ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಶರಣರ ವಿಚಾರಗಳು ಎಲ್ಲ ಕಾಲಕ್ಕೂ ಪ್ರಸ್ತುತ’

ಜೀವನದಲ್ಲಿ ಅಳವಡಿಸಿಕೊಳ್ಳಲು ಸಲಹೆ
Last Updated 12 ಫೆಬ್ರುವರಿ 2021, 14:05 IST
ಅಕ್ಷರ ಗಾತ್ರ

ಬೆಳಗಾವಿ: ‘ಶರಣರ ವಚನಗಳು ಎಲ್ಲ ಕಾಲಕ್ಕೂ ಪ್ರಸ್ತುತವಾಗಿವೆ. ಅವುಗಳನ್ನು ನಾವು ಅನುಕರಣೆಗೆ ತರುವುದು ಅತ್ಯಗತ್ಯವಾಗಿದೆ’ ಎಂದು ಪ್ರವಚನಕಾರ್ತಿ ಪ್ರೇಮಕ್ಕ ಅಂಗಡಿ ಹೇಳಿದರು.

ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದಿಂದ ಇಲ್ಲಿನ ಶಿವಬಸವನಗರದ ಲಿಂಗಾಯತ ಭವನದಲ್ಲಿ ಗುರುವಾರ ಆಯೋಜಿಸಿದ್ದ ಅಮವಾಸ್ಯೆ ಅನುಭಾವ ಚಿಂತನ ಗೋಷ್ಠಿಯಲ್ಲಿ ಅವರು ಮಾತನಾಡಿದರು.

‘12ನೇ ಶತಮಾನದ ಶರಣರ ವಚನಗಳು ಅನುಭಾವ ವೇದ್ಯವೆನಿಸಿವೆ. ಅವರು ಬದುಕಿನ ಎಲ್ಲ ಸತ್ಯಗಳನ್ನು ಅವಲೋಕಿಸಿದ್ದಾರೆ. ಜಾತಿ, ಮತ, ಪಂಥಗಳನ್ನು ಮೀರಿ ಬದುಕಿನ ನಿಜ ಧರ್ಮದ ಆಶಯಗಳನ್ನು ವ್ಯಕ್ತಪಡಿಸಿದ್ದಾರೆ. ಅದನ್ನು ನಾವು ಅರಿಯಬೇಕು’ ಎಂದು ತಿಳಿಸಿದರು.

‘ಆಧ್ಯಾತ್ಮ ಎನ್ನುವುದು ಮನದ ಹಸಿವಿನ ರೂಪ. ಅನುಭಾವದ ನೆಲೆಯಲ್ಲಿ ಅದನ್ನು ನೀಗಿಸಿಕೊಳ್ಳಬೇಕು. ಆತ್ಮಸಿದ್ಧಿ ಹೊಂದಿದಾಗ ಜೀವನದ ಅರ್ಥ ಹೆಚ್ಚುವುದೆಂದು ಮಾಚಿದೇವರು ಅದ್ಭುತವಾಗಿ ಪ್ರತಿಪಾದಿಸಿದ್ದಾರೆ. ಬಸವಣ್ಣನವರು ಇಂತಹ ನೂರಾರು ಶರಣರಿಗೆ ಸಮಾಜದಲ್ಲಿ ಸ್ಥಾನ ಕಲ್ಪಿಸಿ ಅವರ ಆಧ್ಯಾತ್ಮಿಕ ಉನ್ನತಿಯನ್ನು ಲೋಕಕ್ಕೆ ಪರಿಚಯಿಸಿದ್ದಾರೆ. ಬಸವಣ್ಣ ಸರ್ವಸಮಾನತೆಯ ಸಮಾಜ ಕಟ್ಟಿದ್ದು ಇಂದಿನ ಮನ್ವಂತರಕ್ಕೆ ಪ್ರಸ್ತುತವೆನಿಸಿದೆ’ ಎಂದರು.

ಕಾರಂಜಿ ಮಠದ ಗುರುಸಿದ್ಧ ಸ್ವಾಮೀಜಿ, ‘ಕೊರೊನಾ ನಮಗೆಲ್ಲ ಪಾಠ ಕಲಿಸಿದೆ. ದೇವರು-ಧರ್ಮ-ಅಧ್ಯಾತ್ಮವನ್ನು ಮರೆತ ಪ್ರತಿಫಲ ಹಾಗೂ ನವ ಜೀವನಶೈಲಿಯಿಂದ ನಾವೆಲ್ಲರೂ ಕಷ್ಟಪಡುವಂತಾಯಿತು’ ಎಂದು ತಿಳಿಸಿದರು.

‘ಆತ್ಮಾನುಭಾವ ಗಳಿಸುವುದು ಕಷ್ಟ. ನಮ್ಮ ಮನೋವಿಕಾರಗಳಿಗೆ ಶರಣರ ವಚನಗಳು ದಿವ್ಯೌಷಧಿಯಾಗಿವೆ. ಕೊರೊನಾ ಬಳಿಕ ಜನತೆಗೆ ಅಧ್ಯಾತ್ಮದ ಹಸಿವು ಹೆಚ್ಚಾಗಿದೆ. ಜೀವನದಲ್ಲಿ ಹಣ ಗಳಿಸಬಹುದು. ಆದರೆ, ಅಧ್ಯಾತ್ಮ ಗಳಿಸುವುದು ಕಷ್ಟ ಎನ್ನುವುದು ಗೊತ್ತಾಗಿದೆ. ಇಂತಹ ಶರಣ ಸತ್ಸಂಗದಲ್ಲಿ ಮನದ ಮೈಲಿಗೆ ತೊಳೆದುಕೊಳ್ಳಬಹುದು’ ಎಂದು ಹೇಳಿದರು.

ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷೆ ರತ್ನಪ್ರಭಾ ಬೆಲ್ಲದ, ‘ಕೋವಿಡ್ ಸಂದರ್ಭದಲ್ಲಿ ಮಹಾಸಭಾದಿಂದ ಆನ್‌ಲೈನ್‌ ಮೂಲಕ ಶರಣರ ವಿಚಾರಧಾರೆಗಳನ್ನು ಜನರಿಗೆ ಮುಟ್ಟಿಸುವ ಕೆಲಸ ಮಾಡಿದ್ದೇವೆ’ ಎಂದರು.

ಅಖಿಲ ಭಾರತ ವೀರಶೈವ ಮಹಾಸಭೆ ವಧು ವರ ಅನ್ವೇಷಣ ಕೇಂದ್ರದ ಅಧ್ಯಕ್ಷ ಡಾ.ಎಫ್.ವಿ. ಮಾನ್ವಿ, ವಕೀಲ ಎಂ.ಬಿ. ಝಿರಲಿ, ಜ್ಯೋತಿ ಭಾವಿಕಟ್ಟಿ, ಡಾ.ಗುರುದೇವಿ ಹುಲೆಪ್ಪನವರಮಠ, ಪ್ರೊ.ಎ.ಬಿ. ಕೊರಬು ಉಪಸ್ಥಿತರಿದ್ದರು.

ಉಮಾ ಸಂಗೀತ ಶಾಲೆಯ ಮಂಗಲಾ ಮಠದ ಹಾಗೂ ಸಂಗಡಿಗರು ವಚನ ಸಂಗೀತ ನಡೆಸಿಕೊಟ್ಟರು. ವೀರಭದ್ರ ಅಂಗಡಿ ಹಾಗೂ ಆಶಾ ಯಮಕನಮರಡಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT