ಗುರುವಾರ, 10 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಿದ್ದರಾಮಯ್ಯ ನೈತಿಕತೆ ಈಗ ಎಲ್ಲಿಗೆ ಹೋಗಿದೆ?: ಶಾಸಕ ಅಭಯ ಪಾಟೀಲ

Published : 29 ಸೆಪ್ಟೆಂಬರ್ 2024, 8:17 IST
Last Updated : 29 ಸೆಪ್ಟೆಂಬರ್ 2024, 8:17 IST
ಫಾಲೋ ಮಾಡಿ
Comments

ಬೆಳಗಾವಿ: ‘ಈ ಹಿಂದೆ ಬಿ.ಎಸ್‌.ಯಡಿಯೂರಪ್ಪ ವಿರುದ್ಧ ಆರೋಪ ಕೇಳಿಬಂದಾಗ, ನೈತಿಕತೆ ಹೊತ್ತು ರಾಜೀನಾಮೆ ಕೊಡಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದರು. ಈಗ ಅವರ ನೈತಿಕತೆ ಎಲ್ಲಿಗೆ ಹೋಗಿದೆ’ ಎಂದು ಶಾಸಕ ಅಭಯ ಪಾಟೀಲ ಪ್ರಶ್ನಿಸಿದರು.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ(ಮುಡಾ) ಪ್ರಕರಣದಲ್ಲಿ ಎಫ್‌ಐಆರ್‌ ದಾಖಲಾದರೂ ಸಿದ್ದರಾಮಯ್ಯ ರಾಜೀನಾಮೆ ಕೊಡದ ವಿಚಾರವಾಗಿ, ಇಲ್ಲಿ ಭಾನುವಾರ ಸುದ್ದಿಗಾರರಿಗೆ ಅವರು ಹೀಗೆ ಪ್ರತಿಕ್ರಿಯಿಸಿದರು.

‘ರಾಜ್ಯದಲ್ಲಿ ಅಧಿಕಾರಕ್ಕೆ ಅಂಟಿಕೊಳ್ಳದೆ ಕೆಲಸ ಮಾಡಿದ ಕೆಲವೇ ರಾಜಕಾರಣಿಗಳ ಪೈಕಿ ಸಿದ್ದರಾಮಯ್ಯ ಕೂಡ ಒಬ್ಬರು. ಅವರ ಬಗ್ಗೆ ನಿಜವಾಗಿಯೂ ಬಹಳ ಗೌರವವಿತ್ತು. ಆದರೆ, ಈಗ ಕುರ್ಚಿಗೆ ಫೆವಿಕಾಲ್‌ ಹಚ್ಚಿಕೊಂಡು ಕುಳಿತಿದ್ದಾರೆ. ಯಡಿಯೂರಪ್ಪ ಅವರಿಗೊಂದು ಕಾಯ್ದೆ ಮತ್ತು ನಿಮಗೊಂದು ಕಾಯ್ದೆಯೇ?’ ಎಂದು ವ್ಯಂಗ್ಯವಾಡಿದರು.

‘ಇದು ಒಬ್ಬರ ನೈತಿಕತೆ ಪ್ರಶ್ನೆಯಲ್ಲ. ರಾಜ್ಯದ ಮರ್ಯಾದೆ ದೃಷ್ಟಿಯಿಂದ ಅವರು ರಾಜೀನಾಮೆ ಕೊಡಬೇಕು. ತಾವು ನಿರಪರಾಧಿ ಎಂದು ಸಾಬೀತಾದ ಮೇಲೆ ಮತ್ತೆ ಸಿ.ಎಂ ಕುರ್ಚಿ ಮೇಲೆಯೇ ಕುಳಿತುಕೊಳ್ಳಬಹುದು. ಈಗ ಸಿದ್ದರಾಮಯ್ಯ ರಾಜೀನಾಮೆ ಕೊಡದಿರುವುದು ಕಾಂಗ್ರೆಸ್ ಅವನತಿಗೆ ಕಾರಣವಾಗಲಿದೆ’ ಎಂದರು.

‘ಸಿದ್ದರಾಮಯ್ಯ ರಾಜೀನಾಮೆ ಆಗ್ರಹಿಸಿ ಬೆಂಗಳೂರಿನಿಂದ ಮೈಸೂರಿನವರೆಗೆ ಪಾದಯಾತ್ರೆ ಮಾಡಿದ್ದೆವು. ಅವರು ರಾಜೀನಾಮೆ ಕೊಡಬೇಕಿತ್ತು. ಆದರೆ, ಕೊಡದಿರುವುದು ದುರ್ದೈವದ ಸಂಗತಿ. ನಾವು ಇನ್ಯಾವ ಯಾತ್ರೆ ಮಾಡುವುದು ಉಳಿದಿದೆ’ ಎಂದು ಹೇಳಿದರು.

ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ವಿರುದ್ಧ ಎಫ್ಐಆರ್ ದಾಖಲಿಸುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅಭಯ, ‘ಇದು ರಾಜಕೀಯ ಪ್ರೇರಿತವಾದದ್ದು. ಇಷ್ಟುದಿನ ಇವರೇನೂ ಮಲಗಿಕೊಂಡಿದ್ದರಾ’ ಎಂದು ಟೀಕಿಸಿದರು.

‘ಸಮಸ್ಯೆಗೆ ಪರಿಹಾರ ಕಲ್ಪಿಸುತ್ತೇನೆ’

ಬೆಳಗಾವಿಯ ಕಪಿಲೇಶ್ವರ ದೇವಸ್ಥಾನದ ಹೊಂಡದಲ್ಲಿ ವಿಸರ್ಜನೆಯಾದ ಗಣೇಶನ ಮೂರ್ತಿಗಳನ್ನು ಇನ್ನೂ ತೆರವುಗೊಳಿಸದ ಕುರಿತು ಪ್ರತಿಕ್ರಿಯಿಸಿದ ಅಭಯ, ‘ಗಣೇಶೋತ್ಸವ ಮುಗಿದ ಎರಡ್ಮೂರು ದಿನಗಳಲ್ಲಿ ಮೂರ್ತಿಗಳನ್ನು ತೆರವುಗೊಳಿಸುವುದು ಮಹಾನಗರ ಪಾಲಿಕೆ ಕೆಲಸ. ಆದರೆ, ಈಗ ಉತ್ಸವ ಮುಗಿದು ವಾರವಾದರೂ ತೆರವು ಮಾಡಿಲ್ಲ. ಈ ಸಂಬಂಧ ಅಧಿಕಾರಿಗಳ ಜತೆ ಮಾತನಾಡುತ್ತೇನೆ. ಸಮಸ್ಯೆಗೆ ಪರಿಹಾರ ಕಲ್ಪಿಸುತ್ತೇನೆ’ ಎಂದರು.

ಯೋಗ್ಯ ನಿರ್ಧಾರ ಕೈಗೊಳ್ಳಲಿ

‘ಬೆಳಗಾವಿ ಜಿಲ್ಲೆಯ 18 ಶಾಸಕರ ಜತೆ ಸಮಗ್ರವಾಗಿ ಚರ್ಚಿಸಿದ ನಂತರ, ಜಿಲ್ಲಾ ವಿಭಜನೆ ಕುರಿತು ಯೋಗ್ಯ ನಿರ್ಣಯ ಕೈಗೊಳ್ಳಬೇಕು. ಇನ್ನೂ ರಾಜಕೀಯ ದೃಷ್ಟಿಯಿಂದ ಬೆಳಗಾವಿ ತಾಲ್ಲೂಕು ವಿಭಜನೆ ಕುರಿತಾಗಿ ಯಾವ ನಿರ್ಧಾರ ಕೈಗೊಳ್ಳಬಾರದು. ಅಗತ್ಯವಿದ್ದರೆ ಸರ್ಕಾರದ ಆದೇಶ ಮತ್ತು ಶಿಷ್ಟಾಚಾರ ಪಾಲನೆಗಾಗಿ ಬೆಳಗಾವಿ ತಾಲ್ಲೂಕಿಗೆ ಒಬ್ಬ ಹೆಚ್ಚುವರಿ ತಹಶೀಲ್ದಾರ್‌ ನೇಮಿಸಬೇಕು’ ಎಂದು ಅಭಯ ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT