ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಾಂಗ್ರೆಸ್ ತೆಕ್ಕೆಗೆ ಯಲ್ಲಮ್ಮ ಪುರಸಭೆ 

ಅಧ್ಯಕ್ಷರಾಗಿ ಚಿನ್ನವ್ವ ಹುಚ್ಚಣ್ಣವರ, ಉಪಾಧ್ಯಕ್ಷರಾಗಿ ದಾವಲಬಿ ಸನದಿ ಆಯ್ಕೆ
Published 27 ಆಗಸ್ಟ್ 2024, 13:48 IST
Last Updated 27 ಆಗಸ್ಟ್ 2024, 13:48 IST
ಅಕ್ಷರ ಗಾತ್ರ

ಸವದತ್ತಿ: ಎರಡು ದಶಕಗಳಿಂದ ಬಿಜೆಪಿ ಆಡಳಿತದಲ್ಲಿದ್ದ ಯಲ್ಲಮ್ಮ ಪುರಸಭೆ ಇದೀಗ ಶಾಸಕ ವಿಶ್ವಾಸ್ ವೈದ್ಯ ಅವರ ನಾಯಕತ್ವದಲ್ಲಿ ಕಾಂಗ್ರೆಸ್ ತೆಕ್ಕೆಗೆ ಮರಳಿದೆ. ಹಲವು ತಿಂಗಳಿಂದ ತೆರವಾಗಿದ್ದ ಪುರಸಭೆಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಅವಿರೋಧವಾಗಿ ಮಂಗಳವಾರ ಆಯ್ಕೆಯಾದರು.

2ನೇ ಅವಧಿ ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ‘ಅ’ ವರ್ಗ ಮಹಿಳೆ ಮೀಸಲಾತಿ ನಿಗದಿಯಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಚಿನ್ನವ್ವ ಹುಚ್ಚಣ್ಣವರ, ಉಪಾಧ್ಯಕ್ಷ ಸ್ಥಾನಕ್ಕೆ ದಾವಲಬಿ ಸನದಿ ಅವರು ನಾಮಪತ್ರ ಸಲ್ಲಿಸಿದ್ದರು.

ಶಾಸಕರು, ಸಂಸದರು ಹಾಗೂ 27 ಸದಸ್ಯ ಬಲದ ಮತದಾನದಲ್ಲಿ ಸಂಸದ ಸೇರಿ ನಾಲ್ವರು ಗೈರು ಹಾಜರಾಗಿದ್ದರು. ನಿಗದಿತ ಅವಧಿಯಲ್ಲಿ ಬೇರೆ ನಾಮಪತ್ರ ಸಲ್ಲಿಕೆಯಾಗದ ಕಾರಣ ನಾಮಪತ್ರ ಸಲ್ಲಿಸಿದ್ದ ಚಿನ್ನವ್ವ ಹುಚ್ಚಣ್ಣವರ ಅವರನ್ನು ಅಧ್ಯಕ್ಷರನ್ನಾಗಿ, ದಾವಲಬಿ ಸನದಿ ಅವರನ್ನು ಉಪಾಧ್ಯಕ್ಷರನ್ನಾಗಿ ಅವಿರೋಧ ಆಯ್ಕೆ ಮಾಡಲಾಗಿದೆ ಎಂದು ಚುನಾವಣಾಧಿಕಾರಿ ತಹಶೀಲ್ದಾರ್‌ ಎಂ.ಎನ್. ಹೆಗ್ಗನ್ನವರ ಘೋಷಿಸಿದರು.

ಶಾಸಕ ವಿಶ್ವಾಸ್ ವೈದ್ಯ ಮಾತನಾಡಿ, ‘ಶಾಸಕನಾದ ಬಳಿಕ ಪುರಸಭೆಯ ಆಡಳಿತವನ್ನು ಕಾಂಗ್ರೆಸ್ ಪಕ್ಷ ತನ್ನ ಮುಡಿಗೇರಿಸಿಕೊಂಡಿದೆ. ಎರಡು ದಶಕಗಳಿಂದ ವಿರೋಧ ಪಕ್ಷದಲ್ಲಿದ್ದ ಕಾಂಗ್ರೆಸ್ ಪಕ್ಷ ಇದೀಗ ಅಧಿಕಾರಕ್ಕೇರಿದೆ. ಇದು ಕಾರ್ಯಕರ್ತರಿಗೆ ಹಾಗೂ ವೈಯಕ್ತಿಕವಾಗಿ ಅತೀವ ಸಂತಸ ತಂದಿದೆ. ಯಲ್ಲಮ್ಮ ಕ್ಷೇತ್ರದಲ್ಲಿ ಕಾಂಗ್ರೆಸ್ ಪುನಃಶ್ಚೇತನಗೊಳಿಸಿ ಎಲ್ಲ ಆಡಳಿತದಲ್ಲಿಯೂ ಪಕ್ಷವನ್ನು ಆಡಳಿತಕ್ಕೆ ತರಲಾಗುವುದು. ಇದೇ ಉತ್ಸಾಹದಿಂದ ಕಾರ್ಯಕರ್ತರು ಮುಂಬರುವ ಚುನಾವಣೆಗಳಲ್ಲಿ ವಿಜಯ ಗಳಿಸಲಿ. ನೂತನ ಅಧ್ಯಕ್ಷ, ಉಪಾಧ್ಯಕ್ಷರು ನಗರದ ಅಭಿವದ್ಧಿಯತ್ತ ಗಮನಹರಿಸಬೇಕು. ಜನರ ಆಶೋತ್ತರಗಳಿಗೆ ಧ್ವನಿಯಾಗಬೇಕು’ ಎಂದರು.

ನೂತನ ಅಧ್ಯಕ್ಷೆ ಹಾಗೂ ಉಪಾಧ್ಯಕ್ಷೆಯನ್ನು ಶಾಸಕ ವಿಶ್ವಾಸ ವೈದ್ಯ ಅವರು ಅಭಿನಂದಿಸಿದರು.

ನಗರದ ಪ್ರಮುಖ ವೃತ್ತಗಳಲ್ಲಿ ಬೆಂಬಲಿಗರಿಂದ ಸಂಭ್ರಮಾಚರಣೆ ನಡೆಯಿತು. ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು.

ಬಸವರಾಜ ಅರಮನಿ, ಮಂಜುನಾಥ ಪಾಚಂಗಿ, ಅಶ್ವತ್ ವೈದ್ಯ, ಜಗದೀಶ ಶಿರಸಂಗಿ, ಯಲ್ಲಪ್ಪ ಗೊರವನಕೊಳ್ಳ, ಬಸವರಾಜ ಆಯಟ್ಟಿ, ಪ್ರವೀಣ ರಾಮಪ್ಪನವರ, ಬಾಪು ಚೂರಿಖಾನ್, ಅಮೀತ್ ಜೋರಾಪೂರ, ಬಸವರಾಜ ಗುರುನ್ನವರ, ರವಿ ದೊಡಮನಿ, ಪ್ರಕಾಶ ಪ್ರಭುನವರ, ನಾಗಪ್ಪ ಪ್ರಭುನವರ, ಸುನೀಲ ಸುಳ್ಳದ, ಲತೀಫ್ ಸವದತ್ತಿ, ಆನಂದ ಕಂಕನವಾಡಿ ಹಾಗೂ ಪ್ರಮುಖರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT