ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಂಗಾಯತರನ್ನು ಕಾಂಗ್ರೆಸ್‌ನತ್ತ ಸೆಳೆಯುವುದು ನಿಶ್ಚಿತ: ಎಂ.ಬಿ.ಪಾಟೀಲ

ಶಾಸಕ ಎಂ.ಬಿ. ಪಾಟೀಲ ಹೇಳಿಕೆ
Last Updated 16 ಜುಲೈ 2021, 13:42 IST
ಅಕ್ಷರ ಗಾತ್ರ

ಬೆಳಗಾವಿ: ‘ಉತ್ತರ ಕರ್ನಾಟಕದಲ್ಲಿ ಬಿ.ಎಸ್. ಯಡಿಯೂರಪ್ಪ ಅವರನ್ನು ಬೆಂಬಲಿಸುತ್ತಿರುವ ಲಿಂಗಾಯತ ಸಮಾಜವನ್ನು ಮತ್ತು ನಾಯಕರನ್ನು ಕಾಂಗ್ರೆಸ್‌ನತ್ತ ಕರೆತರುವ ಕೆಲಸವನ್ನು ನಿಶ್ಚಿತವಾಗಿ ಮಾಡಲಾಗುವುದು’ ಎಂದು ಕಾಂಗ್ರೆಸ್‌ ಶಾಸಕ ಎಂ.ಬಿ. ಪಾಟೀಲ ತಿಳಿಸಿದರು.

ಇಲ್ಲಿನ ಶಿವಬಸವನಗರದ ನಾಗನೂರು ರುದ್ರಾಕ್ಷಿ ಮಠದಲ್ಲಿ ಡಂಬಳ-ಗದಗ ತೋಂಟದಾರ್ಯ ಮಠದ ತೋಂಟದ ಸಿದ್ಧರಾಮ ಸ್ವಾಮೀಜಿ ಮತ್ತು ರುದ್ರಾಕ್ಷಿ ಮಠದ ಡಾ.ಅಲ್ಲಮಪ್ರಭು ಸ್ವಾಮೀಜಿ ಅವರಿಂದ ಆಶೀರ್ವಾದ ಪಡೆದ ನಂತರ ಪತ್ರಕರ್ತರೊಂದಿಗೆ ಶುಕ್ರವಾರ ಅವರು ಮಾತನಾಡಿದರು.

‘ಲಿಂಗಾಯತರಲ್ಲಿ ಬಿ.ಎಸ್. ಯಡಿಯೂರಪ್ಪ ಅವರು ಎತ್ತರದ ನಾಯಕ. ಅದಕ್ಕಾಗಿಯೇ ಮುಖ್ಯಮಂತ್ರಿ ಆಗಿದ್ದಾರೆ. ಕಾಂಗ್ರೆಸ್‌ನಲ್ಲೂ ಸಮಾಜಕ್ಕೆ ವಿಶೇಷ ಆದ್ಯತೆ ಸಿಕ್ಕಿದೆ. ಸಮಾಜಕ್ಕೆ ವಿಶೇಷ ವಿಶ್ವಾಸವನ್ನು ತುಂಬಿ ಮತ್ತಷ್ಟು ಸೆಳೆಯಬೇಕಾಗಿದೆ. ಈ ನಿಟ್ಟಿನಲ್ಲಿ ಹೈಕಮಾಂಡ್‌ಗೂ ಮನವರಿಕೆ ಮಾಡಿಕೊಟ್ಟಿದ್ದೇವೆ’ ಎಂದರು.

ಸಾಮೂಹಿಕ ನಾಯಕತ್ವದಲ್ಲಿ ಪ್ರಯತ್ನ:

‘ವೀರೇಂದ್ರ ಪಾಟೀಲರು ಇದ್ದಾಗ 186 ಸೀಟುಗಳನ್ನು ಪಡೆದಿದ್ದೆವು. ಅದು ಐತಿಹಾಸಿಕ ಸಾಧನೆ. ನಂತರ ಸ್ವಲ್ಪ ಹಿನ್ನಡೆಯಾಗಿದೆ. ಸಮಾಜದ ಹೆಚ್ಚಿನ ವಿಶ್ವಾಸ ಮರಳಿ ಪಡೆಯಲು ಹಿರಿಯರ ಮಾರ್ಗದರ್ಶನದಲ್ಲಿ ಸಮಾಜದ ಎಲ್ಲ ನಾಯಕರೂ ಸಾಮೂಹಿಕವಾಗಿ ಯತ್ನಿಸುತ್ತೇವೆ’ ಎಂದು ಪ್ರತಿಕ್ರಿಯಿಸಿದರು.

‘ಪಕ್ಷದಲ್ಲಿ ಲಿಂಗಾಯತ ಸಮಾಜದ ನಾಯಕರಿಗೆ ಪ್ರಾತಿನಿಧ್ಯ ಸಿಗುತ್ತಿಲ್ಲ’ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ‘ಈ ಬಗ್ಗೆ ಹೈಕಮಾಂಡ್‌ಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ಪ್ರಾತಿನಿಧ್ಯ ನೀಡುವಲ್ಲಿ ಅಲ್ಪಸ್ವಲ್ಪ ಕೊರತೆ ಆಗಿದ್ದರೆ ನಿವಾರಿಸುವಂತೆ ತಿಳಿಸುತ್ತೇವೆ’ ಎಂದರು.

ಸ್ವಯಂಘೋಷಿತರಿಂದ ಪ್ರಯೋಜನವಿಲ್ಲ:

‘ನಾನೇ ಮುಖ್ಯಮಂತ್ರಿ, ನೀನೇ ಮುಖ್ಯಮಂತ್ರಿ ಎಂದು ಸ್ವಯಂ ಘೋಷಿಸಿಕೊಳ್ಳುವುದು ಸರಿಯಲ್ಲ. ನನಗೆ ನಾನೇ ಪ್ರಮಾಣಪತ್ರ ಪಡೆದುಕೊಳ್ಳಬೇಕೇ? ಸ್ವಯಂ ಘೋಷಿತ ಮಂದಿಯಿಂದ ಏನೂ ಉಪಯೋಗ ಆಗುವುದಿಲ್ಲ. ಆ ಪ್ರಮಾಣಪತ್ರ ಜನರು ಕೊಡಬೇಕಾಗುತ್ತದೆ; ಅವರು ಬಯಸುವುದು ನಡೆಯುತ್ತದೆ. ಪಕ್ಷ ಅಧಿಕಾರಕ್ಕೆ ಬರಬೇಕು. ನಂತರ ಮುಖ್ಯಮಂತ್ರಿ ಯಾರಾಗಬೇಕು ಎನ್ನುವುದನ್ನು ಹೈಕಮಾಂಡ್‌ ನಿರ್ಧರಿಸುತ್ತದೆ. ನಮ್ಮ ಸದ್ಯದ ಗುರಿ ಅಧಿಕಾರಕ್ಕೆ ತರುವುದೇ ಆಗಿದೆ’ ಎಂದು ಪ್ರತಿಕ್ರಿಯಿಸಿದರು.

‘ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಉತ್ತಮ ಆಡಳಿತ, ಜನಪರ ಕಾರ್ಯಕ್ರಮಗಳನ್ನು ನೀಡಿದ್ದರು. ಯಾವುದೇ ಹಗರಣ ಅಥವಾ ಗೊಂದಲ ಇರಲಿಲ್ಲ. ಅಂತಹ ಸರ್ಕಾರ ಮತ್ತೆ ಬರಬೇಕಾಗಿದೆ. ಅದರಿಂದ ಜನರಿಗೆ ಒಳ್ಳೆಯದಾಗುತ್ತದೆ’ ಎಂದು ಹೇಳಿದರು.

ಶಾಸಕಿ ಲಕ್ಷ್ಮಿ ಹೆಬ್ಬಾಳಕರ, ಮುಖಂಡ ಪ್ರಕಾಶ ಹುಕ್ಕೇರಿ, ಪಕ್ಷದ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ವಿನಯ ನಾವಗಲಟ್ಟಿ, ನಗರ ಘಟಕದ ಅಧ್ಯಕ್ಷ ರಾಜು ಸೇಠ್ ಇದ್ದರು.

‘ಅಂತರರಾಷ್ಟ್ರೀಯ ಗ್ರಂಥಾಲಯ ಸ್ಥಾಪನೆ’

‘ಫ.ಗು. ಹಳಕಟ್ಟಿ ಅವರು ಪ್ರಕಟಿಸಿದ ‘ಶಿವಾನುಭವ’ ಪತ್ರಿಕೆಗಳನ್ನು ನಾಗನೂರು ರುದ್ರಾಕ್ಷಿಮಠ ಸಂಗ್ರಹಿಸಿದೆ. ಅವುಗಳ ಮರುಮುದ್ರಣಕ್ಕೆ ಕ್ರಮ ವಹಿಸುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೊಂದಿಗೆ ಚರ್ಚಿಸಿದ್ದೇನೆ. ಮರುಮುದ್ರಿಸಿ ಸಂಪುಟ ಮಾಡಬೇಕೆಂಬ ವಿಚಾರವಿದೆ’ ಎಂದು ಎಂ.ಬಿ. ಪಾಟೀಲ ಹೇಳಿದರು.

‘ಬಸವಣ್ಣ ಹಾಗೂ ಶರಣರ ಅಂತರರಾಷ್ಟ್ರೀಯ ಗ್ರಂಥಾಲಯ ಸ್ಥಾಪಿಸುವ ಚಿಂತನೆ ಇದ್ದು, ವಿಜಯಪುರದಲ್ಲಿ ಮಾಡಬೇಕೋ, ಬೆಂಗಳೂರಿನಲ್ಲೋ ಎನ್ನುವ ಸಮಾಲೋಚನೆ ನಡೆದಿದೆ. ಆ ಬಗ್ಗೆಯೂ ಶ್ರೀಗಳ ಜೊತೆ ಚರ್ಚಿಸಿದ್ದೇನೆ. ಸುತ್ತೂರು, ಸಿದ್ಧಗಂಗಾ, ಕೂಡಲಸಂಗಮ ಪೀಠದ ಶ್ರೀಗಳೊಂದಿಗೂ ಮಾತನಾಡಲಿದ್ದೇನೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT