ಬೆಳಗಾವಿ ಜಿಲ್ಲೆ ರಾಯಬಾಗ ತಾಲ್ಲೂಕಿನ ನಿಡಗುಂದಿ ಗ್ರಾಮದ ಡಾ.ಅಂಬೇಡ್ಕರ್ ನಗರ ಸರ್ಕಾರಿ ಶಾಲೆಯ ಮುಖ್ಯಶಿಕ್ಷಕ, ಯುವ ಕವಿ 38 ವರ್ಷದ ವೀರಣ್ಣ ಮಡಿವಾಳರ ಅವರದ್ದು ಶಿಕ್ಷಕ ವೃತ್ತಿಗೆ ಬರುವವರಿಗೆ ಮಾದರಿ ಎನ್ನಬಹುದಾದ ವ್ಯಕ್ತಿತ್ವ. ಕಡು ಕಷ್ಟದಲ್ಲಿಯೇ ಬೆಳೆದ ಅವರು, ಛಲ ಮತ್ತು ಸಾಮಾಜಿಕ ಕಳಕಳಿಯನ್ನು ಮೈಗೂಡಿಸಿಕೊಂಡವರು. ಹಾಳು ಕೊಂಪೆಯಂತಿದ್ದ ನಿಡಗುಂದಿಯ ಸರ್ಕಾರಿ ಶಾಲೆಯನ್ನು ಹೈಟೆಕ್ ಶಾಲೆಯನ್ನಾಗಿ ಪರಿವರ್ತಿಸಿರುವುದು ಅವರ ಇಚ್ಛಾಶಕ್ತಿಗೆ ಸಾಕ್ಷಿ. ಈ ಕುಗ್ರಾಮದ ಮಕ್ಕಳು ಕೂಡ ಈಗ ಗುಣಮಟ್ಟದ ಶಿಕ್ಷಣ ಪಡೆಯುತ್ತಿದ್ದಾರೆ. ಶಿಕ್ಷಣ ಕ್ಷೇತ್ರ ಮಾತ್ರವಲ್ಲದೆ, ಮೊನಚಾದ ಬರವಣಿಗೆ ಮೂಲಕ ಸಾಹಿತ್ಯ ಲೋಕದಲ್ಲೂ ಹೆಸರು ಗಳಿಸಿದ್ದಾರೆ ವೀರಣ್ಣ ಮಡಿವಾಳರ. ಅವರ ಪ್ರೇರಣಾದಾಯಕ ಕಥನ ಈ ವಿಡಿಯೊದಲ್ಲಿ.