ಮಂಗಳವಾರ, ಮಾರ್ಚ್ 9, 2021
31 °C
ಕೋವಿಡ್ ಸುರಕ್ಷತಾ ಕ್ರಮ ಪಾಲಿಸುವಲ್ಲಿ ನಿರ್ಲಕ್ಷ್ಯ

ಕೋವಿಡ್‌ಗೆ ಅಂಜದ ಮತದಾರರು; ಗಮನಿಸದ ಸಿಬ್ಬಂದಿ!

ಎಂ. ಮಹೇಶ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಜಿಲ್ಲೆಯ ಏಳು ತಾಲ್ಲೂಕುಗಳಲ್ಲಿ ಮಂಗಳವಾರ ನಡೆದ ಗ್ರಾಮ ಪಂಚಾಯಿತಿ ಚುನಾವಣೆ ವೇಳೆ ಬಹುತೇಕ ಮತಗಟ್ಟೆಗಳಲ್ಲಿ ಮತದಾರರು ಕೋವಿಡ್–19 ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಲ್ಲಿ ನಿರ್ಲಕ್ಷ್ಯ ವಹಿಸಿದ್ದು ಕಂಡುಬಂತು. ಅಲ್ಲಿನ ಅಧಿಕಾರಿ ಅಥವಾ ಸಿಬ್ಬಂದಿ ಅವರಿಗೆ ಸಲಹೆ ನೀಡುವ ಕಾಳಜಿ ವಹಿಸಲಿಲ್ಲ.

ಬೆಳಗಾವಿ, ಹುಕ್ಕೇರಿ, ಗೋಕಾಕ ಹಾಗೂ ಬೈಲಹೊಂಗಲ ತಾಲ್ಲೂಕಿನ ಹಲವು ಮತಗಟ್ಟೆಗಳಿಗೆ ‘ಪ್ರಜಾವಾಣಿ’ ಪ್ರತಿನಿಧಿ ಭೇಟಿ ನೀಡಿದಾಗ ಕಂಡು ಬಂದ ಪ್ರಮುಖಾಂಶಗಳಿವು.

ಕೋವಿಡ್ ಆತಂಕದ ನಡುವೆಯೂ ಜನರು ಮುಂಜಾಗ್ರತಾ ಕ್ರಮ ವಹಿಸದಿರುವುದು ಹಾಗೂ ಮತಗಟ್ಟೆ ಸಮೀಪವೇ ಗುಂಪು ಗುಂಪಾಗಿ ಸೇರಿದ್ದು ಕಳವಳ ಮೂಡಿಸಿತು.

ಪಾಲಿಸಲಿಲ್ಲ

ಮತದಾನ ಹಕ್ಕು ಚಲಾಯಿಸುವ ಭರದಲ್ಲಿ ಅವರು ಸುರಕ್ಷಿತ ಅಂತರ ಕಾಯ್ದುಕೊಳ್ಳಲಿಲ್ಲ. ಅಲ್ಲದೆ, ಕೆಲವು ಕಡೆಗಳಲ್ಲಿ ಮಾರ್ಕಿಂಗ್ ಕೂಡ ಮಾಡಿರಲಿಲ್ಲ. ಅಲ್ಲಲ್ಲಿ ಮಾಡಿದ್ದರಾದರೂ, ಅದನ್ನು ಬಹುತೇಕರು ಪಾಲಿಸಲಿಲ್ಲ. ಮತದಾರರು ತೀರಾ ಸಮೀಪದಲ್ಲೇ ಸಾಲಿನಲ್ಲಿ ನಿಂತು ಮತಗಟ್ಟೆಗೆ ಬಂದರು. ಪೊಲೀಸರು ಆಗಾಗ ಚದುರಿಸುವ ಪ್ರಯತ್ನ ಮಾಡಿದರಾದರೂ ಬಹುತೇಕ ಸಮಯ ಅಲ್ಲಲ್ಲಿ ಗುಂಪುಗಳು ಕಾಣಿಸುತ್ತಿದ್ದವು.

ಕಂಗ್ರಾಳಿ ಕೆ.ಎಚ್., ಕಾಕತಿ, ಯಮಕನಮರಡಿ, ಹೊಸವಂಟಮೂರಿ, ಗುಡಸ್, ಝಾಂಗಟಿಹಾಳ, ಸಾಂಬ್ರಾ, ಮೋದಗಾ, ನೇಸರಗಿ, ಸೋಮನಟ್ಟಿ, ಮಾರಿಹಾಳ... ಹೀಗೆ ಅನೇಕ ಮತಗಟ್ಟೆಗಳ ಸಮೀಪದಲ್ಲೇ ಅಭ್ಯರ್ಥಿಗಳು, ಬೆಂಬಲಿಗರು ಹಾಗೂ ಕುಟುಂಬದವರು ಮತದಾರರ ಮನವೊಲಿಕೆಗೆ ಕೊನೆ ಕ್ಷಣದ ಪ್ರಯತ್ನ ನಡೆಸುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು. ಈ ವೇಳೆ, ಬಹುತೇಕರು ಮಾಸ್ಕ್‌ ಧರಿಸುವುದನ್ನೂ ಮರೆತಿದ್ದರು. ಕೆಲವರು ಹಾಕಿದ್ದರಾದರೂ ಸಮರ್ಪಕವಾಗಿರಲಿಲ್ಲ. ಮತಕ್ಷೇತ್ರಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದ್ದು ಕೇವಲ ಕಾಗದ ಮೇಲಷ್ಟೆ ಮಾತ್ರವೇ ಎನ್ನುವಂತೆ ಅಲ್ಲಿನ ಪರಿಸ್ಥಿತಿ ಇತ್ತು.

ಬಿಸಿಲೇರುತ್ತಾ

ಹೊಸವಂಟಮೂರಿ ಗ್ರಾಮದಲ್ಲಿ ಸ್ಪರ್ಧಿಯೊಬ್ಬರು ಮತಗಟ್ಟೆ ಸಮೀಪವೇ ಮತದಾರರಿಗೆ ಟೀ ವಿತರಣೆಯ ವ್ಯವಸ್ಥೆ ಮಾಡಿದ್ದರು. ಹುಕ್ಕೇರಿ ತಾಲ್ಲೂಕಿನ  ಝಾಂಗಟಿಹಾಳ ಸೇರಿದಂತೆ ಹಲವೆಡೆ ಅಭ್ಯರ್ಥಿಗಳು ಮತದಾರರನ್ನು ಕರೆತರಲು ಹಾಗೂ ಕರೆದೊಯ್ಯಲು ವಾಹನದ ವ್ಯವಸ್ಥೆ ಮಾಡಿದ್ದರು.

ಬೆಳಿಗ್ಗೆ 7ರಿಂದಲೇ ಮತದಾನಕ್ಕೆ ಅವಕಾಶ ಇತ್ತಾದರೂ ಬಹುತೇಕ ಕಡೆಗಳಲ್ಲಿ ಚಳಿಯಿಂದಾಗಿ ತಡವಾಗಿ ಜನರು ಮತಗಟ್ಟೆಗೆ ಬರಲು ಆರಂಭಿಸಿದರು. ಬಿಸಿಲು ಏರುತ್ತಿದ್ದಂತೆಯೇ ಸಂಖ್ಯೆ ಜಾಸ್ತಿ ಇತ್ತು. ಮಧ್ಯಾಹ್ನ ಅಲ್ಲಲ್ಲಿ ಹೆಚ್ಚಿನ ಜನರು ಕಂಡುಬಂದರು. ಸಂಜೆ ವೇಳೆಗೆ ಬಿರುಸಿನ ಮತದಾನ ನಡೆಯುತ್ತಿದ್ದುದು  ಕಂಡು ಬಂತು. ಮತಗಟ್ಟೆ ಸಮೀಪದ ಹೋಟೆಲ್‌ಗಳು, ಧಾಬಾಗಳು, ಉಪಾಹಾರ ಮಂದಿರಗಳಲ್ಲಿ ಜನರು ತುಂಬಿ ಹೋಗಿದ್ದರು.

ಯುವಜನರೊಂದಿಗೆ ಅಲ್ಲಲ್ಲಿ ವೃದ್ಧರು ಉತ್ಸಾಹದಿಂದ ಮತಗಟ್ಟೆಗೆ ಬಂದು ಹಕ್ಕು ಚಲಾಯಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಕೆಲವು ವೃದ್ಧರು ಮಕ್ಕಳು  ಅಥವಾ ಮೊಮ್ಮಕ್ಕಳ ಸಹಾಯದೊಂದಿಗೆ ಬಂದು ಮತದಾನ ಮಾಡಿ ಕರ್ತವ್ಯ ಪ್ರಜ್ಞೆ ಮೆರೆದರು. ಮತಗಟ್ಟೆಗಳಿಗೆ ಬರುವ ವೃದ್ಧರು, ಅಂಗವಿಕಲರು ಅಥವಾ ಅಶಕ್ತರ ಅನುಕೂಲಕ್ಕೆಂದು ವ್ಹೀಲ್‌ಚೇರ್‌ ವ್ಯವಸ್ಥೆಯನ್ನು ಮಾಡಲಾಗಿತ್ತು.

ಕಾಕತಿ ಮತಗಟ್ಟೆಗೆ ಜಿಲ್ಲಾಧಿಕಾರಿ ಭೇಟಿ

ತಾಲ್ಲೂಕಿನ ಕಾಕತಿ ಗ್ರಾಮದ ಸರ್ಕಾರಿ ಶಾಲೆಯ ಮತಗಟ್ಟೆಗೆ ಜಿಲ್ಲಾ ಚುನಾವಣಾ ಅಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಭೇಟಿ ನೀಡಿ ಪರಿಶೀಲಿಸಿದರು.

‘ಚುನಾವಣಾ ಅಕ್ರಮಕ್ಕೆ ಅವಕಾಶ ನೀಡಬಾರದು. ಕೋವಿಡ್ ಭೀತಿ ಇರುವುದರಿಂದ ಸುರಕ್ಷತಾ ಕ್ರಮಗಳನ್ನು ಪಾಲಿಸಬೇಕು. ಅಂತರ ಕಾಯ್ದುಕೊಳ್ಳಬೇಕು. ಮತದಾರರೂ ಅದನ್ನು ಪಾಲಿಸುವಂತೆ ನೋಡಿಕೊಳ್ಳಬೇಕು’ ಎಂದು ಸಿಬ್ಬಂದಿಗೆ ಸೂಚಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು