ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್‌ಇಪಿ ದೇಶದ ದಿಕ್ಕನ್ನೇ ಬದಲಿಸಲಿದೆ: ಡಾ.ವೈದ್ಯ

ಎನ್‌ಇಪಿ ಕುರಿತ ರಾಷ್ಟ್ರೀಯ ಸಮ್ಮೇಳನಕ್ಕೆ ಚಾಲನೆ
Last Updated 30 ಏಪ್ರಿಲ್ 2022, 13:11 IST
ಅಕ್ಷರ ಗಾತ್ರ

ಬೆಳಗಾವಿ: ‘ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ತಕ್ಷಣವೇ ಇಂತಹ ಶಿಕ್ಷಣ ನೀತಿ ಜಾರಿಗೊಳಿಸಬೇಕಿತ್ತು. ಅದು ವಿಳಂಬವಾದ ಬಗ್ಗೆ ಚರ್ಚಿಸುವ ಬದಲಿಗೆ, ಈಗ ಶಿಕ್ಷಣದ ಉದ್ದೇಶ ಸರಿಪಡಿಸುವ ಅಗತ್ಯವಿದೆ’ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್‌ಎಸ್‌ಎಸ್‌)ದ ಸಹ ಸರಕಾರ್ಯವಾಹ ಡಾ.ಮನಮೋಹನ ವೈದ್ಯ ಅಭಿಪ್ರಾಯಪಟ್ಟರು.

ಇಲ್ಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ(ವಿಟಿಯು)ದಲ್ಲಿ ಭಾರತೀಯ ಶಿಕ್ಷಣ ಮಂಡಳದ ಕರ್ನಾಟಕ ಉತ್ತರ ಪ್ರಾಂತ್ಯದ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ರಾಷ್ಟ್ರೀಯ ಶಿಕ್ಷಣ ನೀತಿ(ಎನ್‌ಇಪಿ)-2020' ಕುರಿತ ರಾಷ್ಟ್ರೀಯ ಸಮ್ಮೇಳನದಲ್ಲಿ ಅವರು ಮಾತನಾಡಿದರು.

‘ಪ್ರತಿಯೊಬ್ಬರಿಗೆ ವೃತ್ತಿ ಕೌಶಲ ಅಭಿವೃದ್ಧಿಪಡಿಸಿಕೊಳ್ಳಬೇಕು. ಜೊತೆಗೆ ಮಾನವೀಯ ಮೌಲ್ಯಗಳನ್ನೂ ಬೆಳೆಸಿಕೊಳ್ಳಬೇಕು. ಶಿಕ್ಷಣ ವ್ಯವಸ್ಥೆ ಉದ್ಯೋಗವಕಾಶ ಕಲ್ಪಿಸುವ ಜೊತೆಗೆ, ಯುವಪೀಳಿಗೆ ಮನದಲ್ಲಿ ಮಾನವೀಯ ಮೌಲ್ಯಗಳನ್ನೂ ಬಿತ್ತಬೇಕು. ಎನ್ಇಪಿ ಈ ಆಶಯ ಈಡೇರಿಸಲಿದೆ. ದೇಶದ ದಿಕ್ಕನ್ನೇ ಬದಲಿಸಲಿದೆ’ ಎಂದರು.

ಉನ್ನತ ಶಿಕ್ಷಣ ಸಚಿವ ಸಿ.ಎನ್.ಅಶ್ವತ್ಥನಾರಾಯಣ, ‘130 ಕೋಟಿ ಜನಸಂಖ್ಯೆ ಹೊಂದಿದ ಭಾರತ ಅಭಿವೃದ್ಧಿ ಹೊಂದಿದ ವಿಶ್ವದ ನಾನಾ ದೇಶಗಳೊಂದಿಗೆ ಸ್ಪರ್ಧಿಸಬೇಕಿದೆ. ಆದರೆ, ವಿವಿಧತೆಯಲ್ಲಿ ಏಕತೆ ಹೊಂದಿರುವ ನಮ್ಮ ದೇಶ ಯಾವ ಮಾನದಂಡದ ಆಧಾರದಲ್ಲಿ ಸ್ಪರ್ಧಿಸಬೇಕು ಎಂಬುದು ಮಹತ್ವದ್ದು. ಎನ್ಇಪಿ ಇದಕ್ಕೆ ಪರಿಹಾರವಾಗಿದೆ. 21ನೇ ಶತಮಾನದಲ್ಲಿ ಮನುಷ್ಯನ ಬದುಕಿಗೆ ಅಗತ್ಯವಿರುವ ಸಂಗತಿ ಕಲಿಸುವುದೇ ಎನ್ಇಪಿ ಗುರಿಯಾಗಿದೆ. ಇದರ ಅನುಷ್ಠಾನದಿಂದ ಭಾರತ ಜಗತ್ತಿನ ಬಲಶಾಲಿ ರಾಷ್ಟ್ರವಾಗಲಿದೆ’ ಎಂದು ತಿಳಿಸಿದರು.

ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ , ‘ಸಮಾಜದಲ್ಲಿ ಬದಲಾವಣೆ ತರಲು ಶಿಕ್ಷಣವೇ ಪ್ರಮುಖ ಅಸ್ತ್ರವಾಗಿದೆ. ಮೆಕಾಲೆ ಶಿಕ್ಷಣ ಪದ್ಧತಿ ಇದಕ್ಕೆ ವ್ಯತಿರಿಕ್ತ ಪರಿಣಾಮ ಬೀರಿದೆ. ಸಮಷ್ಠಿಯತ್ತ ಸಾಗಬೇಕಿದ್ದ ಮನುಷ್ಯನ ಚಿಂತನೆಗಳು ಸ್ವಾರ್ಥದತ್ತ ಸಾಗುತ್ತಿವೆ. ಇದಕ್ಕೆ ಎನ್ಇಪಿ ಪರಿಹಾರವಾಗಲಿದೆ’ ಎಂದರು.

‘ಶಿಕ್ಷಣ ಕ್ಷೇತ್ರ ಎದುರಿಸುತ್ತಿರುವ ಹಲವು ಸವಾಲುಗಳನ್ನು ಎನ್‌ಇಪಿ ಪರಿಹರಿಸಲಿದೆ. ರಾಜ್ಯದ ಶೇ‌.50 ಪ್ರಾಥಮಿಕ ಶಾಲೆಗಳಲ್ಲಿ ಇದೇ ಶೈಕ್ಷಣಿಕ ವರ್ಷದಿಂದ ಅದನ್ನು ಜಾರಿಗೊಳಿಸಲಾಗುವುದು’ ಎಂದರು.

ಭಾರತೀಯ ಶಿಕ್ಷಣ ಮಂಡಳದ ಕಾರ್ಯಕರ್ತರು ಶಿಕ್ಷಣದ ವಿವಿಧ ಆಯಾಮಗಳ ಬಗ್ಗೆ ರಚಿಸಿದ ಪುಸ್ತಕಗಳನ್ನು ಗಣ್ಯರು ಬಿಡುಗಡೆಗೊಳಿಸಿದರು. ಭಾರತೀಯ ಶಿಕ್ಷಣ ಮಂಡಳದ ರಾಷ್ಟ್ರೀಯ ಅಧ್ಯಕ್ಷ ಪ್ರೊ.ಸಚ್ಚಿದಾನಂದ ಜೋಶಿ ಅಧ್ಯಕ್ಷತೆ ವಹಿಸಿದ್ದರು. ಆರ್‌ಎಸ್‌ಎಸ್‌ ಮುಖಂಡ ಶಂಕರಾನಂದ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಮಾಶಂಕರ ಪಚೋರಿ, ವಿಟಿಯು ಕುಲಪತಿ ಡಾ.ಕರಿಸಿದ್ದಪ್ಪ, ವಿಧಾನ ಪರಿಷತ್‌ ಸದಸ್ಯ ಅರುಣ ಶಹಾಪುರ, ಕೆಎಲ್‌ಇ ಸೊಸೈಟಿ ನಿರ್ದೇಶಕ ಮಹಾಂತೇಶ ಕವಟಗಿಮಠ ಇತರರಿದ್ದರು. ಡಾ.ಸತೀಶ ಜಿಗಜಿನ್ನಿ ಕಾರ್ಯಕ್ರಮ ನಿರೂಪಿಸಿದರು.

ಎರಡು ದಿನಗಳ ಕಾಲ ನಡೆಯಲಿರುವ ದೇಶದ ವಿವಿಧ ರಾಜ್ಯಗಳ ಶಿಕ್ಷಣ ತಜ್ಞರು ಹಾಗೂ ಪ್ರಾಧ್ಯಾಪಕರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT