ಮಂಗಳವಾರ, ಮೇ 17, 2022
24 °C

ಗೋಕಾಕ ತಹಶೀಲ್ದಾರ್‌ ಕಚೇರಿ 2 ತಾಸು ಬಂದ್ ಆಗಿದ್ದೇಕೆ: ಅಶೋಕ ಪೂಜಾರಿ ಪ್ರಶ್ನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ಗೋಕಾಕದ ತಹಶೀಲ್ದಾರ್‌ ಕಚೇರಿಯ ಗೇಟನ್ನು ಫೆ. 15ರಂದು ಎರಡು ತಾಸಿನವರೆಗೆ ಬೀಗ ಹಾಕಿ ಬಂದ್ ಮಾಡಿದ್ದೇಕೆ. ಜನರನ್ನು ಒಳಬಿಡದೆ ತಡೆದಿದ್ದೇಕೆ? ಅಲ್ಲಿ ರಹಸ್ಯವಾಗಿ ನಡೆದಿದ್ದೇನು ಎನ್ನುವುದನ್ನು ಅಧಿಕಾರಿಗಳು ಬಹಿರಂಗಪಡಿಸಬೇಕು. ಜನರಲ್ಲಿ ಉಂಟಾಗಿರುವ ಹಲವು ಸಂಶಯಗಳನ್ನು ನಿವಾರಿಸಬೇಕು’ ಎಂದು ಜೆಡಿಎಸ್ ಮುಖಂಡ ಅಶೋಕ ಪೂಜಾರಿ ಆಗ್ರಹಿಸಿದರು.

ಇಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಂದು ಪ್ರತಿಭಟನೆ ನಡೆಯುತ್ತಿದೆ ಎಂದು ಬಿಂಬಿಸಿ ತಹಶೀಲ್ದಾರ್ ಕಚೇರಿಯ ಗೇಟ್ ಮುಚ್ಚಲಾಗಿತ್ತು. ಮೂವತ್ತು ನಲವತ್ತು‌ ಜನ ಹೊರಗೆ ಕುಳಿತಿದ್ದರು. ಆದರೆ, ಅವರು ಧಿಕ್ಕಾರ ಕೂಗಲಿಲ್ಲ. ಅಧಿಕಾರಿಗಳಿಗೆ ಮನವಿ ಸಲ್ಲಿಸಿದ ಬಗ್ಗೆಯೂ ಮಾಹಿತಿ ಇಲ್ಲ. ಸರ್ಕಾರಿ ಕಚೇರಿಯನ್ನು ಹೀಗೆ ಬಂದ್ ಮಾಡಿದ್ದು ಹಲವು ಅನುಮಾನಗಳಿಗೆ ಕಾರಣವಾಗಿದೆ’ ಎಂದು ದೂರಿದರು.

‘ತಹಶೀಲ್ದಾರ್‌ ಕಚೇರಿಯೊಳಗೆ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರ ಕೆಲವು ಬೆಂಬಲಿಗರು ಇದ್ದರು. ಕೆಲವು ಫೈಲ್‌ಗಳಿಗೆ ಸಹಿ ಮಾಡಿಸುತ್ತಿದ್ದರು ಅಥವಾ ಸಹಿ ಹಾಕುವಂತೆ ಒತ್ತಡ ಹೇರುತ್ತಿದ್ದರು ಎಂಬ ಮಾತುಗಳು ಕೇಳಿಬರುತ್ತಿವೆ. ಗೋಕಾಕದಲ್ಲಿ ಸರ್ವಾಧಿಕಾರಿ ವ್ಯವಸ್ಥೆಯ ಹಿಡಿತ ಆಧಿಕಾರಿ ವರ್ಗವನ್ನು ಆಕ್ರಮಣ ಮಾಡಿಕೊಂಡಿದೆ ಎಂಬ ಸಂಶಯ‌ ಬಂದಿದೆ. ಅಧಿಕಾರಿಗಳು ಸಂದಿಗ್ಧ ಸ್ಥಿತಿಯಲ್ಲಿ ಸಿಲುಕಿಕೊಂಡಿದ್ದಾರೆ. ಯಾವುದೋ ಕಡತಗಳಿಗೆ ಸಹಿ ಮಾಡಲು ತಹಶೀಲ್ದಾರ್ ಒತ್ತಡ ಇತ್ತು ಎಂದು ತಿಳಿದುಬಂದಿದೆ. ವಾಸ್ತವವಾಗಿ ಅಲ್ಲಿ ಏನಾಗಿದೆ ಎನ್ನುವುದರ ಬಗ್ಗೆ ಅಧಿಕಾರಿಗಳು ಸ್ಪಷ್ಟನೆ ಕೊಡಬೇಕು. ಕಚೇರಿ ಬಂದ್ ಆಗಿದ್ದ ಹಿಂದೆ ಯಾರ ಕೈವಾಡವಿತ್ತು ಎನ್ನುವುದು ಗೊತ್ತಾಗಬೇಕು’ ಎಂದು ಒತ್ತಾಯಿಸಿದರು.

‘ಈ ಕುರಿತು ತಹಶೀಲ್ದಾರ್‌ ಪ್ರಕಾಶ ಹೊಳೆಪ್ಪಗೋಳ ಅವರನ್ನು ಸಂಪರ್ಕಿಸಿದ್ದೆ. ಒಂದೆರಡು ಕಡತಗಳು ಕಳೆದಿದ್ದವು. ಅವುಗಳನ್ನು ಹುಡುಕಿಸುವುದಕ್ಕಾಗಿ ಹದಿನೈದು ನಿಮಿಷ ಗೇಟ್ ಹಾಕಿಸಿದ್ದೆ ಎಂದು ಹೇಳಿದರು. ಆದರೆ, ವಾಸ್ತವವಾಗಿ ಎರಡು ತಾಸು ಕಚೇರಿ ಬಂದ್ ಆಗಿತ್ತು. ಇದಕ್ಕೆ ಕಾರಣವೇನು, ಯಾವುದಕ್ಕೆ ಸಂಬಂಧಿಸಿದ ಕಡತಗಳು ಕಳೆದಿವೆ ಎನ್ನುವುದನ್ನು ತಹಶೀಲ್ದಾರ್‌ ಸ್ಪಷ್ಟಪಡಿಸಬೇಕು. ಇತ್ತ ಜಿಲ್ಲಾಧಿಕಾರಿಯೂ ಗಮನಿಸಬೇಕು’ ಎಂದು ಆಗ್ರಹಿಸಿದರು.

ಕಚೇರಿ ಗೇಟ್ ಬಂದ್ ಮಾಡಿ ಅಲ್ಲಿ ಕೆಲವರು ಧರಣಿ ಕುಳಿತಿದ್ದ ಫೋಟೊ ಅನ್ನು ಅವರು ಮಾಧ್ಯಮಕ್ಕೆ ಬಿಡುಗಡೆ ಮಾಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು