಒಂದು ಕ್ಯಾಂಟೀನ್ ಇದೆ. ಸರ್ಕಾರದ ಮಾರ್ಗಸೂಚಿಯ ಅನ್ವಯ 25 ಸಾವಿರ ಜನಸಂಖ್ಯೆ ಇರುವ ಸ್ಥಳಗಳಲ್ಲಿ ಒಂದು ಕ್ಯಾಂಟೀನ್ ಪ್ರಾರಂಭಿಸಬೇಕು. ಗೋಕಾಕ್ ವ್ಯಾಪ್ತಿಯಲ್ಲಿ 79 ಸಾವಿರ ಜನಸಂಖ್ಯೆ ಇರುವ ಸ್ಥಳಗಳಿವೆ. ಅಲ್ಲಿ ಕೂಡಲೇ ಪ್ರಾರಂಭೀಸಬೇಕು’ ಎಂದು ತಿಳಿಸಿದರು.

‘ಇಂದಿರಾ ಕ್ಯಾಂಟೀನ್‌ಗಳ ಪ್ರಾರಂಭಕ್ಕೆ ಸರ್ಕಾರದ ಹೊಸ ನಿರ್ದೇಶನದಂತೆ ಯಾರು ಕ್ರಮ ವಹಿಸುವುದಿಲ್ಲ ಆ ಅಧಿಕಾರಿಗೆ ನೋಟಿಸ್ ಜಾರಿ ಮಾಡಿ’ ಎಂದು ಸಚಿವ ಸೂಚಿಸಿದರು.

ಗೃಹಭಾಗ್ಯ: ಜಿಲ್ಲೆಯ ಕಾಯಂ ಪೌರಕಾರ್ಮಿಕರಿಗೆ ‘ಗೃಹಭಾಗ್ಯ’ ಯೋಜನೆಯಡಿ ನಡೆದ ಕಟ್ಟಡ ನಿರ್ಮಾಣ ಕಾಮಗಾರಿ ಬೇಗ ಪೂರ್ಣಗೊಳಿಸಬೇಕು. ಸ್ಥಳೀಯ ಸಂಸ್ಥೆಗಳಲ್ಲಿ ಅರ್ಹರಾದ ಎಲ್ಲರ ಸೇವೆಯನ್ನೂ ಕೂಡಲೇ ಕಾಯಂ ಮಾಡಬೇಕು’ ಎಂದರು.

ಪೌರಾಡಳಿತ ಸಚಿವ ರಹೀಂ ಖಾನ್, ಶಾಸಕರಾದ ಗಣೇಶ ಹುಕ್ಕೇರಿ, ವಿಶ್ವಾಸ ವೈದ್ಯ, ಮಹೇಂದ್ರ ತಮ್ಮನವರ, ಆಸೀಫ್ ಸೇಠ್, ಪೌರಾಡಳಿತ ನಿರ್ದೇಶಕಿ ಎನ್.ಮಂಜುಶ್ರೀ, ಕೆ.ಯು.ಐ.ಡಿ.ಎಫ್.ಸಿ ವ್ಯವಸ್ಥಾಪಕ ನಿರ್ದೇಶಕ ಬಿ.ಶರತ್, ಜಿಲ್ಲಾ ಮಟ್ಟದ ಯೋಜನಾ ಕೋಶದ ಯೋಜನಾ ನಿರ್ದೇಶಕ ಮಲ್ಲಿಕಾರ್ಜುನ ಕಲಾದಗಿ, ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ ಸೇರಿದಂತೆ ವಿಭಾಗದ ಎಲ್ಲ ಅಧಿಕಾರಿಗಳು ಇದ್ದರು.

‘ನೀರು ಸರಬರಾಜಿಗೆ ಕ್ರಮ ವಹಿಸಿ’

‘ನಗರಗಳಲ್ಲಿ ಕುಡಿಯುವ ನೀರು ಸರಬರಾಜಿಗೆ ತೊಂದರೆ ಆಗಬಾರದು. ಅಗತ್ಯ ಸ್ಥಳಗಳಲ್ಲಿ ಬೋರ್‌ವೆಲ್‌ ಕೊರೆಸಬೇಕು. ಅನುದಾನ ಕೊರತೆ ಇದ್ದಲ್ಲಿ ಪ್ರಸ್ತಾವ ಸಲ್ಲಿಸಬೇಕು’ ಎಂದು ಹೇಳಿದರು.

‘ಬೆಳಗಾವಿ ಜಿಲ್ಲೆಯ 38 ಸ್ಥಳೀಯ ಸಂಸ್ಥೆಗಳಲ್ಲಿ ನೀರಿನ ತೊಂದರೆ ಆಗಿಲ್ಲ. ಮಾರ್ಚ್‌ವರೆಗೂ ನದಿಗಳಲ್ಲಿ ನೀರಿನ ಲಭ್ಯತೆ ಇರಲಿದೆ. ಕೊರತೆ ಕಂಡುಬಂದಲ್ಲಿ ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮಾಡಿ’ ಎಂದರು.

‘ಹಿಡಕಲ್ ಜಲಾಶಯದಿಂದ ನಗರದವೆರೆಗೆ ಹೊಸ ಪೈಪ್‌ಲೈನ್ ಅಳವಡಿಸಲು ಆದೇಶವಿದೆ. ಅರಣ್ಯ ಇಲಾಖೆಯಿಂದ ನಿರಾಕ್ಷೇಪಣಾ ಪತ್ರ ನೀಡದೆ ತಡೆ ಹಿಡಿಯಲಾಗಿದೆ. ಅರಣ್ಯ ಸಚಿವ ಈಶ್ವರ ಖಂಡ್ರೆ ಅವರ ಜೊತೆ ಚರ್ಚಿಸಿ ಎನ್‌ಒಸಿ ಪಡೆಯಬೇಕು’ ಎಂದು ಅವರು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT