ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಸಗಿ ವಿಡಿಯೊ ಬೆದರಿಕೆ: ಪತ್ನಿ ದೂರು, ಪತಿ ಬಂಧನ

ವಿಚ್ಛೇದನ ನೀಡದಿದ್ದರೆ ಖಾಸಗಿತನ ವಿಡಿಯೊ ವೈರಲ್‌ ಮಾಡುವ ಬೆದರಿಕೆ
Published 4 ಜನವರಿ 2024, 10:43 IST
Last Updated 4 ಜನವರಿ 2024, 10:43 IST
ಅಕ್ಷರ ಗಾತ್ರ

ಬೆಳಗಾವಿ: ‘ವಿಚ್ಛೇದನ ಪತ್ರಕ್ಕೆ ಸಹಿ ಮಾಡು ಇಲ್ಲವೇ ನಿನ್ನ ಖಾಸಗಿತನದ ವಿಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಹಿರಂಗ ಮಾಡುತ್ತೇನೆ’ ಎಂದು ಪತ್ನಿಗೆ ಬೆದರಿಕೆ ಹಾಕಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಪತಿಯ ಕಿರುಕುಳದಿಂದ ಬೇಸತ್ತ ಪತ್ನಿ ವಾರದ ಹಿಂದೆ ಬೆಳಗಾವಿಯ ಸೈಬರ್‌ ಅಪರಾಧ ಪತ್ತೆ ಠಾಣೆಗೆ ದೂರು ನೀಡಿದ್ದಾರೆ. ದೂರು ಆಧರಿಸಿ ಪೊಲೀಸರು ಪತಿಯನ್ನು ಬಂಧಿಸಲು ಹೋದಾಗ ಅವರು ವಿಷ ಕುಡಿದು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದರು. ವಿಷದ ಬಾಟಲಿ ಕಿತ್ತುಕೊಂಡು ಅವರನ್ನು ರಕ್ಷಿಸಿ, ಜಿಲ್ಲಾಸ್ಪತ್ರೆಯಲ್ಲಿ ಮೂರು ದಿನ ಚಿಕಿತ್ಸೆ ಕೊಡಿಸಿದ ಬಳಿಕ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರೀತಿಸುತ್ತಿದ್ದ ಈ ಜೋಡಿ 2022ರ ನವೆಂಬರ್‌ 17ರಂದು ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಮದುವೆ ಮಾಡಿಕೊಂಡಿದ್ದರು. ಆರಂಭದಲ್ಲಿ ನೆಮ್ಮದಿಯ ಜೀವನ ನಡೆಸಿದ್ದರು. ಇತ್ತೀಚಿನ ದಿನಗಳಲ್ಲಿ ಕೌಟುಂಬಿಕ ಕಲಹಗಳು ಆರಂಭವಾಗಿದ್ದರಿಂದ ಪದೇಪದೇ ಜಗಳ ನಡೆಯುತ್ತಿತ್ತು. ವಿಚ್ಛೇದನ ಪಡೆಯುವುದಾಗಿ ಪತಿ ತಿಳಿಸಿದ್ದರು. ಇದಕ್ಕೆ ಪತ್ನಿ ಒಪ್ಪದ ಕಾರಣ ಅವರನ್ನು ‘ಬ್ಲ್ಯಾಕ್‌ಮೇಲ್‌’ ಮಾಡಲು ಶುರು ಮಾಡಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.

ತಮ್ಮಿಬ್ಬರ ಖಾಸಗಿತನದ ಹಲವು ಕ್ಷಣಗಳನ್ನು ಪತಿ ತನ್ನ ಮೊಬೈಲ್‌ನಲ್ಲಿ ವಿಡಿಯೊ ಮಾಡಿಕೊಂಡಿದ್ದರು. ವಿಚ್ಛೇದನಕ್ಕೆ ಒಪ್ಪದಿದ್ದರೆ ಆ ವಿಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಮಾನಹಾನಿ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದರು. ಈ ವಿಚಾರವಾಗಿ ಹಿರಿಯರು ಸಾಕಷ್ಟು ಬುದ್ಧಿವಾದ ಹೇಳಿದ್ದರೂ ಕೇಳಲಿಲ್ಲ. ಇತ್ತೀಚೆಗೆ ಪತ್ನಿಯ ಸಾಮಾಜಿಕ ಜಾಲತಾಣದ ಅಕೌಂಟ್‌ ತೆರೆದು, ಅದರಲ್ಲಿ ಕೆಟ್ಟ ಪದ ಬಳಸಿ ತಾನೇ ಅವರ ಫೋಟೊ ಪೋಸ್ಟ್‌ ಮಾಡಿದ್ದ. ಇದರಿಂದ ಬೇಸತ್ತ ಪತ್ನಿ ಸೈಬರ್‌ ಅಪರಾಧ ಪತ್ತೆ ಠಾಣೆಗೆ ದೂರು ನೀಡಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT