ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಐಟಿಯಲ್ಲಿ ವಾಸ್ತವ ಪ್ರಯೋಗಾಲಯಗಳ ಕೇಂದ್ರ

ವಿದ್ಯಾರ್ಥಿಗಳ ಚಿಂತನಾ ಶಕ್ತಿಯ ವಿಸ್ತಾರಕ್ಕೆ ಲ್ಯಾಬ್‌ಗಳು ಸಹಕಾರಿ
Last Updated 5 ಏಪ್ರಿಲ್ 2019, 11:48 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿನ ಕೆಎಲ್‌ಎಸ್‌ ಗೋಗಟೆ ತಾಂತ್ರಿಕ ಕಾಲೇಜಿನಲ್ಲಿ (ಜಿಐಟಿ) ಸುರತ್ಕಲ್‌ನ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ ಸಹಯೋಗದಲ್ಲಿ ಸ್ಥಾಪಿಸಿರುವ ವಾಸ್ತವ ಪ್ರಯೋಗಾಲಯಗಳ (ವರ್ಚುವಲ್ ಲ್ಯಾಬೊರೇಟರಿ) ನೋಡಲ್ ಕೇಂದ್ರವನ್ನು ಶುಕ್ರವಾರ ಉದ್ಘಾಟಿಸಲಾಯಿತು.

ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಯ ಪ್ರತಿನಿಧಿ ಶಿವಶಂಕರ ಹಿರೇಮಠ ಉದ್ಘಾಟಿಸಿದರು.

ನಂತರ ಮಾತನಾಡಿ, ‘ವಾಸ್ತವ ಪ್ರಯೋಗಾಲಯಗಳ ಸ್ಥಾಪನೆಯು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಮಂತ್ರಾಲಯದ ಪ್ರತಿಷ್ಠಿತ ಕಾರ್ಯಕ್ರಮವಾಗಿದೆ. ರಾಷ್ಟ್ರೀಯ ಶಿಕ್ಷಣ ಅಭಿಯಾನದಡಿ ಆರಂಭವಾದ ಯೋಜನೆ ಇದು. ಇದರಲ್ಲಿ ದೇಶದ ಪ್ರತಿಷ್ಠಿತ ಭಾರತೀಯ ತಂತ್ರಜ್ಞಾನ ಸಂಸ್ಥೆಗಳು (ಐಐಟಿ) ಮತ್ತು ಏಕೈಕ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ (ಎನ್‌ಐಟಿಕೆ) ತರಬೇತಿ ಸಂಸ್ಥೆಗಳಾಗಿ ಕೆಲಸ ಮಾಡುತ್ತಿವೆ’ ಎಂದು ತಿಳಿಸಿದರು.

‘ಈ ಪ್ರಯೋಗಾಲಯಗಳು ವಿಜ್ಞಾನ ಮತ್ತು ತಾಂತ್ರಿಕ ಪಠ್ಯಕ್ರಮದ ಅವಿಭಾಜ್ಯ ಭಾಗವಾಗುತ್ತಿವೆ. ಅವುಗಳು ವಿದ್ಯಾರ್ಥಿಗಳಿಗೆ ಪ್ರಮುಖ ಪರಿಕಲ್ಪನೆಗಳನ್ನು ಕಂಡುಕೊಳ್ಳಲು ಮತ್ತು ಹೊಸ ನಾವಿನ್ಯತೆಗಳಿಗೆ ಮೂರ್ತ ಸ್ವರೂಪ ಕೊಡಲು ಸಹಾಯ ಮಾಡುತ್ತವೆ’ ಎಂದು ಹೇಳಿದರು.

‘ಮಾಹಿತಿ ಮತ್ತು ಸಂವಹನ ತಂತ್ರಜ್ಞಾನಗಳ ತ್ವರಿತ ಬೆಳವಣಿಗೆಯೊಂದಿಗೆ ವಾಸ್ತವ ಪ್ರಯೋಗಾಲಯಗಳನ್ನು ನೈಜ ಪ್ರಯೋಗಾಲಯಗಳಿಗೆ ಪರ್ಯಾಯವಾಗಿ ಅಥವಾ ಪೂರಕವಾಗಿ ಬಳಸಲಾಗುತ್ತದೆ. ವೈವಿಧ್ಯಮಯ ಸಿಮ್ಯುಲೇಶನ್ ತಂತ್ರಗಳನ್ನು ಬಳಸಿಕೊಂಡು ಎಂಜಿನಿಯರಿಂಗ್ ಮತ್ತು ವಿಜ್ಞಾನ ವಿಭಾಗಗಳಲ್ಲಿ ಅಭಿವೃದ್ಧಿಪಡಿಸಲಾದ ಈ ವಾಸ್ತವ ಪ್ರಯೋಗಾಲಯಗಳು ವಿದ್ಯಾರ್ಥಿಗಳ ಚಿಂತನೆಗೆ ಮತ್ತು ಕಲ್ಪನಾ ಶಕ್ತಿಗೆ ಅನುಗುಣವಾಗಿ ಕೆಲಸ ಮಾಡಲು ಸಹಕಾರಿಯಾಗುತ್ತವೆ’ ಎಂದು ವಿವರಿಸಿದರು.

‘ಈ ಲ್ಯಾಬ್‌ಗಳನ್ನು ಯಾವುದೇ ಸ್ಥಳ, ಸಮಯದಲ್ಲಿ ಆನ್‌ಲೈನ್‌ನಲ್ಲಿ ಬಳಸಬಹುದು’ ಎಂದು ಹೇಳಿದರು.

‘ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿ ಸಮೂಹಕ್ಕೆ ಬೋಧಿಸುವಾಗ, ನೈಜ ಪ್ರಯೋಗಾಲಯಗಳು ಶಿಕ್ಷಣ ಸಂಸ್ಥೆಗಳಿಗೆ ದೊಡ್ಡ ಸಮಸ್ಯೆಯಾಗಿವೆ. ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳನ್ನು ನಿಭಾಯಿಸಲು ವಾಸ್ತವ ಪ್ರಯೋಗಾಲಯಗಳು ಹೆಚ್ಚು ಸೂಕ್ತವಾಗಿವೆ. ನೈಜ ಪ್ರಯೋಗಾಲಯಕ್ಕೆ ಹೋಲಿಸಿದರೆ ವರ್ಚುವಲ್ ಲ್ಯಾಬೊರೇಟರಿ ಸ್ಥಾಪಿಸಲು ತಗಲುವ ವೆಚ್ಚ, ಕಾರ್ಯಾಚರಣೆ ಮತ್ತು ನಿರ್ವಹಣೆ ವೆಚ್ಚಗಳು ಬಹಳ ಕಡಿಮೆ. ನೈಜ ಪ್ರಯೋಗಾಲಯಗಳಿಗಿಂತ ಭಿನ್ನವಾಗಿವೆ ಹಾಗೂ ದಿನನಿತ್ಯದ ನಿರ್ವಹಣೆಯೂ ಅಗತ್ಯವಿರುವುದಿಲ್ಲ. ಅಸಮರ್ಪಕ ಕ್ರಿಯೆಯ ಕಾರಣದಿಂದಾಗಿ ಹಾನಿಯಾಗುವುದಿಲ್ಲ’ ಎಂದು ತಿಳಿಸಿದರು.

‘ಜಿಐಟಿಯಲ್ಲಿ ಸ್ಥಾಪಿಸಿದ ಈ ನೋಡಲ್ ಕೇಂದ್ರದ ಸದುಪಯೋಗವನ್ನು ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಪಡೆದುಕೊಳ್ಳಬೇಕು. ಈ ಕೇಂದ್ರವು ಸುತ್ತಮುತ್ತಲಿನ ಕಾಲೇಜುಗಳಿಗೆ ಸೇವೆ ವಿಸ್ತರಿಸಬಹುದು’ ಎಂದರು.

ಸಂಪನ್ಮೂಲ ವ್ಯಕ್ತಿಗಳಾದ ಗೌತಮ್ ಪ್ರಭು, ನಿಶಾನ್ ಶೆಟ್ಟಿ ಹಾಗೂ ಕೆ.ಕೆ. ಪ್ರಭಾಕರನ್ ಈ ಲ್ಯಾಬ್‌ಗಳ ಬಳಕೆ ಕುರಿತು ಮಾಹಿತಿ ನೀಡಿದರು.

ಪ್ರಾಚಾರ್ಯ ಆನಂದ್‌ ದೇಶಪಾಂಡೆ ಅಧ್ಯಕ್ಷತೆ ವಹಿಸಿದ್ದರು. ನೋಡಲ್ ಕೇಂದ್ರದ ಸಂಯೋಜನಾಧಿಕಾರಿ ಎಂ.ಎಂ. ಮಠ ಸ್ವಾಗತಿಸಿದರು. ಪ್ರೊ.ಜಿ.ಎನ್. ಮರಣಹೋಳ್ಕರ ಪರಿಚಯಿಸಿದರು. ಪ್ರೊ.ರೂಪಾ ರಾವ್ ನಿರೂಪಿಸಿದರು. ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಜಯಂತ ಕಿತ್ತೂರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT