ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಎದೆ ಹಾಲು ಸೇವನೆ: ರೋಗ ನಿರೋಧಕ ಶಕ್ತಿ ಹೆಚ್ಚಳ’

Last Updated 3 ಆಗಸ್ಟ್ 2021, 7:42 IST
ಅಕ್ಷರ ಗಾತ್ರ

ಬೆಳಗಾವಿ: ‘ನವಜಾತ ಶಿಶುವಿಗೆ ತಾಯಿಯ ಎದೆ ಹಾಲು ಉಣಿಸುವುದು ಎಲ್ಲ ಪೌಷ್ಟಿಕಾಂಶಗಳನ್ನು ನೀಡುವ ಅತ್ಯುತ್ತಮ ವಿಧಾನವಾಗಿದೆ. ಇದರಿಂದ ಮಗುವಿನ ರೋಗ ನಿರೋಧಕ ಶಕ್ತಿಯು ಹೆಚ್ಚಾಗುತ್ತದೆ’ ಎಂದು ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷೆ ರತ್ನಪ್ರಭಾ ಬೆಲ್ಲದ ಹೇಳಿದರು.

ನಗರದ ಕೆಎಲ್‌ಇ ಸಂಸ್ಥೆಯ ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ ಜೆಎನ್ ವೈದ್ಯಕೀಯ ಮಹಾವಿದ್ಯಾಲಯ, ಕೆಎಲ್‌ಇ ಸಂಸ್ಥೆಯ ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ಚಿಕ್ಕಮಕ್ಕಳ ವೈದ್ಯರ ಸಂಸ್ಥೆ ಸಹಯೋಗದಲ್ಲಿ ಚಿಕ್ಕಮಕ್ಕಳ ವಿಭಾಗವು ಸೋಮವಾರ ಏರ್ಪಡಿಸಿದ್ದ ಸ್ತನ್ಯಪಾನ ಸಪ್ತಾಹವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಹೆರಿಗೆಯಾದ ಮೊದಲ ದಿನದ ಎದೆಹಾಲಿನಲ್ಲಿ ಮಗುವಿಗೆ ಬೇಕಾಗಿರುವ ಪ್ರೊಟೀನ್, ಖನಿಜಾಂಶಗಳು ಮತ್ತು ಕೊಬ್ಬಿನಲ್ಲಿ ಕರಗುವ ವಿಟಮಿನ್‌ಗಳು ಹೆಚ್ಚಿನ ಪ್ರಮಾಣದಲ್ಲಿರುತ್ತವೆ. ಅದು ಮಗುವನ್ನು ಅನಾರೋಗ್ಯದಿಂದ ಕಾಪಾಡುತ್ತದೆ. ಆದ್ದರಿಂದ ಅದು ಮಗುವಿಗೆ ಅಮೃತ ಸಮಾನವಾಗಿದೆ’ ಎಂದರು.

‘ಆಧುನಿಕತೆಯ ಭರದಲ್ಲಿ ಮತ್ತು ಸೌಂದರ್ಯ ಹಾಳಾಗುತ್ತದೆ ಎಂಬ ತಪ್ಪು ಕಲ್ಪನೆಯಿಂದಾಗಿ ಮಹಿಳೆಯರು ನವಜಾತ ಶಿಶುವಿಗೆ ಎದೆಹಾಲು ಉಣಿಸಲು ಹಿಂದೇಟು ಹಾಕುತ್ತಿದ್ದಾರೆ. ಇದು ಮಗುವಿಗೆ ಮಾಡುವ ಅನ್ಯಾಯವೇ ಸರಿ. ಮಗು ಜನಿಸಿದ ತಕ್ಷಣ ಎದೆ ಹಾಲು ಉಣಿಸಿ, ಆರೋಗ್ಯ ಕಾಪಾಡಬೇಕು’ ಎಂದು ಸಲಹೆ ನೀಡಿದರು.‌

‘ಅನಾರೋಗ್ಯ ಅಥವಾ ಇನ್ನಿತರ ಕಾರಣಗಳಿಂದ ಕೆಲ ತಾಯಂದಿರಿಗೆ ಎದೆ ಹಾಲು ಬರದೇ ಆ ಮಕ್ಕಳಿಗೆ ತೊಂದರೆ ಉಂಟಾಗುವ ಸಂಭವ ಅಧಿಕವಾಗಿರುತ್ತದೆ. ಆ ವೇಳೆ ಮಹಿಳೆಯರು ಎದೆ ಹಾಲನ್ನು ದಾನವಾಗಿ ನೀಡಬೇಕು. ಅನೇಕ ಆಸ್ಪತ್ರೆಗಳಲ್ಲಿ ಎದೆ ಹಾಲು ದಾನ ಮಾಡುವುದಕ್ಕೆ ವ್ಯವಸ್ಥೆ ಇದೆ. ಈ ಮೂಲಕ ಮಕ್ಕಳನ್ನು ಅಪೌಷ್ಟಿಕಾಂಶತೆಯಿಂದ ತಪ್ಪಿಸಬಹುದು’ ಎಂದು ತಿಳಿಸಿದರು.

ಜವಾಹರಲಾಲ್ ನೆಹರು ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ.ನಿರಂಜನಾ ಎಸ್. ಮಹಾಂತಶೆಟ್ಟಿ ಮಾತನಾಡಿ, ‘ನವಜಾತ ಶಿಶುವಿಗೆ ಎದೆಹಾಲು ಉಣಿಸುವಂತೆ ತಾಯಂದಿರಿಗೆ ಜಾಗೃತಿ ಮೂಡಿಸಲು ಸರ್ಕಾರೇತರ ಸಂಘ–ಸಂಸ್ಥೆಗಳು ಮುಂದಾಗಬೇಕು. ಶುಶ್ರೂಷಕರೂ ಈ ನಿಟ್ಟಿನಲ್ಲಿ ಮಹತ್ವವನ್ನು ತಿಳಿಸಿಕೊಡಬೇಕು’ ಎಂದರು.

ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಎಂ.ವಿ. ಜಾಲಿ, ಡಾ.ವಿ.ಡಿ. ಪಾಟೀಲ, ಡಾ.ವಿ.ಎ. ಕೋಠಿವಾಲೆ, ಡಾ.ರೂಪಾ ಬೆಲ್ಲದ, ಡಾ.ಮನಿಷಾ ಭಾಂಡನಕರ, ಡಾ.ಮಹೇಶ ಕಮತೆ, ಡಾ.ವಿ.ಎಂ. ಪಟ್ಟಣಶೆಟ್ಟಿ, ಸುಧಾರೆಡ್ಡಿ, ಡಾ.ಆರೀಫ್‌ ಮಾಲ್ದಾರ, ಡಾ.ವಿ.ಎ. ಪಾಟೀಲ, ಡಾ.ಭಾವನಾ ಕೊಪ್ಪದ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT