ಮಂಗಳವಾರ, 26 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂದಿನ ವರ್ಷ ನೀರಾವರಿಗೆ ಆದ್ಯತೆ: ಸಿದ್ದರಾಮಯ್ಯ

Published 11 ಆಗಸ್ಟ್ 2023, 14:23 IST
Last Updated 11 ಆಗಸ್ಟ್ 2023, 14:23 IST
ಅಕ್ಷರ ಗಾತ್ರ

ಕೊಕಟನೂರ (ಅಥಣಿ ತಾ): ‘ಅಥಣಿ ಹಾಗೂ ಕಾಗವಾಡ ತಾಲ್ಲೂಕಿನ ರೈತರ ಅನುಕೂಲಕ್ಕಾಗಿ ನೀರಾವರಿ ಯೋಜನೆಗೆ ಆದ್ಯತೆ ನೀಡಬೇಕು ಎಂದು ಶಾಸಕರು ಕೋರಿದ್ದಾರೆ. ಈ ವರ್ಷ ಆರ್ಥಿಕ ಹೊಂದಾಣಿಕೆ ಮಾಡುತ್ತಿದ್ದೇನೆ. ಮುಂದಿನ ವರ್ಷ ರೈತರ ಕನಸು ಈಡೇರಿಸುತ್ತೇನೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.

ಅಥಣಿ ತಾಲ್ಲೂಕಿನ ಕೊಕಟನೂರಿನಲ್ಲಿ ಶುಕ್ರವಾರ ಬಾವುರಾವ್‌ ದೇಶಪಾಂಡೆ ಪಶು ವೈದ್ಯಕೀಯ ಕಾಲೇಜು ಉದ್ಘಾಟಿಸಿ, ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

‘ಚುನಾವಣೆ ವೇಳೆ ನಾವು ನೀಡಿದ 76 ಭರವಸೆಗಳನ್ನು ಈಡೇರಿಸುವ ಹೆಜ್ಜೆ ಇಟ್ಟಿದ್ದೇವೆ. ಐದು ಗ್ರಾರಂಟಿಗಳ ಅನುಷ್ಠಾನ ಭರದಿಂದ ಸಾಗಿದೆ. ಡಿಸೆಂಬರ್‌ ವೇಳೆ ಇದು ಮುಗಿಯಲಿದೆ. ನಂತರ ಈ ಭಾಗದ ನೀರಾವರಿ ಯೋಜನೆಗಳನ್ನು ಪೂರೈಸಿ, ರೈತರ ಬದುಕು ಹಸನು ಮಾಡಿ ತೋರಿಸುತ್ತೇನೆ’ ಎಂದರು.

‘ಗ್ಯಾರಂಟಿ ಅನುಷ್ಠಾನ ಮಾಡಿದ್ದು ಬೆಜೆಪಿ ಹಾಗೂ ಜೆಡಿಎಸ್‌ ನಾಯಕರು ಹೊಟ್ಟೆಕಿಚ್ಚು ಪಡುವಂತಾಗಿದೆ. ಯಾವುದೇ ಸತ್ವ ಇಲ್ಲದ ಆರೋಪ ಮಾಡುತ್ತಿದ್ದಾರೆ. ಏನೇ ಆದರೂ ಕೊಟ್ಟ ಎಲ್ಲ ಮಾತುಗಳನ್ನು ನಾನು ಈಡೇರಿಸುತ್ತೇನೆ’ ಎಂದು ಹೇಳಿದರು.

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಮಾತನಾಡಿ, ‘ಅಥಣಿ ಹಾಗೂ ಕಾಗವಾಡ ತಾಲ್ಲೂಕುಗಳಲ್ಲಿ ಏತ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಬೇಡಿಕೆ ಇಟ್ಟಿದ್ದು ಸೂಕ್ತವಾಗಿದೆ. ಇದು ಶಾಸಕರ ಬೇಡಿಕೆ ಅಲ್ಲ; ಜನರ ಬೇಡಿಕೆ. ಆದ್ದರಿಂದ ತುಸು ಸಮಯ ತೆಗೆದುಕೊಂಡಾದರೂ ಈಡೇರಿಸುತ್ತೇವೆ’ ಎಂದರು.

ಪಶುಸಂಗೋಪನೆ ಮತ್ತು ರೇಷ್ಮೆ ಸಚಿವ ಕೆ.ವೆಂಕಟೇಶ್‌ ಮಾತನಾಡಿ, ‘ಈ ಭಾಗದಲ್ಲಿ ರೈತ ಸಮುದಾಯ ದೊಡ್ಡ ಸಂಖ್ಯೆಯಲ್ಲಿದೆ. ಇದರಿಂದ ಪಶು ವೈದ್ಯಕೀಯ ಕಾಲೇಜು ಹೆಚ್ಚು ಪ್ರಯೋಜನವಾಗಲಿದೆ. ಸದ್ಯ ವೈದ್ಯರು, ಔಷಧಿಗಳ ಕೊರತೆಯ ಮಧ್ಯೆಯೂ ಪಶುಸಂಗೋಪನೆ ಇಲಾಖೆಯ ಉತ್ತಮ ಸೇವೆ ಒದಗಿಸುತ್ತಿದೆ’ ಎಂದರು.

‘ರಾಜ್ಯದಲ್ಲಿಯೇ ಅತೀ ಹೆಚ್ಚು ಜಾನುವಾರು ಹೊಂದಿದ ಜಿಲ್ಲೆ ಬೆಳಗಾವಿ. ಇಲ್ಲಿ 29 ಲಕ್ಷ ಜಾನುವಾರು ಇವೆ. ಹಾಲಿನ ಉತ್ಪಾದನೆ ಕೂಡ ಹೆಚ್ಚಿದೆ. ಇದನ್ನು ಪರಿಗಣಿಸಿ ಇನ್ನಷ್ಟು ಸೇವೆ ಒದಗಿಸಲು ಬದ್ಧ’ ಎಂದು ಭರವಸೆ ನೀಡಿದರು.

ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು, ಸರ್ಕಾರದ ಮುಖ್ಯ ಸಚೇತಕ ಅಶೋಕ ಪಟ್ಟಣ, ವಿಧಾನ ಪರಿಷತ್‌ ಸದಸ್ಯರಾದ ಚನ್ನರಾಜ ಹಟ್ಟಿಹೊಳಿ, ಪ್ರಕಾಶ ಹುಕ್ಕೇರಿ, ಶಾಸಕರಾದ ಮಹೇಂದ್ರ ತಮ್ಮಣ್ಣವರ, ಬಾಬಾಸಾಹೇಬ ಪಾಟೀಲ, ಕೊಕಟನೂರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಾನವ್ವ ಪೂಜಾರಿ ಹಾಗೂ ಅಧಿಕಾರಿಗಳು ಇದ್ದರು. ಜಿಲ್ಲಾಧಿಕಾರಿ ನಿತೇಶ್‌ ಪಾಟೀಲ ಸ್ವಾಗತಿಸಿದರು.

*

ಲಕ್ಷ್ಮೀ ಅಕ್ಕ– ಲಕ್ಷ್ಮಣ ಅಣ್ಣ...

‘ಚುನಾವಣೆ ಸಂದರ್ಭದಲ್ಲಿ ಅಥಣಿ ಹಾಗೂ ಬೆಳಗಾವಿ ಗ್ರಾಮೀಣ ಕ್ಷೇತ್ರಗಳತ್ತ ಇಡೀ ರಾಜ್ಯದ ಜನ ಕಣ್ಣಿಟ್ಟಿದ್ದರು. ಅಲ್ಲಿ ಲಕ್ಷ್ಮೀ ಅಕ್ಕಂದು ಏನಾಗುತ್ತದೆ, ಇಲ್ಲಿ ಲಕ್ಷ್ಮಣ ಅಣ್ಣಂದು ಏನಾಗುತ್ತದೆ ಎಂದು ತಲೆ ಕೆಡಿಸಿಕೊಂಡಿದ್ದರು. ಆದರೆ, ಮತದಾರರು ನಿಜವಾದ ದೇವರು. ಸರಿಯಾದ ತೀರ್ಪು ನೀಡಿದರು’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಹಾಸ್ಯ ಚಟಾಕಿ ಹಾರಿಸಿದರು.

ಪಶು ವೈದ್ಯಕೀಯ ಕಾಲೇಜು ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ‘ನಮ್ಮ ಗುರಿ ಇಷ್ಟಕ್ಕೆ ಮುಗಿದಿಲ್ಲ. ಮುಂಬರುವ ಲೋಕಸಭೆ ಚುನಾವಣೆ, ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿಗಳಲ್ಲೂ ಕಾಂಗ್ರೆಸ್‌ ಗೆಲ್ಲಬೇಕಿದೆ’ ಎಂದರು.

‘ಇದೇ 27ರಂದು ಬೆಳಗಾವಿಯಲ್ಲಿ ಗೃಹಲಕ್ಷ್ಮೀ ಯೋಜನೆ ಉದ್ಘಾಟನೆಯಾಗುತ್ತಿದೆ. ಜಿಲ್ಲೆಯಲ್ಲಿ ಒಟ್ಡು 11.88 ಲಕ್ಷ ಫಲಾನುಭವಿಗಳಿದ್ದು, 9.88 ಲಕ್ಷ ಮಹಿಳೆಯರು ಈಗಾಗಲೇ ನೋಂದಣಿ ಮಾಡಿಕೊಂಡಿದ್ದಾರೆ’ ಎಂದೂ ತಿಳಿಸಿದರು.

*

70 ಸಾವಿರ ಎಕರೆ ನೀರಾವರಿಗೆ ಮನವಿ

‘ಅಥಣಿ ಕ್ಷೇತ್ರದಲ್ಲಿ ಇನ್ನೂ 70 ಸಾವಿರ ಎಕರೆ ಜಮೀನಿಗೆ ನೀರಾವರಿ ಬೇಕಿದೆ. ಕೃಷ್ಣೆಯಿಂದ ಮುಳುಗಡೆಯಾಗುವ ಹಳ್ಳಿಗಳ ಸ್ಥಳಾಂತರ ಬಾಕಿ ಇದೆ. ಸವಳು– ಜವಳು ಸಮಸ್ಯೆ ಇದೆ. ಇದೆಲ್ಲವನ್ನೂ ನೀಗಿಸಬೇಕು’ ಎಂದು ಶಾಸಕ ಲಕ್ಷ್ಮಣ ಸವದಿ ಮನವಿ ಮಾಡಿದರು.

ಪಶು ವೈದ್ಯಕೀಯ ಕಾಲೇಜು ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ಕ್ಷೇತ್ರದಲ್ಲಿ ಕೃಷಿ ಮಹಾವಿದ್ಯಾಲಯ ಸ್ಥಾಪನೆಗೆ ತಕ್ಷಣಕ್ಕೆ ₹20 ಕೋಟಿ ಒದಗಿಸಬೇಕು. ಈ ಭಾಗದಲ್ಲಿ ದ್ರಾಕ್ಷಿ ಬೆಳೆಯುವವರು ಹೆಚ್ಚು. ಒಣದ್ರಾಕ್ಷಿಯನ್ನು ಖರೀದಿಸಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಪೌಷ್ಟಿಕ ಆಹಾರವಾಗಿ ನೀಡಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT