ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಗಾಂಧಿ ತತ್ವಗಳ ಪಾಲನೆ ಸಮಸ್ಯೆಗಳಿಗೆ ಪರಿಹಾರ'–ಸದಾಶಿವ ಬಾಪುಸಾಹೇಬ ಭೋಸಲೆ ಮಾತುಗಳು

Last Updated 15 ಏಪ್ರಿಲ್ 2021, 6:37 IST
ಅಕ್ಷರ ಗಾತ್ರ

ಸ್ವಾತಂತ್ರ್ಯ ಹೋರಾಟಗಾರ, ಮಾಜಿ ಶಾಸಕ ಹಾಗೂ ಅಪ್ಪಟ ಗಾಂಧಿವಾದಿಯಾಗಿದ್ದ ಸದಾಶಿವರಾವ ಬಾಪುಸಾಹೇಬ ಭೋಸಲೆ (101) ವಯೋಸಹಜ ಅನಾರೋಗ್ಯದಿಂದ ತಾಲ್ಲೂಕಿನ ಕಡೋಲಿ ಗ್ರಾಮದ ಸ್ವಗೃಹದಲ್ಲಿ ಗುರುವಾರ ಮುಂಜಾನೆ ನಿಧನರಾದರು.

ಗಾಂಧಿ ತ್ವತಗಳ ಪಾಲನೆಯ ಕುರಿತು ಅವರ ಮಾತುಗಳು ಇಲ್ಲಿವೆ–

ಮಹಾತ್ಮ‌ ಗಾಂಧೀಜಿ ಅವರು ಪ್ರತಿಪಾದಿಸಿದ ವಿಚಾರಗಳು ಹಾಗೂ ಅವರ ಆದರ್ಶಗಳು ಇಂದಿಗೂ ಪ್ರಸ್ತುತವಾಗಿವೆ. ಅದರಲ್ಲಿ ಅನುಮಾನವೇ ಬೇಡ. ಅಂತಹ ಸಾರ್ವಕಾಲಿಕ ಸತ್ಯಗಳನ್ನು ಅವರು ಹೇಳಿದ್ದಾರೆ. ಅವುಗಳನ್ನು ಪಾಲಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.

ಆದರೆ, ಪ್ರಸ್ತುತ ದಿನಗಳಲ್ಲಿ ಅವರನ್ನು ಮರೆಯುತ್ತಿರುವುದೇ ಹಲವು ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಇದರಿಂದಾಗಿ ಇಂದಿನ ವಾತಾವರಣ ನನ್ನಂತಹ ಗಾಂಧಿ ಅನುಯಾಯಿಗಳಿಗೆ ಸಮಾಧಾನ ತರಿಸುತ್ತಿಲ್ಲ. ಆದರೆ, ನಾನು ನಿರಾಶಾವಾದಿಯಲ್ಲ. ಎಲ್ಲರೂ ಮನಸ್ಸು ಮಾಡಿದರೆ ಗಾಂಧೀಜಿ ಬಯಸಿದ ಗ್ರಾಮ ಸ್ವರಾಜ್ಯದ ಕನಸನ್ನು ನನಸು ಮಾಡುವುದಕ್ಕೆ ಇಂದಿಗೂ ಬಹಳಷ್ಟು ಅವಕಾಶಗಳಿವೆ.

ಗಾಂಧೀಜಿ ಬಯಸಿದ ಸಮಾಜ ನಿರ್ಮಾಣವಾಗದೇ ಇರುವುದಕ್ಕೆ ವಿಷಾದವಿದೆ. ಸತ್ಯದ ಬದಲು ಅಸತ್ಯ, ಅಹಿಂಸೆಯ ಬದಲಿಗೆ ಹಿಂಸೆ ತಾಂಡವವಾಡುತ್ತಿದೆ. ಸ್ವದೇಶಿ ಚಿಂತನೆ ಕಡಿಮೆಯಾಗುತ್ತಿದೆ. ಸತ್ಯದಿಂದ ನಡೆಯುತ್ತೇವೆ ಎಂದು ಎಲ್ಲರೂ ಸಂಕಲ್ಪ ತೊಡುವುದಕ್ಕೆ ಇದು ಸಕಾಲವಾಗಿದೆ.

ದೇಶದ ಅಲ್ಲಲ್ಲಿ ಸ್ವಚ್ಛತಾ ಅಭಿಯಾನವನ್ನು ಪರಿಣಾಮಕಾರಿಯಾಗಿ ನಡೆಸುತ್ತಿರುವುದು, ಸ್ವಚ್ಛತೆ ಬಗ್ಗೆ ಮಾತನಾಡುತ್ತಿರುವುದು ಒಳ್ಳೆಯದೇ. ಆದರೆ, ಸರ್ಕಾರಗಳಿಂದ ಮಾತ್ರವೇ ಸಾಧ್ಯವಾಗಬಹುದಾದ ಕಾರ್ಯವಿದಲ್ಲ. ಎಲ್ಲರೂ ಕೈಜೋಡಿಸಬೇಕು. ಮನೆ, ಪ್ರದೇಶ, ಊರುಗಳನ್ನು ಸ್ವಚ್ಛವಾಗಿಟ್ಟುಕೊಂಡರೆ ಇಡೀ ದೇಶ ಸ್ವಚ್ಛವಾಗುತ್ತದೆ. ಶಿಸ್ತು ಹಾಗೂ ಸ್ವಚ್ಛತೆ ದೇಶದ ಅಭಿವೃದ್ಧಿಗೆ ಅತ್ಯಂತ ಪ್ರಮುಖವಾದವು ಎನ್ನುವುದನ್ನು ಮರೆಯಬಾರದು.

ಹಿಂಸೆ ಮಾಡುವುದು ಯೋಗ್ಯವಾದುದಲ್ಲ. ಅದು ದೈಹಿಕ ಹಿಂಸೆ ಇರಬಹುದು; ಮಾನಸಿಕವಾದುದು ಇರಬಹುದು. ಅಹಿಂಸೆಯಿಂದ ಎಲ್ಲವನ್ನೂ ಗಳಿಸಬಹುದು. ಇದಕ್ಕೆ ಗಾಂಧೀಜಿ ಹಾಗೂ ವಿನೋಬಾ ಭಾವೆ ನಿದರ್ಶನವಾಗಿದ್ದಾರೆ. ಆದರೆ, ಇಂದು ಎಲ್ಲೆಡೆ ಹಿಂಸೆ ನಡೆಯುತ್ತಿದೆ. ಇದನ್ನು ಹೋಗಲಾಡಿಸಬೇಕಾದರೆ ಅಲ್ಲಿ ಗಾಂಧೀಜಿಯವರ ತತ್ವಗಳ ಪಾಲನೆ ಆಗಬೇಕಾಗುತ್ತದೆ. ಅವರ ವಿಚಾರಗಳು ಪ್ರಸ್ತುತವಾಗಿವೆ ಎನ್ನುವುದು ಈ ಕಾರಣದಿಂದಲೇ.

ಗ್ರಾಮ ಸ್ವರಾಜ್ಯ ಎನ್ನುವುದು ಸುಲಭವಾಗಿ ಆಗುವುದಿಲ್ಲ. ಏಕೆಂದರೆ ಅಲ್ಲಿ ಗುಡಿ ಕೈಗಾರಿಕೆಗಳಿಲ್ಲ; ಜನರಿಗೆ ಕೆಲಸ ಸಿಗುತ್ತಿಲ್ಲ. ಕೃಷಿಯೊಂದರಿಂದಲೇ ಎಲ್ಲರಿಗೂ ಕೆಲಸ ಸಿಗುವಂತಹ ವಾತಾವರಣ ಈಗಿಲ್ಲ. ಹೀಗಾಗಿ, ಜನರು ನಗರಗಳತ್ತ ಹೋಗುತ್ತಿದ್ದಾರೆ. ಇದು ತಪ್ಪು ಎಂದು ಹೇಳುವುದಕ್ಕೂ ಬರುವುದಿಲ್ಲ. ಅವರಿಗೆ ಹಳ್ಳಿಗಳಲ್ಲೇ ಬದುಕು ಇದೆ ಎಂದು ಎನಿಸಿದ್ದರೆ ಅಲ್ಲಿಯೇ ಉಳಿಯುತ್ತಿದ್ದರಲ್ಲವೇ? ಇದಕ್ಕಾಗಿ ಸರ್ಕಾರಗಳು ಹಳ್ಳಿಗಳನ್ನು ಸುಸ್ಥಿರ ಅಭಿವೃದ್ಧಿಯೆಡೆಗೆ ತೆಗೆದುಕೊಂಡು ಹೋಗಬೇಕು. ಇದಕ್ಕೆ ಪೂರಕವಾದ ಕಾರ್ಯಕ್ರಮಗಳನ್ನು ಜಾರಿಗೊಳಿಸಬೇಕು. ಹಳ್ಳಿಗಳಲ್ಲಿದ್ದುಕೊಂಡು ಸ್ವಾವಲಂಬಿಯಾಗಿ ಬದುಕಬಹುದು ಎನ್ನುವ ವಿಶ್ವಾಸವನ್ನು ಅವರಲ್ಲಿ ತುಂಬಬೇಕು. ಅಧಿಕಾರವನ್ನೂ ಕೊಡಬೇಕು. ಆಗ ಗ್ರಾಮ ಸ್ವರಾಜ್ಯದ ಪರಿಕಲ್ಪನೆ ಸಾಕಾರಗೊಳ್ಳುತ್ತದೆ. ಸ್ವಾವಲಂಬನೆಯೂ ಸಾಧ್ಯವಾಗುತ್ತದೆ. ಸ್ವದೇಶಿ ಚಿಂತನೆಗಳೂ ಬೆಳೆಯುತ್ತವೆ.

ಸ್ವಾಭಿಮಾನ, ಸ್ವರಾಜ್ಯ ಹಾಗೂ ಸ್ವಚ್ಛತೆಯಿಂದ ಸಮಾಜದಲ್ಲಿ ಬದಲಾವಣೆ ತರುವುದಕ್ಕೆ ಸಾಧ್ಯವಿದೆ. ಆದರೆ, ಇಂದಿನ ಸಮಾಜದಲ್ಲಿ ಆ ವಿಚಾರಗಳನ್ನು ಅನುಷ್ಠಾನಗೊಳಿಸುವುದಕ್ಕೆ ಪೂರಕವಾದ ವಾತಾವರಣವಿಲ್ಲ. ಗಾಂಧೀಜಿ ಅವರನ್ನು ಸ್ಮರಿಸುತ್ತಾ, ಪಾಲಿಸುತ್ತಾ ಸಾಗಿದರೆ ಅವಕಾಶವಿದೆ. ಹೀಗಾಗಿ,ಇಂದಿನ ಯುವಜನರಿಗೆ ಗಾಂಧೀಜಿಯವರ ವಿಚಾರಧಾರೆಗಳನ್ನು ತಿಳಿಸಿಕೊಡಬೇಕು. ಸರಳ ಹಾಗೂ ಸುಸ್ಥಿರ ಬದುಕಿನ ಮಹತ್ವ ಹಾಗೂ ಜೀವನ ಮೌಲ್ಯಗಳನ್ನು ಪರಿಚಯಿಸಬೇಕು.

ಎರಡು ಬಾರಿ ಶಾಸಕ

ಸದಾಶಿವರಾವ ಬಾಪುಸಾಹೇಬ ಭೋಸಲೆ ಬೆಳಗಾವಿ ತಾಲ್ಲೂಕು ಕಡೋಲಿ ಗ್ರಾಮದವರು. ಅವರು ಗಾಂಧೀಜಿ ಹಾಗೂ ವಿನೋಬಾ ಭಾವೆ ಅವರ ವಿಚಾರಧಾರೆಗಳನ್ನು ಪಾಲಿಸುತ್ತಿದ್ದರು. ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದ್ದವರು. ಎರಡು ಬಾರಿ ಶಾಸಕರಾಗಿದ್ದವರು. 1954ರಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಭೂದಾನ ಚಳವಳಿಯಲ್ಲಿ ಪಾಲ್ಗೊಂಡಿದ್ದರು.

ಗ್ರಾಮದ ಜನರಿಗೆ ತಮ್ಮ 20 ಎಕರೆ ಜಮೀನು ದಾನವಾಗಿ ನೀಡಿದ್ದಾರೆ. ಸ್ವತಃ ಸಾವಯವ ಕೃಷಿ ಮಾಡುತ್ತಿದ್ದರು. ತಮಗೆ ಹಾಗೂ ಪತ್ನಿಗೆ ಬೇಕಾದ ಖಾದಿ ಬಟ್ಟೆಗಳನ್ನು ಚರಕದಲ್ಲಿ ಸ್ವತಃ ಸಿದ್ಧಪಡಿಸಿಕೊಳ್ಳುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT