ಮಂಗಳವಾರ, ಅಕ್ಟೋಬರ್ 19, 2021
23 °C

ಅಂಗವಿಕಲರಿಂದ ಜೀವನೋತ್ಸಾಹ ಕಲಿಯಬೇಕು: ಕೇಂದ್ರ ಸಚಿವ ಪ್ರಲ್ಹಾದ ಜೋಶಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ‘ಜೀವನೋತ್ಸಾಹವನ್ನು ಅಂಗವಿಕಲರಿಂದ ಕಲಿಯಬೇಕು’ ಎಂದು ಕೇಂದ್ರ ಸಂಸದೀಯ ವ್ಯವಹಾರ, ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಅಂಗವಿಕಲರು ಹಾಗೂ ಹಿರಿಯ‌ ನಾಗರಿಕರ ಸಬಲೀಕರಣ ಇಲಾಖೆ ಸಹಯೋಗದಲ್ಲಿ ಭಾರತೀಯ ಕೃತಕ ಅಂಗಾಂಗ ತಯಾರಿಕಾ ನಿಗಮ (ಅಲಿಂಕೋ) ಇಲ್ಲಿನ ರಾಮನಗರದ ವಿದ್ಯಾಧಿರಾಜ ಸಭಾಂಗಣದಲ್ಲಿ ಶನಿವಾರ ‘ವಯೋಶ್ರೀ ಯೋಜನೆ’ಯಲ್ಲಿ ಹಿರಿಯ ನಾಗರಿಕರಿಗೆ ಉಚಿತವಾಗಿ ಸಾಧನ ಸಲಕರಣೆಗಳ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಅನೇಕರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆದರೆ, ಅಂಗವಿಕಲರು ಆತ್ಮವಿಶ್ವಾಸದಿಂದ‌ ಜೀವನ ನಡೆಸುತ್ತಾರೆ. ವೈಕಲ್ಯ ಇರುವವರು ಆತ್ಮಹತ್ಯೆಗೆ ಶರಣಾದ ಉದಾಹರಣೆ ‌ಇಲ್ಲ. ಸಾಧನೆಗೆ ಚಿಂತಿಸುತ್ತಿರುತ್ತಾರೆ’ ಎಂದರು.

‘ಅಂಗವಿಕಲರು ಹಾಗೂ ಹಿರಿಯ ನಾಗರಿಕರ ರಕ್ಷಣೆಗೆ ಸರ್ಕಾರ ಬದ್ಧವಾಗಿದ್ದು, ಅನೇಕ‌ ಯೋಜನೆಗಳನ್ನು‌ ಜಾರಿಗೆ ತಂದಿದೆ. ಅವರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ವಿಶೇಷ ಕಾಳಜಿ ವಹಿಸಿದ್ದಾರೆ. ಅಂಗವಿಕಲರಿಗೆ ಶೇ.3ರಷ್ಟಿದ್ದ ಮೀಸಲಾತಿಯನ್ನು ಶೇ 4ಕ್ಕೆ ಹೆಚ್ಚಿಸಲಾಗಿದೆ’ ಎಂದರು.

ಹಲವು ನೆರವು: ‘ಸಾಮಾಜಿಕ ಮತ್ತು ಸಬಲೀಕರಣ ಇಲಾಖೆ ಹಾಗೂ ಅಲಿಂಕೋ ಸಂಸ್ಥೆಯ ಸಹಭಾಗಿತ್ವದಲ್ಲಿ ಇದುವರೆಗೆ 7ಸಾವಿರ ಶಿಬಿರಗಳನ್ನು ಆಯೋಜಿಸಿ, 9 ಲಕ್ಷ ಫಲಾನುಭವಿಗಳಿಗೆ ಸಾಧನ ಸಲಕರಣೆಗಳನ್ನು ಉಚಿತವಾಗಿ ವಿತರಿಸಲಾಗಿದೆ. ದೇಶದ 2,500ಕ್ಕೂ ಹೆಚ್ಚು ಸರ್ಕಾರಿ ಕಚೇರಿಗಳಲ್ಲಿ ಅಂಗವಿಕಲರ ಅನುಕೂಲಕ್ಕಾಗಿ ರ‍್ಯಾಂಪ್‌ಗಳನ್ನು ಮಾಡಿಸಲಾಗಿದೆ’ ಎಂದು ತಿಳಿಸಿದರು.

‘ಪ್ರಧಾ‌ನ ಮಂತ್ರಿಯು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಹಾಗೂ ಪರಿಸರ ಇಲಾಖೆಗಳಿಗೆ ಹೆಚ್ಚಿನ ಒತ್ತು ನೀಡಿದ್ದಾರೆ. ‌ಮೂಲ ಸೌಕರ್ಯಗಳಿಗೆ 100  ಲಕ್ಷ ಕೋಟಿ ರೂಪಾಯಿಯನ್ನು ನಮ್ಮ ಸರ್ಕಾರ ನೀಡಿದೆ. ಹಿಂದಿನ 10 ವರ್ಷಗಳಿಗೆ ಹೋಲಿಸಿದರೆ, ರೈಲ್ವೆಯಲ್ಲಿ ಶೇ 19ರಷ್ಟು ಹೆಚ್ಚಿನ ಪ್ರಗತಿ ಸಾಧಿಸಲಾಗಿದೆ’ ಎಂದರು.

ಬೆಳಗಾವಿ ಅಭಿವೃದ್ಧಿಗೆ ಸಹಕಾರ: ‘ಬೆಳಗಾವಿಯ ಅಭಿವೃದ್ಧಿಗೆ ಕೇಂದ್ರದಿಂದ ಸಂಪೂರ್ಣ ಸಹಕಾರ ನೀಡಲಾಗುವುದು. ಧಾರವಾಡ- ಬೆಳಗಾವಿ ರೈಲು ಮಾರ್ಗದ ಅನುಷ್ಠಾನಕ್ಕೆ ಕ್ರಮ ವಹಿಸಲಾಗುವುದು’ ಎಂದು ಭರವಸೆ ನೀಡಿದರು.

ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವ ಎ.ನಾರಾಯಣಸ್ವಾಮಿ ಮಾತನಾಡಿ, ‘ಇಂಡೋ-ಪಾಕ್ ಯುದ್ಧದಲ್ಲಿ ಅಂಗವಿಕಲರಾದವರಿಗೆ ಅವಶ್ಯ ಸಾಧನಗಳನ್ನು ನೀಡಲು ‘ಅಲಿಂಕೋ’ ಆರಂಭಿಸಲಾಯಿತು. ವಿದೇಶಗಳಿಂದ ಆಮದು ಮಾಡಿಕೊಳ್ಳದೆ ನಮ್ಮಲ್ಲೇ ಗುಣಮಟ್ಟದ ಸಾಧನಗಳನ್ನು ತಯಾರಿಸಲಾಗುತ್ತಿದೆ. ಅಂಗವಿಕಲರು ಮತ್ತು ಹಿರಿಯ ನಾಗರಿಕರ ಪರವಾಗಿ ಸರ್ಕಾರ ಸದಾ ಇರಲಿದೆ. ಜಿಲ್ಲೆಯಲ್ಲಿ ಪ್ರಸ್ತುತ 2,345 ಫಲಾನುಭವಿಗಳಿಗೆ ವಿವಿಧ ಉಪಕರಣಗಳನ್ನು ನೀಡಲಾಗುತ್ತಿದೆ’ ಎಂದು ಹೇಳಿದರು.

ಸಂಸದೆ ಮಂಗಲಾ ಅಂಗಡಿ ಮತ್ತು ಅಧ್ಯಕ್ಷತೆ ವಹಿಸಿದ್ದ ಉತ್ತರ ಮತಕ್ಷೇತ್ರದ ಶಾಸಕ ಅನಿಲ ಬೆನಕೆ ಮಾತನಾಡಿದರು.

ಕೃತಕ ‌ದಂತ ಪಂಕ್ತಿ, ಶ್ರವಣೋಪಕರಣ, ಗಾಲಿಕುರ್ಚಿ, ಊರುಗೋಲುಗಳನ್ನು ವಿತರಿಸಲಾಯಿತು.

ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಶಾಸಕರಾದ ಅಭಯ ಪಾಟೀಲ ಮತ್ತು ದುರ್ಯೋಧನ ಐಹೊಳೆ, ಬಿಜೆಪಿ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಸಂಜಯ ಪಾಟೀಲ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಬಸವರಾಜ ವರವಟ್ಟಿ, ಅಂಗವಿಕಲರ ಕಲ್ಯಾಣ ಅಧಿಕಾರಿ ನಾಮದೇವ ಬಿಲ್ಕರ್, ‘ಅಲಿಂಕೋ’ದ ಹಿರಿಯ ವ್ಯವಸ್ಥಾಪಕ ಅಶೋಕ್‌ಕುಮಾರ್ ಹಾಗೂ ಅಧಿಕಾರಿಗಳು ಇದ್ದರು.

ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಸ್ವಾಗತಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು