ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಎಲ್‌ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆಯಲ್ಲಿ ವಿಶ್ವ ಹೃದಯ ದಿನಾಚರಣೆ

‘ಹೃದಯವಂತಿಕೆಯಿಂದ ಹೃದ್ರೋಗ ದೂರ’
Last Updated 29 ಸೆಪ್ಟೆಂಬರ್ 2022, 15:26 IST
ಅಕ್ಷರ ಗಾತ್ರ

ಬೆಳಗಾವಿ: ‘ಹೃದ್ರೋಗದ ಬರದಂತೆ ತಡೆಯಲು ಬಹಳ ಸುಲಭ ಮಾರ್ಗಗಳಿವೆ. ನಮ್ಮ ಪರಿಸರದಲ್ಲೇ ಬೆಳೆಯುವ ಶುದ್ಧ ಆಹಾರ ಸೇವನೆ, ವಾಯುವಿಹಾರ ಹಾಗೂ ಹಿತಮಿತವಾದ ಯೋಗಾಭ್ಯಾಸ ಮಾಡಿದರೆ ಸಾಕು’ ಎಂದು ಕೆಎಲ್‌ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ಹೃದ್ರೋಗ ವಿಭಾಗದ ಮುಖ್ಯಸ್ಥ ಡಾ.ಸುರೇಶ ಪಟ್ಟೇದ ಹೇಳಿದರು.

ಕೆಎಲ್‌ಇಎಸ್‌ ಆಸ್ಪತ್ರೆಯಲ್ಲಿ ಗುರುವಾರ ಆಯೋಜಿಸಿದ್ದ ವಿಶ್ವ ಹೃದಯ ದಿನಾಚರಣೆಯಲ್ಲಿ ಮಾತನಾಡಿದ ಅವರು, ‘ಜೀವನ ಪದ್ಧತಿ ತಪ್ಪದಂತೆ ನೋಡಿಕೊಳ್ಳುವುದು ಸುಲಭದ ದಾರಿ. ಅದನ್ನು ಮರೆತ ನಾವು ರೋಗ ಬಂದ ಮೇಲೆ ಜಗತ್ತೇ ತಲೆ ಮೇಲೆ ಬಿದ್ದಂತೆ ಆಡುತ್ತೇವೆ. ಹೃದಯವನ್ನು ಹೃದಯಕ್ಕಾಗಿಯೇ ಹೃದಯವಂತಿಕೆಯಿಂದ ಬಳಸಬೇಕಿದೆ’ ಎಂದರು.

‘ಎರಡೂವರೆ ದಶಕದ ಹಿಂದೆ ಹೃದ್ರೋಗ ಕೆಲವೇ ಜನರಲ್ಲಿ ಇತ್ತು. ಇಂದು ನೂರಾರು ಸಂಖ್ಯೆಯಲ್ಲಿ ತಪಾಸಣೆ ಮತ್ತು ಚಿಕಿತ್ಸೆಗಾಗಿ ಪ್ರತಿದಿನ ಆಸ್ಪತ್ರೆಗೆ ಬರುತ್ತಿದ್ದಾರೆ. ಈ ವೇಗವನ್ನು ಗಮನಿಸಿದರೆ 2030ಕ್ಕೆ ಹೃದ್ರೋಗವೇ ‘ವಿಶ್ವದ ನಂಬರ್‌ ಒನ್‌ ಕೊಲೆಗಾರ’ ರೋಗವಾಗಿ ಮಾರ್ಪಡಲಿದೆ. ಅದರಲ್ಲೂ ಭಾರತದಲ್ಲಿ ಶೇ 30ರಷ್ಟು ಸಾವು ಕೇವಲ ಹೃದ್ರೋಗದಿಂದ ಸಂಭವಿಸಲಿವೆ’ ಎಂದು ಅವರು ಎಚ್ಚರಿಸಿದರು.

‘ದಶಕಗಳಿಂದ ಕೆಎಲ್‌ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆಯಲ್ಲಿ ಹೃದಯ ವಿಜ್ಞಾನ ವಿಭಾಗವು ಕಾರ್ಯನಿರ್ವಹಿಸುತ್ತಿದೆ. ಈ ಭಾಗದಲ್ಲಿ ಹೃದ್ರೋಗಿಗಳ ಆರೈಕೆಯಲ್ಲಿ ಮುಂಚೂಣಿಯಲ್ಲಿದೆ. ಎಲ್ಲ ಸಂಕೀರ್ಣ ಹೃದ್ರೋಗಗಳಿಗೆ ಸಮಗ್ರ ಚಿಕಿತ್ಸೆ ನಮ್ಮ ಆಸ್ಪತ್ರೆಯಲ್ಲಿ ಲಭ್ಯವಿದೆ’ ಎಂದು ಹೇಳಿದರು.

ಹಿರಿಯ ಹೃದಯ ಶಸ್ತ್ರಚಿಕಿತ್ಸಕ ಡಾ.ರಿಚರ್ಡ್‌ ಸಾಲ್ಡಾನಾ ಮಾತನಾಡಿ, ‘ಹೃದ್ರೋಗವೇ ಜೀವನದ ಕೊನೆಯ ಹಂತವಲ್ಲ. ಹೃದಯ ಕಸಿಯ ಕೊಡುಗೆ ನೀಡಿದ ವೈದ್ಯವಿಜ್ಞಾನವು ಈ ರೋಗಿಗಳಿಗೆ ಚಿಕಿತ್ಸೆಯ ವರದಾನ ನೀಡಿದೆ. ಕೆಎಲ್‌ಇ ಆಸ್ಪತ್ರೆಯಲ್ಲಿ ಇಲ್ಲಿಯವರೆಗೆ 27 ಸಾವಿರಕ್ಕೂ ಅಧಿಕ ಹೃದಯ ಶಸ್ತ್ರಚಿಕಿತ್ಸೆ ನೆರವೇರಿಸಿದ್ದೇವೆ. 2 ಲಕ್ಷಕ್ಕೂ ಅಧಿಕ ಹೃದಯ ಚಿಕಿತ್ಸಾ ಪ್ರಕ್ರಿಯೆಗಳನ್ನು ಮಾಡಲಾಗಿದೆ. ಬಿಪಿಎಲ್ ಕಾರ್ಡ್‌ ಹೊಂದಿದವರಿಗೆ ಸರ್ಕಾರದ ಯೋಜನೆಯಲ್ಲೇ ಚಿಕಿತ್ಸೆ ನೀಡಲಾಗಿದೆ’ ಎಂದರು.

ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಎಂ.ವಿ. ಜಾಲಿ ಮಾತನಾಡಿ, ‘ವಿಶ್ವದಲ್ಲಿ ಹೃದ್ರೋಗಿಗಳ ಕೇವಲ 40 ವರ್ಷದೊಳಗೇ ಕಂಡುಬರುತ್ತಿದ್ದರು. ಇದನ್ನು ಆಘಾತಕಾರಿ ಎಂದುಕೊಂಡಿದ್ದೇವು. ಆದರೆ, ಈಗ ಕೇವಲ 25ನೇ ವಯಸ್ಸಿಗೇ ರೋಗಿಗಳಾಗುತ್ತಿದ್ದಾರೆ. ಚಿಕಿತ್ಸೆಗೂ ಮುನ್ನ ಎಲ್ಲರೂ ಆರೋಗ್ಯವಂತರೇ, ಚಿಕಿತ್ಸೆ ಬಳಿಕ ಎಲ್ಲರೂ ಮಧುಮೇಹ, ಹೃದ್ರೋಗಿಗಳೇ ಎನ್ನುವ ಸ್ಥಿತಿ ಇದೆ’ ಎಂದರು.

ಯುರಾಲಾಜಿಯ ಹಿರಿಯ ಶಸ್ತ್ರಚಿಕಿತ್ಸಕ ಡಾ.ಆರ್.ಬಿ. ನೇರ್ಲಿ ಮಾತನಾಡಿದರು. ಡಾ.ಮೋಹನ ಗಾನ, ನರರೋಗ, ನರಶಸ್ತ್ರಚಿಕಿತ್ಸೆ, ಹೃದಯದ ಅರಿವಳಿಕೆ ತಜ್ಞವೈದ್ಯರು ಸೇರಿದಂತೆ ವಿವಿಧ ವಿಭಾಗಗಳ ತಜ್ಞರು ಇದ್ದರು. ಯಶಸ್ವಿ ಹೃದಯ ಕಸಿ ಮಾಡಲಾದದ ವ್ಯಕ್ತಿಗಳು ಅನುಭವ ಹಂಚಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT