ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಅನುದಾನ ದುರುಪಯೋಗವಾಗಿದ್ದರೆ ಪರಿಶೀಲನೆ -ಸೋಮಶೇಖರ್

ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ
Last Updated 3 ಆಗಸ್ಟ್ 2021, 12:20 IST
ಅಕ್ಷರ ಗಾತ್ರ

ಬೆಳಗಾವಿ: ‘ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದಿಂದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆಂದು ಸಂಘ–ಸಂಸ್ಥೆಗಳಿಗೆ ನೀಡಿದ ಅನುದಾನ ಬಳಸಲಾಗಿದೆಯೇ ಅಥವಾ ದುರುಪಯೋಗ ಆಗಿದೆಯೇ ಎಂಬ ಬಗ್ಗೆ ಪರಿಶೀಲಿಸಿ ವರದಿ ಸಲ್ಲಿಸುವಂತೆ ಪ್ರಾದೇಶಿಕ ಆಯುಕ್ತರಿಗೆ ಪತ್ರ ಬರೆಯಲಾಗುವುದು’ ಎಂದು ಅಧ್ಯಕ್ಷ ಡಾ.ಸಿ. ಸೋಮಶೇಖರ್‌ ತಿಳಿಸಿದರು.

ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ‘ಶಿವಬಸವನಗರದಲ್ಲಿ ಗಡಿ ಭವನ ಕಟ್ಟಡ ಕಾಮಗಾರಿ ಪೂರ್ಣಗೊಳಿಸಲು ₹ 3.27 ಕೋಟಿ ಅನುದಾನವನ್ನು ಪ್ರಾಧಿಕಾರದಿಂದ ನೀಡಲಾಗಿದೆ. ಅದರಲ್ಲಿ ಸ್ವಲ್ಪವೂ ಖರ್ಚಾಗಿಲ್ಲ. ಜಿಲ್ಲೆಗೆ ಈವರೆಗೆ ₹ 18.36 ಕೋಟಿ ಮಂಜೂರಾಗಿದ್ದು, ₹ 14 ಕೋಟಿ ಬಿಡುಗಡೆ ಮಾಡಲಾಗಿದೆ. ಅದರಲ್ಲಿ ₹ 5 ಕೋಟಿ ಮಾತ್ರ ಖರ್ಚಾಗಿದೆ. ಉಳಿದ ಅನುದಾನದ ಬಳಕೆ ಪ್ರಮಾಣಪತ್ರವನ್ನು ತಿಂಗಳಲ್ಲಿ ನೀಡುವಂತೆ ಗಡುವು ಕೊಟ್ಟಿದ್ದೇನೆ. ಬಾರದಿದ್ದರೆ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಮುಖ್ಯ ಕಾರ್ಯದರ್ಶಿಗೆ ಬರೆಯಲಾಗುವುದು’ ಎಂದು ಸ್ಪಷ್ಟಪಡಿಸಿದರು.

ಕನ್ನಡ ಅಸ್ಮಿತೆಗೆ:‘ಪ್ರಾಧಿಕಾರಕ್ಕೆ ಹಿಂದೆ ₹ 60ರಿಂದ ₹ 70 ಕೋಟಿ ಅನುದಾನವನ್ನು ಸರ್ಕಾರ ನೀಡುತ್ತಿತ್ತು. ಈ ಬಾರಿ ಕೋವಿಡ್ ಹಿನ್ನೆಲೆಯಲ್ಲಿ ₹ 15 ಕೋಟಿ ಮಾತ್ರ ಬಂದಿದೆ. ಅದರಲ್ಲಿ ಗಡಿನಾಡಿನಲ್ಲಿ ಜಾನಪದ–ಸಾಂಸ್ಕೃತಿಕ ಉತ್ಸವ, ಗಡಿನಾಡಿನ ಹೋರಾಟಗಾರರ ಹೆಸರಿನಲ್ಲಿ ಪ್ರಶಸ್ತಿ ನೀಡಲು ಯೋಜಿಸಿದ್ದೇವೆ. ಗಡಿಗಳಲ್ಲಿ ಕನ್ನಡದ ವಾತಾವರಣ ನಿರ್ಮಿಸಲು, ಸಾಂಸ್ಕೃತಿಕ ಪರಂಪರೆ ಉಳಿಸಿ–ಬೆಳೆಸಲು ಕ್ರಮ ಕೈಗೊಳ್ಳಲಾಗುವುದು. ಕನ್ನಡದ ಅಸ್ಮಿತೆ ಬೆಳೆಸುವಂತಹ ಚಟುವಟಿಕೆಗಳಿಗೆ ಹಾಗೂ ಕನ್ನಡ ಶಾಲೆಗಳ ಅಭಿವೃದ್ಧಿಗೆ ಆದ್ಯತೆ ನೀಡುತ್ತೇನೆ’ ಎಂದರು.

‘ಗಡಿಯಲ್ಲಿರುವ ಕನ್ನಡ ಶಾಲೆಗಳ ಅಭಿವೃದ್ಧಿಗೆ ಅಶೋಕ ಚಂದರಗಿ, ವಾಟಾಳ್ ನಾಗರಾಜ್‌ ಹಾಗೂ ಬರಗೂರು ರಾಮಚಂದ್ರಪ್ಪ ಅವರು ಸರ್ಕಾರಕ್ಕೆ ಸಲ್ಲಿಸಿದ ವರದಿ ಆಧರಿಸಿ ಕ್ರಮ ವಹಿಸಲಾಗುವುದು’ ಎಂದು ಹೇಳಿದರು.

‘ಗಡಿ ನಾಡಿನ ನಾಲ್ಕೂ ಕಡೆಗಳಲ್ಲಿ ಕರ್ನಾಟಕಕ್ಕೆ ಸ್ವಾಗತ ಎಂದು ಕಮಾನು ಹಾಕುವುದಕ್ಕೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇನೆ. ಸ್ವಾಭಿಮಾನದ ಹಾಗೂ ನಾಡಪ್ರಜ್ಞೆಯ ಸಂಕೇತವಾಗಲೆಂದು ಅವು ಕನ್ನಡದಲ್ಲಿರಬೇಕು. ಅಧಿಕಾರಿಗಳು ಗಡಿ ಭಾಗದ ಪ್ರದೇಶಗಳಿಗೆ ಭೇಟಿ ನೀಡಲೇಬೇಕು. ಅಲ್ಲಿನ ಅಭಿವೃದ್ಧಿ ಬಗ್ಗೆ ನಿಗಾ ವಹಿಸಬೇಕು. ಗ್ರಾಮ ಪಂಚಾಯ್ತಿಗಳಲ್ಲಿ ಸಾಂಸ್ಕೃತಿಕ ಪ್ರಜ್ಞೆ ಜಾಗೃತಗೊಳಿಸಲು ಕ್ರಮ ವಹಿಸಬೇಕು’ ಎಂದು ನಿರ್ದೇಶನ ನೀಡಲಾಗಿದೆ’ ಎಂದು ತಿಳಿಸಿದರು.

‘ಕನ್ನಡ ದಿನಪತ್ರಿಕೆಗಳು ಸಿಗಬೇಕು’
‘ಗ್ರಾಮ ಪಂಚಾಯ್ತಿಗಳಲ್ಲಿ ವಾಚನಾಲಯ ನಿಧಿ ಸದ್ಬಳಕೆ ಆಗುತ್ತಿಲ್ಲ. ಅಲ್ಲಿ ಕನ್ನಡ ದಿನಪತ್ರಿಕೆಗಳು ಮತ್ತು ಸಾಪ್ತಾಹಿಕಗಳು ಸಿಗುವಂತಾಗಬೇಕು. ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ್ದೇನೆ’ ಎಂದು ಸೋಮಶೇಖರ್‌ ತಿಳಿಸಿದರು.

‘ಗಡಿ ನಾಡಿನ ಹಳ್ಳಿಗಳಲ್ಲಿನ ನೈಜ ಪರಿಸ್ಥಿತಿಯ ವೈಜ್ಞಾನಿಕ ಅಧ್ಯಯನ ಇದುವರೆಗೂ ನಡೆದಿಲ್ಲ. ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಹಾಗೂ ಔದ್ಯೋಗಿಕವಾಗಿ ಸಮಗ್ರ ಅಧ್ಯಯನವನ್ನು ವಿಶ್ವವಿದ್ಯಾಲಯಗಳ ಮೂಲಕ ಮಾಡಿಸಲಾಗುವುದು. ಇಲ್ಲಿನ ರಾಣಿ ಚನ್ನಮ್ಮ ವಿಶ್ವವಿದ್ಯಾಲಯವು ಬೆಳಗಾವಿ ಮತ್ತು ವಿಜಯಪುರದಲ್ಲಿ ಈ ಅಧ್ಯಯನ ಕೈಗೊಳ್ಳಲಿದೆ. ಅದರಂತೆ, ಇತರ ಕಡೆಗಳಲ್ಲೂ ಆ ಭಾಗದ ವಿಶ್ವವಿದ್ಯಾಲಯಗಳನ್ನು ಕೋರಲಾಗುವುದು. ಇದರಿಂದ ಸಮಗ್ರ ನೀತಿ ರೂಪಿಸಲು ಸರ್ಕಾರಕ್ಕೆ ಶಿಫಾರಸು ಮಾಡಬಹುದಾಗಿದೆ’ ಎಂದರು.

‘ಗಡಿ ನಾಡಿನಲ್ಲಿ ದಾರ್ಶನಿಕರ ಸ್ಮಾರಕಗಳ ಅಭಿವೃದ್ಧಿ ಕಾರ್ಯ, ಜಾನಪದ ಕಲೆಗಳ ಅಧ್ಯಯನಕ್ಕೆ ಯೋಜಿಸಲಾಗಿದೆ. ಪ್ರಾಧಿಕಾರದ ವ್ಯಾಪ್ತಿಯಲ್ಲಿ 19 ಜಿಲ್ಲೆಗಳ 63 ತಾಲ್ಲೂಕುಗಳು ಮತ್ತು 6 ನೆರೆ ರಾಜ್ಯಗಳ ಗಡಿಯ ವ್ಯಾಪ್ತಿ ಹೊಂದಿದೆ. ಅಲ್ಲಿ ಶೈಕ್ಷಣಿಕ ಅಭಿವೃದ್ಧಿಗೆ ಒತ್ತು ನೀಡುವ ಉದ್ದೇಶ ನನ್ನದು. ಇದಕ್ಕಾಗಿ ಎರಡು ತಿಂಗಳಿಗೊಮ್ಮೆ ಪ್ರವಾಸ ಹಮ್ಮಿಕೊಳ್ಳುತ್ತೇನೆ’ ಎಂದು ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ವಿದ್ಯಾವತಿ ಭಜಂತ್ರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT