ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

10 ಕೋಟಿ ಜನ ಸೌಲಭ್ಯಗಳಿಂದ ವಂಚಿತ: ವೀರಪ್ಪ ಮೊಯ್ಲಿ

ಕೇಂದ್ರ ಸರ್ಕಾರದ ವಿರುದ್ಧ ವೀರಪ್ಪ ಮೊಯ್ಲಿ ಕಿಡಿ
Published 3 ಮೇ 2024, 8:56 IST
Last Updated 3 ಮೇ 2024, 8:56 IST
ಅಕ್ಷರ ಗಾತ್ರ

ಬೆಳಗಾವಿ: ‘ಹತ್ತು ವರ್ಷಗಳಿಗೊಮ್ಮೆ ಜನಗಣತಿ ನಡೆಯಬೇಕು. ಅದರಿಂದ ಎಲ್ಲ ಧರ್ಮಗಳ, ಜಾತಿಗಳ ಜನರಿಗೆ ಯೋಜನೆಗಳ ಸೌಲಭ್ಯಗಳು ತಲುಪುತ್ತವೆ. 2021ರಲ್ಲಿ ಮೋದಿ ಸರ್ಕಾರ ಜನಗಣತಿ ನಡೆಸಲಿಲ್ಲ. ಇದೇ ಕಾರಣದಿಂದ 10 ಕೋಟಿ ಜನ ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಇದರಲ್ಲಿ ಹೆಚ್ಚಾಗಿ ಹಿಂದುಳಿದ ವರ್ಗದವರೇ ಇದ್ದಾರೆ’ ಎಂದು ಕೆಂದ್ರದ ಮಾಜಿ ಸಚಿವ, ಮಾಜಿ ಮುಖ್ಯಮಂತ್ರಿಯೂ ಆದ ಎಂ.ವೀರಪ್ಪ ಮೊಯ್ಲಿ ಆರೋಪಿಸಿದರು.

ನಗರದಲ್ಲಿ ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಮೋದಿ ಮತ್ತೆ ಅಧಿಕಾರಕ್ಕೆ ಬಂದರೆ ಒಂದು ದೇಶ, ಒಂದು ಚುನಾವಣೆ ಮತ್ತು ಏಕರೂಪ ನಾಗರಿಕ ಸಂಹಿತೆ ಜಾರಿಗೆ ಬರಬಹುದು. 2029ರಲ್ಲಿ ಚುನಾವಣೆಯೇ ನಡೆಯುವುದಿಲ್ಲ ಎಂಬ ಭಯವೂ ನಮಗಿದೆ’ ಎಂದರು.

‘ಬಿಜೆಪಿಗೆ ಅನುಕೂಲ ಆಗಲಿ ಎಂಬ ಕಾರಣಕ್ಕೆ ಈ ಬಾರಿ ಚುನಾವಣೆಯ ಅವಧಿಯನ್ನೇ ವಿಸ್ತರಿಸಲಾಗಿದೆ. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಪ್ರಧಾನಿ ಮೋದಿ ಸಂಚಾರ ಮಾಡಲು ಅನುಕೂಲ ಕಲ್ಪಿಸಲಾಗಿದೆ’ ಎಂದು ಮೊಯ್ಲಿ ಆರೋಪಿಸಿದರು.

‘ಈ ಹಿಂದೆ ಚುನಾವಣಾ ಆಯೋಗ 20 ದಿನಗಳಲ್ಲಿ ಚುನಾವಣೆ ನಡೆಸುತ್ತಿತ್ತು. ನಾಮಪತ್ರ ಸಲ್ಲಿಕೆಯಿಂದ ಫಲಿತಾಂಶ ಪ್ರಕಟವಾಗುವ ವರೆಗಿನ ಪ್ರಕ್ರಿಯೆ ಈ ಅವಧಿಯಲ್ಲಿ ಮುಗಿಯುತ್ತಿತ್ತು. ಆದರೆ, ಈ ಬಾರಿ ಮಾರ್ಚ್‌ನಲ್ಲಿ ಚುನಾವಣೆ ಅಧಿಸೂಚನೆ ಪ್ರಕಟಗೊಂಡಿದ್ದು, ಜೂನ್ 4ರಂದು ಫಲಿತಾಂಶ ಪ್ರಕಟವಾಗಲಿದೆ. ತಮ್ಮ ಹೆಸರಿನ ಮೇಲೆ ಮತ ಕೇಳಲು ಮೋದಿ ಅವರಿಗೆ ಅನುಕೂಲ ಮಾಡಿಕೊಡಲು ಮೂರು ತಿಂಗಳು ಚುನಾವಣೆ ನಡೆಸಲಾಗುತ್ತಿದೆ’ ಎಂದು ದೂರಿದರು.

‘ರಾಷ್ಟ್ರೀಯ ಅಂಕಿ– ಅಂಶ ಆಯೋಗವು 2018ರಲ್ಲಿ ತನ್ನ ವರದಿಯಲ್ಲಿ ದೇಶದಲ್ಲಿ ಶೇ 6ರಷ್ಟು ನಿರುದ್ಯೋಗ ಸಮಸ್ಯೆಯಿದೆ ಎಂದು ಹೇಳಿತ್ತು. ಈ ವರದಿ ಪ್ರಕಟಿಸಿದರೆ ಹಿನ್ನಡೆಯಾಗಬಹುದು ಎಂದು ಹೆದರಿದ ಬಿಜೆಪಿಯವರು, 2019ರ ಲೋಕಸಭಾ ಚುನಾವಣೆ ನಂತರ ವರದಿ ಬಹಿರಂಗಪಡಿಸಿದರು’ ಎಂದರು.

‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜಕೀಯ ಪಕ್ಷಗಳು ತಮ್ಮ ಹೆಸರಿನಲ್ಲಿ ಮತ ಕೇಳಬೇಕಿತ್ತು. ಆದರೆ, ಬಿಜೆಪಿಯವರು ತಮ್ಮ ಪಕ್ಷದ ಬದಲಿಗೆ, ಮೋದಿ ಮುಖ ಪ್ರದರ್ಶಿಸುತ್ತಿದ್ದಾರೆ. ‘ಮೋದಿ ಕಿ ಗ್ಯಾರಂಟಿ’ ಮೂಲಕ ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಡ್ಡಿಪಡಿಸಲು ಪ್ರಯತ್ನಿಸಲಾಗುತ್ತಿದೆ’ ಎಂದು ಆರೋಪಿಸಿದರು.

ರಾಜೀನಾಮೆ ನೀಡಲಿ: ‘ಪ್ರಜ್ವಲ್‌ ರೇವಣ್ಣ ಲೈಂಗಿಕ ಹಗರಣದ ವಿಚಾರದಲ್ಲಿ ಎಚ್‌.ಡಿ.ದೇವೇಗೌಡ ಹಾಗೂ ಅವರ ಇಡೀ ಕುಟುಂಬ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಬೇಕು. ರಾಜಕೀಯ ಬಿಡಬೇಕು’

‘ವಿಡಿಯೊ ಬಿಡುಗಡೆಯಲ್ಲಿ ಯಾರ ಪಾತ್ರವಿದೆ ಎಂಬುದು ಮುಖ್ಯವಲ್ಲ. ಯಾರು ತಪ್ಪು ಮಾಡಿದ್ದಾರೆ ಎಂಬುದು ಮುಖ್ಯ. ಇದು ಸಮಾಜವೇ ತಲೆತಗ್ಗಿಸುವ ಕೆಲಸ. ದೇವೇಗೌಡರ ಕುಟುಂಬ ನೈತಿಕ ಹೊಣೆ ಹೊರಬೇಕು’ ಎಂದು ನಗರದಲ್ಲಿ ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದರು.

ಶಾಸಕ ಆಸೀಫ್‌ ಸೇಠ್‌, ಅಭಯಚಂದ್ರ ಜೈನ, ವಿನಯ ನಾವಲಗಟ್ಟಿ ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT