ಬೆಳಗಾವಿ: ಇಲ್ಲಿನ ಟಿಳಕವಾಡಿಯ ಸೋಮವಾರ ಪೇಟೆಯ ‘ಸ್ನೇಹವಾಸ್ತು’ ಅಪಾರ್ಟ್ಮೆಂಟ್ ಪ್ರತಿವರ್ಷ ಬೇಸಿಗೆ ಆರಂಭದಲ್ಲೇ ಜಲಬವಣೆಯಿಂದ ತತ್ತರಿಸುತ್ತಿತ್ತು. ಹಲವು ದಶಕಗಳ ಹಿಂದೆ ಕೊರೆಯಿಸಿದ ಬಾವಿಯು ಸೂರ್ಯನ ಆರ್ಭಟ ಹೆಚ್ಚುತ್ತಲೇ ಬತ್ತುತ್ತಿತ್ತು. ಆದರೆ, ಈ ವರ್ಷ ಏಪ್ರಿಲ್ ಮೊದಲ ವಾರ ಬಂದರೂ ಬಾವಿಯಲ್ಲಿ ಸಂಗ್ರಹವಿರುವ ನೀರು, 20ಕ್ಕೂ ಅಧಿಕ ಕುಟುಂಬದವರ ಅಗತ್ಯತೆ ಪೂರೈಸುತ್ತಿದೆ. ಇದಕ್ಕೆ ಕಾರಣ ಮಳೆ ನೀರು ಸಂಗ್ರಹ ಘಟಕ.

ಹೌದು. ದುಬೈನಲ್ಲಿ 20 ವರ್ಷ ದುಡಿದು ಈಗ ಬೆಳಗಾವಿಗೆ ಬಂದು ಖಾಸಗಿ ಮ್ಯುಚುವಲ್ ಫಂಡ್ನಲ್ಲಿ ಸಹಾಯಕ ಉಪಾಧ್ಯಕ್ಷರಾಗಿ ಕೆಲಸ ಮಾಡುತ್ತಿರುವ ಹರೀಶ ಸದಾನಂದ ತೇರಗಾಂವಕರ ತಾವು ವಾಸಿಸುತ್ತಿರುವ ಈ ಅಪಾರ್ಟ್ಮೆಂಟ್ನಲ್ಲಿ ಕಳೆದ ವರ್ಷ ಮಳೆ ನೀರು ಸಂಗ್ರಹ ಘಟಕ ಅಳವಡಿಸಿದರು.

ಪ್ರತಿ ಮಳೆಗಾಲದಲ್ಲಿ ಟೇರೆಸ್ ಮೇಲೆ ಬಿದ್ದು ವ್ಯರ್ಥವಾಗಿ ಹರಿದುಹೋಗುತ್ತಿದ್ದ ಸುಮಾರು 3 ಲಕ್ಷ ಲೀಟರ್ ನೀರನ್ನು ಒಂದೆಡೆ ಸೇರಿಸಿ, ನೈಸರ್ಗಿಕ ಫಿಲ್ಟರ್ ಮೂಲಕ ಬಾವಿ ಸೇರುವಂತೆ ಮಾಡಿದರು. ಇದರಿಂದಾಗಿ ಬಿರು ಬೇಸಿಗೆಯಲ್ಲೂ ಬಾವಿಯಲ್ಲಿ ಜೀವಜಲ ತುಂಬಿಕೊಂಡಿದೆ.

ಅಷ್ಟಕ್ಕೆ ಸುಮ್ಮನಾಗದ ಹರೀಶ, ತಮ್ಮ ಬಡಾವಣೆ ಜನರು ಮತ್ತು ಸ್ನೇಹಿತರಿಗೆ ಮಳೆ ನೀರು ಸಂಗ್ರಹದ ಮಹತ್ವ ಸಾರುತ್ತಿದ್ದಾರೆ. ಕಾಲೇಜುಗಳಿಗೆ ತೆರಳಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಮಾರ್ಗದರ್ಶನ ನೀಡುತ್ತಿದ್ದಾರೆ. ಹಾಗಾಗಿ ಈ ಬಡಾವಣೆ ಮತ್ತು ವಡಗಾವಿಯ ಸರಾಫ್ ಕಾಲೊನಿಯ ಎಂಟು ಕುಟುಂಬದವರು ತಮ್ಮ ಮನೆ ಮತ್ತು ಅಪಾರ್ಟ್ಮೆಂಟ್ಗಳಲ್ಲಿ ಮಳೆನೀರು ಸಂಗ್ರಹ ಘಟಕ ಅಳವಡಿಸಿಕೊಂಡು ಯಶ ಕಂಡಿದ್ದಾರೆ.

ಈಗಲೂ ಬಾವಿ ನೀರೇ ಆಸರೆ: ‘ಬಾವಿ ಬತ್ತಿದ್ದರಿಂದ 2024ರಲ್ಲಿ ಫೆಬ್ರುವರಿ 15ರಂದು ಮೊದಲ ಟ್ಯಾಂಕರ್ ತರಿಸಿದ್ದೆವು. ಎಲ್ ಆ್ಯಂಡ್ ಟಿ ಕಂಪನಿಯವರು ಕುಡಿಯಲು ನೀರು ಪೂರೈಸಿದರೆ, ಬಳಕೆಗಾಗಿ ಮಳೆಗಾಲದ ಆರಂಭದವರೆಗೂ ಖಾಸಗಿಯವರಿಂದ ಪ್ರತಿದಿನ ಎರಡು ಟ್ಯಾಂಕರ್ ನೀರು ತರಿಸುತ್ತಿದ್ದೆವು. ಇದಕ್ಕೆ ₹1,400 ವೆಚ್ಚವಾಗುತ್ತಿತ್ತು. ಆದರೆ, ಒಂದೇ ಬಾರಿ ₹10 ಸಾವಿರ ವ್ಯಯಿಸಿ ಮಳೆ ನೀರು ಸಂಗ್ರಹ ಘಟಕ ಅಳವಡಿಸಿದ್ದರಿಂದ ಈವರೆಗೂ ಟ್ಯಾಂಕರ್ ಮೊರೆ ಹೋಗುವುದು ತಪ್ಪಿದೆ’ ಎಂದು ಹರೀಶ ತೇರಗಾಂವಕರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಭವಿಷ್ಯದಲ್ಲಿ ಭೂಮಿ ಅಥವಾ ಹಣಕ್ಕಿಂತ, ನೀರಿಗಾಗಿಯೇ ಯುದ್ಧ ನಡೆಯುವ ಸಾಧ್ಯತೆ ಇದೆ. ಹಾಗಾಗಿ ಹನಿ ನೀರು ವ್ಯರ್ಥವಾಗದಂತೆ ನೋಡಿಕೊಳ್ಳುತ್ತಿದ್ದೇನೆ. ಯಾರೇ ಇಂಥ ಘಟಕ ಅಳವಡಿಕೆಗೆ ಮುಂದೆಬಂದರೆ, ಉಚಿತವಾಗಿಯೇ ಸಲಹೆ, ಮಾರ್ಗದರ್ಶನ ನೀಡುತ್ತಿದ್ದೇನೆ’ ಎಂದರು.

‘ಮಳೆ ನೀರು ಸಂಗ್ರಹದ ಬಗ್ಗೆ ಜನರಿಗೆ ಸರಿಯಾಗಿ ತಿಳಿವಳಿಕೆ ಇಲ್ಲ. ಒಂದುವೇಳೆ ಪ್ರತಿಯೊಬ್ಬರೂ ಮಳೆ ನೀರು ಸಂಗ್ರಹಿಸಿದರೆ, ಬೇಸಿಗೆಯಲ್ಲಿ ಪರದಾಡುವುದು ಸ್ವಲ್ಪವಾದರೂ ತಪ್ಪುತ್ತದೆ. ಇದರಲ್ಲಿ ನಾನೂ ಸಫಲವಾಗಿದ್ದೇನೆ’ ಎನ್ನುತ್ತಾರೆ ಟಿಳಕವಾಡಿಯಲ್ಲಿ ಜಲ ಸಂರಕ್ಷಣೆ ಜಾಗೃತಿಯಲ್ಲಿ ತೊಡಗಿರುವ ಸತೀಶ ಕುಲಕರ್ಣಿ.

‘ಪ್ರತಿವರ್ಷ ಜನವರಿಯಲ್ಲಿ ನಮ್ಮ ಮನೆಯಲ್ಲಿನ ಬಾವಿ ಬತ್ತುತ್ತಿತ್ತು. ಹರೀಶ ಮಾರ್ಗದರ್ಶನದಲ್ಲಿ ಬಾವಿ ಸ್ವಚ್ಛಗೊಳಿಸಿ, ಕಳೆದ ವರ್ಷ ಮಳೆ ನೀರು ಸಂಗ್ರಹಕ್ಕೆ ಮುಂದಾದೆವು. ಹಾಗಾಗಿ ಈಗಲೂ ಬಾವಿಯಲ್ಲಿ ನೀರು ಲಭ್ಯವಿದೆ’ ಎಂದರು ವಿಜಯ ಕಾಮತ.

ಮಳೆ ನೀರು ಸಂಗ್ರಹ ವಿಷಯವಾಗಿ ಸಾಮಾಜಿಕ ಆಂದೋಲನ ನಡೆಸಲು ಮುಂದಾಗಿದ್ದೇವೆ. ಬೆಳಗಾವಿಯ ವಿವಿಧ ಬಡಾವಣೆಗಳಲ್ಲಿ ಮನೆ–ಮನೆಗೆ ತೆರಳಿ ಜನರಿಗೆ ಜಾಗೃತಿ ಮೂಡಿಸಲಿದ್ದೇವೆ
ಹರೀಶ ತೇರಗಾಂವಕರ ಸ್ಥಳೀಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.