ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆ ದುರಸ್ತಿ, ರಸ್ತೆ, ಚರಂಡಿ ನಿರ್ಮಾಣಕ್ಕೆ ಆದ್ಯತೆ: ಜಿಲ್ಲಾಧಿಕಾರಿ ಭರವಸೆ

Last Updated 16 ಅಕ್ಟೋಬರ್ 2021, 12:12 IST
ಅಕ್ಷರ ಗಾತ್ರ

ಬೆಳಗಾವಿ/ಎಂ.ಕೆ. ಹುಬ್ಬಳ್ಳಿ: ‘ಮಲಪ್ರಭಾ ನದಿ‌ ದಂಡೆಯ ವೀರಾಪುರ ಸ್ಥಳಾಂತರವಾದ ಗ್ರಾಮವಾಗಿದೆ. ರಸ್ತೆ, ಚರಂಡಿ ಮತ್ತು ಗಟಾರ ಸಮಸ್ಯೆ ಪ್ರಮುಖವಾಗಿ ಕಂಡುಬಂದಿದೆ. ಅವುಗಳ ನಿವಾರಣೆಗೆ ಆದ್ಯತೆ ನೀಡಲಾಗುವುದು. ಮಳೆಯಿಂದಾಗಿ ಶಿಥಿಲಗೊಂಡಿರುವ ಮನೆಗಳ ದುರಸ್ತಿಗೆ ಕ್ರಮ ವಹಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಭರವಸೆ ನೀಡಿದರು.

ವೀರಾಪುರ ಗ್ರಾಮದಲ್ಲಿ ಶನಿವಾರ ಸಂಚರಿಸಿದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ವೀರಾಪುರ ಗ್ರಾಮ ಪಂಚಾಯ್ತಿಯಾಗಿ ಮೇಲ್ದರ್ಜೆಗೇರಿರುವುದರಿಂದ ಅಭಿವೃದ್ಧಿ ಕೆಲಸಗಳು ಚುರುಕುಗೊಳ್ಳಲಿವೆ. ಗ್ರಾಮ ಪಂಚಾಯ್ತಿ ಕಚೇರಿ ಉದ್ಘಾಟಿಸಲಾಗಿದೆ. ಮುಂಬರುವ ದಿನಗಳಲ್ಲಿ ಅನುದಾನವೂ ದೊರೆಯಲಿದೆ. ಗ್ರಾಮದ ಸಮಸ್ಯೆಗಳ ನಿವಾರಣೆಗೆ ಇದು ಸಹಕಾರಿಯಾಗಲಿದೆ’ ಎಂದರು.

‘ಪ್ರತ್ಯೇಕ ಪಂಚಾಯ್ತಿಗೆ ಆಗ್ರಹಿಸಿ ಗ್ರಾಮಸ್ಥರು ಕೆಲವು ವರ್ಷ ಚುನಾವಣೆ ಬಹಿಷ್ಕರಿಸಿದ್ದರು. ಇದರಿಂದಲೂ ಅಭಿವೃದ್ಧಿಗೆ ಮತ್ತು ಮನೆ ಮಂಜೂರಾತಿಗೆ ಹಿನ್ನಡೆಯಾಗಿದೆ’ ಎಂದು ಹೇಳಿದರು.

‘ಮಳೆಯಿಂದಾಗಿ ಕುಸಿದಿರುವ ಮನೆಯ ಸಮೀಕ್ಷೆ ‌ಮಾಡಲಾಗಿದೆ. 35 ಮನೆಗಳು ಭಾಗಶಃ ಹಾನಿಗೊಳಗಾಗಿವೆ. ‘ಬಿ’ ಅಥವಾ ‘ಸಿ’ ವರ್ಗದಲ್ಲಿ ಪರಿಗಣಿಸಿ ಪರಿಹಾರ ಕಲ್ಪಿಸಲು ಕ್ರಮ ತೆಗೆದುಕೊಳ್ಳಲಾಗುವುದು. ಒಂದು ವೇಳೆ ಸಮೀಕ್ಷೆಯಿಂದ ಕೈಬಿಟ್ಟು ಹೋಗಿದ್ದರೆ ಪಟ್ಟಿಯಲ್ಲಿ ಸೇರ್ಪಡೆ ಮಾಡಲಾಗುವುದು. ಗ್ರಾಮಕ್ಕೆ ಸಾರಿಗೆ ಸಮಸ್ಯೆಯನ್ನು ಕೂಡ ಗಮನಿಸಲಾಗಿದೆ. ಈ ಕುರಿತು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳ ಜೊತೆ ಚರ್ಚಿಸಲಾಗುವುದು. ಉಪ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪನೆಗೆ ಪ್ರಯತ್ನಿಸಲಾಗುವುದು’ ಎಂದು ಭರವಸೆ ನೀಡಿದರು.

ನದಿಗೆ ಸೇರುವಂತೆ:‘ಸಮೀಪದಲ್ಲಿರುವ ಕೆರೆ ತುಂಬಿದಾಗ ಹೆಚ್ಚುವರಿ ನೀರನ್ನು ನೇರವಾಗಿ‌ ನದಿಗೆ ಸೇರಿಸಲು ಸೂಕ್ತ ಯೋಜನೆ ರೂಪಿಸಲಾಗುವುದು. ಇದರಿಂದ ಮುಳುಗಡೆ ಆಗುವ ಅಥವಾ ಮಳೆಗಾಲದಲ್ಲಿ ‌ಗ್ರಾಮ‌ ಜಲಾವೃತವಾಗುವ ಭೀತಿ ದೂರ ಮಾಡಲಾಗುವುದು. ಅತಿಕ್ರಮಣ ತೆರವುಗೊಳಿಸಿ ಕೆರೆಯ ನೀರು ಸರಾಗವಾಗಿ ಮಲಪ್ರಭಾ ನದಿಗೆ ಹರಿಯುವಂತೆ ಕ್ರಮ ವಹಿಸಲಾಗುವುದು’ ಎಂದು ತಿಳಿಸಿದರು.

‘ಗ್ರಾಮದಲ್ಲಿ ಸಾಮಾಜಿಕ ಭದ್ರತಾ ಯೋಜನೆಯಡಿ 50 ಮಂದಿ ವಿವಿಧ ಮಾಸಾಶನ ಮಂಜೂರಾತಿ ಪತ್ರಗಳನ್ನು ವಿತರಿಸಲಾಗಿದೆ. 50 ಮಂದಿಗೆ ಜಮೀನಿನ‌ ಖಾತಾ ಹಾಗೂ ನಕಾಶೆ ಸಮೇತ ಆರ್.ಟಿ.ಸಿ. ಒದಗಿಸಲಾಗಿದೆ’ ಎಂದರು.

‘ಮನೆ ಹಾನಿ ಪರಿಹಾರ ಕೆಲವರಿಗೆ ಸಿಕ್ಕಿದ್ದು, ಅವರೂ ಸ್ವಲ್ಪ ಹಣ ಸೇರಿಸಿ ಚೆನ್ನಾಗಿ ಮನೆ ಕಟ್ಟಿಸಿಕೊಂಡಿದ್ದಾರೆ. ಕೆಲವರಿಗೆ ಮೊದಲ‌ ಕಂತು ನೀಡಲಾಗಿದೆ. ಇನ್ನುಳಿದವರ ಖಾತೆಗೆ ನೇರವಾಗಿ ಹಂತ ಹಂತವಾಗಿ ಪರಿಹಾರಧನ ಬಿಡುಗಡೆ ಮಾಡಲಾಗುವುದು. ರಸ್ತೆ ನಿರ್ಮಾಣಕ್ಕೆ ಮುನ್ನವೇ ಚರಂಡಿ ನಿರ್ಮಿಸುವಂತೆ ಸೂಚಿಸಿದ್ದೇನೆ. ಅನಧಿಕೃತವಾಗಿ ಕಟ್ಟಿರುವ ಮನೆಗಳಿಗೆ ಪರಿಹಾರ ಒದಗಿಸಲು ನಿಯಮಾವಳಿಯಲ್ಲಿ ಅವಕಾಶವಿಲ್ಲ. ಸರ್ಕಾರಿ ಜಾಗದಲ್ಲಿ ನಿರ್ಮಿಸಿಕೊಂಡಿದ್ದರೆ ಅಕ್ರಮ ಸಕ್ರಮ ಯೋಜನೆಯ ಲಾಭ ಪಡೆಯಲು ಅರ್ಜಿ ಸಲ್ಲಿಸುವುದಕ್ಕೆ ಮಾರ್ಚ್‌ವರೆಗೆ ಅವಕಾಶವಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT