ಗುರುವಾರ , ಡಿಸೆಂಬರ್ 3, 2020
23 °C
ಸಚಿವ ಸಂಪುಟ ವಿಸ್ತರಣೆ ಮೂಡಿಸಿದ ಕುತೂಹಲ

ಬೆಳಗಾವಿ: ಸಚಿವ ಸಂಪುಟಕ್ಕೆ ಸೇರುವವರಾರು, ಹೊರ ಬರುವವರಾರು?

ಎಂ. ಮಹೇಶ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆಯಾದರೆ ಜಿಲ್ಲೆಯ ಯಾವ ಶಾಸಕರಿಗೆ ಸ್ಥಾನ ಸಿಗಬಹುದು ಎನ್ನುವುದಕ್ಕಿಂತ, ಈಗಿರುವ ನಾಲ್ವರು ಮಂತ್ರಿಗಳಲ್ಲಿ ಯಾರನ್ನು ಕೈಬಿಡಬಹುದು ಮತ್ತು ಅದರಿಂದ ಆಗಬಹುದಾದ ರಾಜಕೀಯ ಬೆಳವಣಿಗೆಗಳೇನು ಎನ್ನುವ ಬಗ್ಗೆಯೇ ರಾಜಕೀಯ ವಲಯದಲ್ಲಿ ಚರ್ಚೆ ನಡೆದಿದೆ.

ಸಂಪುಟ ವಿಸ್ತರಣೆಯು, ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದ ಸುರೇಶ ಅಂಗಡಿ ಅವರ ಅಕಾಲಿಕ ನಿಧನದಿಂದ ತೆರವಾಗಿರುವ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ನಡೆಯಲಿರುವ ಉಪ ಚುನಾವಣೆ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿವೆ ಎಂದು ವಿಶ್ಲೇಷಿಸಲಾಗುತ್ತಿದೆ.

ಪ್ರಸ್ತುತ ಸಂಪುಟದಲ್ಲಿ ಬೆಂಗಳೂರು ನಂತರ ಬೆಳಗಾವಿಗೆ ಹೆಚ್ಚಿನ ಪ್ರಾತಿನಿಧ್ಯ ಸಿಕ್ಕಿದೆ. ಇಲ್ಲಿನ ಲಕ್ಷ್ಮಣ ಸವದಿ (ಮಂತ್ರಿಯಾದ ನಂತರ ವಿಧಾನಪರಿಷತ್‌ ಸದಸ್ಯರಾದರು) ಉಪ ಮುಖ್ಯಮಂತ್ರಿ ಸ್ಥಾನದ ಜೊತೆಗೆ ಮಹತ್ವದ ಖಾತೆಯಾದ ಸಾರಿಗೆ ಸಚಿವರೂ ಆಗಿದ್ದಾರೆ. ಈ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದೇ ಬಿಂಬಿತವಾಗಿರುವ ಗೋಕಾಕದ ಶಾಸಕ ರಮೇಶ ಜಾರಕಿಹೊಳಿ ಜಲಸಂಪನ್ಮೂಲ ಸಚಿವರಾಗಿದ್ದಾರೆ. ಅವರು ಜಿಲ್ಲಾ ಉಸ್ತುವಾರಿ ಸಚಿವರೂ ಹೌದು. ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯಾಗಿದ್ದಾರೆ. ಈಗಿನ ಸಂಪುಟದಲ್ಲಿರುವ ಏಕೈಕ ಸಚಿವೆಯೂ ಹೌದು. ಕಾಗವಾಡದ ಶಾಸಕ ಶ್ರೀಮಂತ ಪಾಟೀಲ ಜವಳಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವರಾಗಿದ್ದಾರೆ.

ಸಚಿವರಲ್ಲಿ ಆತಂಕ: ಸಂಪುಟ ಪುನಾರಚನೆಯ ಮಾತುಗಳು ಸಚಿವರ ಆತಂಕಕ್ಕೆ ಕಾರಣವಾಗಿದೆ ಎನ್ನಲಾಗುತ್ತಿದೆ.

ಜಿಲ್ಲೆಯ ಹಿರಿಯ ಶಾಸಕ ಎನಿಸಿಕೊಂಡಿರುವ ಉಮೇಶ ಕತ್ತಿ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದಾರೆ.

‘ಈ ನಡುವೆ, ಪಕ್ಷದ ಮೂಲ ಕಾರ್ಯಕರ್ತರೂ ಆಗಿರುವ  ಶಾಸಕರಿಗೆ ಗಾದಿ ನೀಡಬೇಕು ಎನ್ನುವ ಬೇಡಿಕೆಯೂ ಪಕ್ಷದ ಮಟ್ಟದಲ್ಲಿ ಕೇಳಿಬಂದಿದೆ. ಹೀಗಾಗಿ, ಸಚಿವರ ಕಾರ್ಯನಿರ್ವಹಣೆ ಹಾಗೂ ಕಾರ್ಯಕ್ಷಮತೆ ಪರಿಗಣಿಸಲಾಗುತ್ತದೆ ಎಂದು ಚರ್ಚೆಯಾಗಿದೆ. ಕೆಲ ಸಚಿವರನ್ನು ಸಂಪುಟದಿಂದ ಬಿಡಬಹುದು. ಅದರಲ್ಲಿ ಬೆಳಗಾವಿಯ ಒಂದಿಬ್ಬರು ಅವಕಾಶ ಕಳೆದುಕೊಂಡರೆ ಹೊಸದಾಗಿ ಒಬ್ಬರಿಗೆ ಸ್ಥಾನ ಸಿಗಬಹುದು’ ಎಂದು ಬಿಜೆಪಿ ಮುಖಂಡರೊಬ್ಬರು ಹೇಳಿದರು.

ಹೆಚ್ಚು ಪ್ರಾತಿನಿಧ್ಯ ಸಿಕ್ಕಿದೆ: ‘ಈಗ ಇರುವ ಸಚಿವರನ್ನೂ ಉಳಿಸಿಕೊಂಡು ಮತ್ತೊಬ್ಬರಿಗೆ ನೀಡಿದರೆ ಜಿಲ್ಲೆಯಲ್ಲಿ ಐವರಿಗೆ ಪ್ರಾತಿನಿಧ್ಯ ಸಿಕ್ಕಂತಾಗುತ್ತದೆ. ಇದಲ್ಲದೇ ವಿವಿಧ ನಿಗಮ– ಮಂಡಳಿ ಮತ್ತು ಮಹತ್ವದ ಸ್ಥಾನಗಳನ್ನು ಜಿಲ್ಲೆಯವರಿಗೆ ನೀಡಲಾಗಿದೆ. ಆಗ, ಪ್ರಾತಿನಿಧ್ಯ ವಂಚಿತ ಜಿಲ್ಲೆಗಳ ಬಿಜೆಪಿ ಶಾಸಕರು ಸಿಡಿದೇಳಬಹುದು. ಉಮೇಶ ಕತ್ತಿ  ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳದಿದ್ದರೆ ಆಗಬಹುದಾದ ಒಳ ಹೊಡೆತಗಳ ಬಗ್ಗೆಯೂ ಗಮನಹರಿಸಬೇಕಾಗುತ್ತದೆ. ಅವರ ಸಹೋದರ ರಮೇಶ ಕತ್ತಿ ಅವರಿಗೆ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಟಿಕೆಟ್ ನಿರಾಕರಿಸಿದಾಗ ಮತ್ತು ರಾಜ್ಯಸಭಾ ಚುನಾವಣೆಗೆ ಟಿಕೆಟ್ ನಿರಾಕರಿಸಲಾಗಿತ್ತು. ಈಗ, ಸಚಿವ ಸ್ಥಾನ ನೀಡಿ ‘ಪರಿಹಾರ’ ಮಾಡಬೇಕು ಎಂದು ಕತ್ತಿ ಸಹೋದರರು ಒತ್ತಡ ಹೇರುತ್ತಿದ್ದಾರೆ. ಹೀಗಾಗಿ, ಈ ವಿಷಯದಲ್ಲಿ ಎಚ್ಚರಿಕೆಯ ಹೆಜ್ಜೆ ಇಡಲು ಈಚೆಗೆ ನಡೆದ ವರಿಷ್ಠರ ಸಭೆಯಲ್ಲಿ ಚರ್ಚಿಸಲಾಗಿದೆ. ಲೋಕಸಭಾ ಕ್ಷೇತ್ರಕ್ಕೆ ಬರಲಿರುವ ಉಪ ಚುನಾವಣೆಯನ್ನೂ ಗಮನದಲ್ಲಿಟ್ಟುಕೊಂಡು ತೀರ್ಮಾನಿಸಬಹುದು’ ಎನ್ನುತ್ತಾರೆ ಅವರು.

***

ಸಂಪುಟಕ್ಕೆ ಯಾರನ್ನಾದರೂ ಬಿಡಲಿ, ಯಾರನ್ನಾದರೂ ಸೇರಿಸಿಕೊಳ್ಳಲಿ ಅದಕ್ಕೆ ನನ್ನ ಆಕ್ಷೇಪವಿಲ್ಲ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನಿರ್ಧಾರಕ್ಕೆ ಬದ್ಧ
- ರಮೇಶ ಜಾರಕಿಹೊಳಿ, ಜಿಲ್ಲಾ ಉಸ್ತುವಾರಿ ಸಚಿವ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು