ಗುರುವಾರ , ಡಿಸೆಂಬರ್ 3, 2020
18 °C
‘ಸಮಯದ ಅಭಾವದಿಂದಾಗಿ ಮನವೊಲಿಕೆ ಸಾಧ್ಯವಾಗಲಿಲ್ಲ’

ಕಣದಲ್ಲಿರುವ ನಮ್ಮವರನ್ನು ಗೆಲ್ಲಿಸಿಕೊಳ್ಳುತ್ತೇವೆ: ಲಕ್ಷ್ಮಣ ಸವದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ 13 ನಿರ್ದೇಶಕರನ್ನು ಅವಿರೋಧವಾಗಿ ಆಯ್ಕೆ ಮಾಡುವಲ್ಲಿ ಯಶಸ್ವಿಯಾಗಿದ್ದೇವೆ. ಉಳಿದ ಮೂರು ಕ್ಷೇತ್ರಗಳಲ್ಲಿ ಸಮಯದ ಅಭಾವದಿಂದಾಗಿ ಅಭ್ಯರ್ಥಿಗಳ ಮನವೊಲಿಸುವುದು ಸಾಧ್ಯವಾಗಲಿಲ್ಲ’ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ತಿಳಿಸಿದರು.

‘ನ. 6ರಂದು ಮತದಾನ ನಡೆಯಲಿದ್ದು, ಆಗ ಖಾನಾಪುರ ಕೃಷಿ ಪತ್ತಿನ ಸಹಕಾರ ಸಂಘಗಳ ಕ್ಷೇತ್ರದಿಂದ ಅರವಿಂದ ಪಾಟೀಲ, ರಾಮದುರ್ಗದಿಂದ ಶ್ರೀಕಾಂತ  ಢವಳ ಹಾಗೂ ನೇಕಾರರ ಸಹಕಾರ ಸಂಘಗಳ ಕ್ಷೇತ್ರದಿಂದ ಗಜಾನನ ನಿಂಗಪ್ಪ ಕ್ವಳ್ಳಿ ಅವರನ್ನು ಬೆಂಬಲಿಸಲಿದ್ದೇವೆ. ಸಾಮೂಹಿಕವಾಗಿ ಮತ ಹಾಕುವ ಮೂಲಕ ಅವರನ್ನು ಗೆಲ್ಲಿಸಿಕೊಳ್ಳಲು ನಿರ್ಧರಿಸಿದ್ದೇವೆ. ಈ ವಿಷಯದಲ್ಲೂ ಮುಖಂಡರೆಲ್ಲರೂ ಒಟ್ಟಾಗಿ ಹೋಗುತ್ತೇವೆ’ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಶಾಸ್ತ್ರಕ್ಕೆ ಎನ್ನುವಂತೆ ಈ ಮತದಾನ ನಡೆಯುತ್ತಿದೆಯಷ್ಟೆ. ನಾಮಪತ್ರ ವಾಪಸ್‌ ತೆಗೆದುಕೊಳ್ಳುವವರಿಗೆ ಸಮಯವಿರಲಿಲ್ಲ. ಹೀಗಾಗಿ, ಉಳಿದಿದ್ದಾರೆ. ಇದರಲ್ಲಿ ನಮಗೆ ಹಿನ್ನಡೆ ಪ್ರಶ್ನೆ ಇಲ್ಲ. ಎಲ್ಲರಿಗೂ ಆಸೆ–ಆಕಾಂಕ್ಷೆ ಇರುತ್ತದೆ ಸ್ಪರ್ಧಿಸಿದ್ದಾರೆ’ ಎಂದರು.

‘ಅವರಿಂದ ಅಥವಾ ಇವರಿಂದ ನಾಮಪತ್ರ ವಾಪಸ್ ತೆಗೆಸಬಹುದಿತ್ತು ಎನ್ನುವ ಗೊಂದಲ ಇಲ್ಲ. ಕೆಲವರು ಕಾಂಗ್ರೆಸ್ ಬೆಂಬಲಿಗರು ಕೂಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇಲ್ಲಿ ಪಕ್ಷದ ಪ್ರಶ್ನೆ ಇಲ್ಲ. ಒಟ್ಟಾರೆ ಬ್ಯಾಂಕ್‌ನ ಹಿತದೃಷ್ಟಿಯಿಂದ ನಿರ್ಧರಿಸಿದ್ದೇವೆ. ಹಿಂದಿದ್ದ 16 ನಿರ್ದೇಶಕರಲ್ಲಿ 14 ಮಂದಿ ಮುಂದುವರಿಸಬೇಕು ಎಂದು ತೀರ್ಮಾನಿಸಲಾಗಿತ್ತು. ಎರಡರಲ್ಲಿ ಬೇರೆ ಬೇರೆ ಕಾರಣದಿಂದ ಬದಲಾವಣೆಯಾಗಿದೆ. ಅಧ್ಯಕ್ಷರ ಆಯ್ಕೆಗೂ ಒಟ್ಟಾಗಿ ಹೋಗಲು ನಿರ್ಧರಿಸುತ್ತೇವೆ’ ಎಂದು ಹೇಳಿದರು.

‘ಖಾನಾಪುರದಲ್ಲಿ ಅರವಿಂದ ಪಾಟೀಲ ಬಿಜೆಪಿಯೂ ಅಲ್ಲ, ಎಂಇಎಸ್ ಕೂಡ ಇಲ್ಲ. ಹೋದ ಚುನಾವಣೆಯಲ್ಲಿ ಯಾರೊಂದಿಗೂ ಗುರುತಿಸಿಕೊಳ್ಳದೆ ಸ್ವತಂತ್ರವಾಗಿ ಗೆದ್ದಿದ್ದರು. ಈಗ ಕಾಂಗ್ರೆಸ್ ಶಾಸಕಿ ಡಾ.ಅಂಜಲಿ ನಿಂಬಾಳ್ಕರ್‌ ಸ್ಪರ್ಧೆಯಲ್ಲಿರುವುದರಿಂದ ಕಾಂಗ್ರೆಸ್ ಬಣ್ಣ ಹಚ್ಚಲಾಗುತ್ತಿದೆಯಷ್ಟೆ’ ಎಂದು ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ, ‘ಎಲ್ಲ ಸ್ಥಾನಗಳ ಅವಿರೋಧ ಆಯ್ಕೆಗಾಗಿ ಒಂದು ವಾರದಿಂದ ಸತತ ಪ್ರಯತ್ನ ಮಾಡಿದ್ದೆವು. ಆದರೆ, ಮೂರು ಕ್ಷೇತ್ರಗಳಲ್ಲಿ ಸಾಧ್ಯವಾಗಿಲ್ಲ. ಅಲ್ಲಿ ನಮ್ಮ ಬೆಂಬಲಿಗರನ್ನು ಗೆಲ್ಲಿಸಿಕೊಳ್ಳುತ್ತೇವೆ. ಇದು ಸಹಕಾರ ಬ್ಯಾಂಕ್ ಇಲ್ಲಿ ಪಕ್ಷ ಅಥವಾ ಜಾತಿ ಬರುವುದಿಲ್ಲ.  ಖಾನಾಪುರದವರು ಶಾಸಕರಾಗಿ ಈ ಹಂತಕ್ಕೆ ಹೋಗಬಾರದಿತ್ತು’ ಎಂದರು.

ವಿಧಾನಪರಿಷತ್ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ, ಶಾಸಕ ಮಹಾಂತೇಶ ದೊಡ್ಡಗೌಡರ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು