ಶನಿವಾರ, ನವೆಂಬರ್ 28, 2020
25 °C
ಚನ್ನಮ್ಮನ ಚಿತ್ರ, ಜನ್ಮ ದಿನಾಂಕ ತಿಳಿಯಲು ಸಾಹಿತಿಗಳ ಯೋಜನೆ

ಕಿತ್ತೂರು ಇತಿಹಾಸ ಸಂಶೋಧನಾ ಪ್ರತಿಷ್ಠಾನ ರಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ಕಿತ್ತೂರು ರಾಣಿ ಚನ್ನಮ್ಮನ ಭಾವಚಿತ್ರ (ಚಹರೆ) ಮತ್ತು ಜನ್ಮ ದಿನಾಂಕ ತಿಳಿಯಲು ಇಲ್ಲಿನ ಸಾಹಿತಿಗಳು ಲೇಖಕ ಯ.ರು. ಪಾಟೀಲ ನೇತೃತ್ವದಲ್ಲಿ  ‘ಕಿತ್ತೂರು ಇತಿಹಾಸ ಸಂಶೋಧನಾ ಪ್ರತಿಷ್ಠಾನ’ ರಚಿಸಿದ್ದಾರೆ.

ಕನ್ನಡ ಸಾಹಿತ್ಯ ಭವನದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು. ಕಾರ್ಯದರ್ಶಿಗಳಾಗಿ ನಿರ್ಮಲಾ ಭಟ್, ಜ್ಯೋತಿ ಬದಾಮಿ, ಕೋಶಾಧ್ಯಕ್ಷರಾಗಿ ಸಾಹಿತಿ ಏಣಗಿ ಸುಭಾಷ್, ಸಲಹೆಗಾರರಾಗಿ ಇತಿಹಾಸ ತಜ್ಞರಾದ ಸ್ಮಿತಾ ಸುರೇಬಾನಕರ, ಆರ್.ಎಂ. ಷಡಕ್ಷರಿ, ಸಂತೋಷ ಹಾನಗಲ್ ಅವರನ್ನು ಆಯ್ಕೆ ಮಾಡಲಾಯಿತು.

‘ಪ್ರತಿಷ್ಠಾನದಿಂದ ಸಂಶೋಧನೆ ನಡೆಸಿ, ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿ ಮಾನ್ಯತೆ ಪಡೆಯಬೇಕು’ ಎಂಬ ತೀರ್ಮಾನಕ್ಕೆ ಬರಲಾಯಿತು.

‘ಚನ್ನಮ್ಮನ ಜನ್ಮ ದಿನ ಮತ್ತು ವಿಜಯೋತ್ಸವ ದಿನಾಂಕದ ಬಗ್ಗೆ ಗೊಂದಲ ಇದೆ. ಭಾವಚಿತ್ರ ಕೂಡ ಹೇಗಿದೆ ಎನ್ನುವ ಸ್ಪಷ್ಟ ಸಾಕ್ಷಿ ಇಲ್ಲ. ಇದರ ಬಗ್ಗೆ  ಸಂಶೋಧನೆಗೆ ಸರ್ಕಾರ ಸತ್ಯ ಶೋಧಕ ಸಮಿತಿ ರಚಿಸಬೇಕು. ಚನ್ನಮ್ಮನ ಇತಿಹಾಸಕ್ಕೆ ಹತ್ತಿರವಾಗಿರುವ ವರ್ಣಚಿತ್ರವೊಂದು ದೊರೆತಿದೆ. ಅದರ ಬಗ್ಗೆ ಇರುವ ಕೆಲ ಗೊಂದಲಗಳನ್ನು ಬಗೆಹರಿಸಿಕೊಳ್ಳಬೇಕಿದೆ. ಹೀಗಾಗಿ, ಈ ಹಿಂದೆ ಇದ್ದ ಚಿತ್ರ ಕಲಾವಿದರ ಮನೆತನಗಳನ್ನು ಹುಡುಕಿ ಆ ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಬೇಕು. ಅಧ್ಯಯನ ವರದಿಯನ್ನು ಸರ್ಕಾರಕ್ಕೆ ನೀಡಲಾಗುವುದು’ ಎಂದು ತಿಳಿಸಿದರು.

‘ಮಹಾರಾಷ್ಟ್ರ ಸರ್ಕಾರ ಸಂಶೋಧನೆ ನಡೆಸಿ ಛತ್ರಪತಿ ಶಿವಾಜಿ ಜನ್ಮ ದಿನಾಂಕವನ್ನು ಪತ್ತೆ ಹಚ್ಚಿದೆ. ಅಂತೆಯೇ ರಾಜ್ಯ ಸರ್ಕಾರ ಕೂಡ ಸಂಶೋಧನೆಗೆ ಕರಮ ಕೈಗೊಳ್ಳಬೇಕು’ ಎಂದು ಸಾಹಿತಿ ಸರಜೂ ಕಾಟ್ಕರ್ ತಿಳಿಸಿದರು.

ಯ.ರು. ಪಾಟೀಲ ಮಾತನಾಡಿ, ‘ನ. 14 ಚನ್ನಮ್ಮನ ಜನ್ಮ ದಿನ ಆಚರಿಸಲಾಗುತ್ತಿದೆ. ಆದರೆ, ನಿಖರ ದಾಖಲೆ ಇಲ್ಲ. ಅ.23ರಂದು ಕಿತ್ತೂರು ವಿಜಯೋತ್ಸವ ಮಾಡಲಾಗುತ್ತಿತ್ತು. ಸರ್ಕಾರ ಆ ದಿನವನ್ನೇ ಜಯಂತಿ ಎಂದೂ ಹೇಳುತ್ತಿದೆ. ಇದರ ಬಗ್ಗೆಯೂ ಸ್ಪಷ್ಟ ನಿರ್ಧಾರಕ್ಕೆ ಬರಬೇಕಾಗಿದೆ’ ಎಂದರು.

‘ಚನ್ನಮ್ಮನ ಫೋಟೊ ಇದೆ ಎಂದು ಹೇಳುವುದಕ್ಕೆ ಸಾಧ್ಯವಿಲ್ಲ. ಏಕೆಂದರೆ, ಚನ್ನಮ್ಮ ಮೃತಪಟ್ಟ ಎರಡು ದಶಕಗಳ ನಂತರ ಫೋಟೋಗ್ರಫಿ ಭಾರತಕ್ಕೆ ಬಂದಿದೆ. ಬಿಡಿಸಿದ ಚಿತ್ರವಿದ್ದರೆ ಸ್ಪಷ್ಟಡಿಸಿಕೊಳ್ಳಬೇಕು. ಜನ್ಮ ದಿನದ ಬಗ್ಗೆ ದಾಖಲೆ ಇಲ್ಲ. ಅದನ್ನು ಕೂಡ ಪತ್ತೆ ಹಚ್ಚಬೇಕಾಗಿದೆ’ ಎಂದು ಇತಿಹಾಸ ಸಂಶೋಧಕಿ ಡಾ.ಸ್ಮಿತಾ ಸುರೇಬಾನಕರ ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.