ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಎಂ ಸಮ್ಮುಖದಲ್ಲೇ ಕಾರಜೋಳಗೆ ಬಿಸಿ ಮುಟ್ಟಿಸಿದ ಬಿಜೆಪಿ ಶಾಸಕ ಅಭಯ ಪಾಟೀಲ

Last Updated 29 ಮೇ 2021, 9:27 IST
ಅಕ್ಷರ ಗಾತ್ರ

ಬೆಳಗಾವಿ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಬೆಂಗಳೂರಿನಿಂದ ಶನಿವಾರ ನಡೆಸಿದ ವಿಡಿಯೊ ಕಾನ್ಫರೆನ್ಸ್‌ ವೇಳೆ ಅವರೊಂದಿಗೆ ಪಾಲ್ಗೊಂಡಿದ್ದ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಮತ್ತು ಇಲ್ಲಿಂದ ಭಾಗವಹಿಸಿದ್ದ ದಕ್ಷಿಣ ಮತ ಕ್ಷೇತ್ರದ ಬಿಜೆಪಿ ಶಾಸಕ ಅಭಯ ಪಾಟೀಲ ನಡುವೆ ವಾಗ್ವಾದವಾಯಿತು.

ಶಾಸಕರು ಇಲ್ಲಿನ ಜಿಲ್ಲಾಸ್ಪತ್ರೆ (ಬಿಮ್ಸ್)ನಲ್ಲಿ ಸರಿಯಾದ ಸೌಲಭ್ಯಗಳಿಲ್ಲ ಎಂಬಿತ್ಯಾದಿ ದೂರುಗಳನ್ನು ಹೇಳುತ್ತಿದ್ದರು. ಆಗ, ಕಾರಜೋಳ ಏನನ್ನೋ ಹೇಳಲು ಮುಂದಾದರು. ಆ ನಡುವೆಯೂ ಪಾಟೀಲ ಮಾತು ಮುಂದುವರಿಸಿದ್ದರು. ಮಧ್ಯಪ್ರವೇಶಿಸಿದ ಯಡಿಯೂರಪ್ಪ, ‘ಕಾರಜೋಳ ಏನೋ ಹೇಳುತ್ತಿದ್ದಾರೆ ನೋಡಿ’ ಎಂದು ಹೇಳಿದರು.

‘ಕಾರಜೋಳ ಏಕೆ ಮಾತನಾಡಬೇಕು. ನಾನು ಮಾತನಾಡಬೇಕು. ನೇಕಾರರುಸಾಯುತ್ತಿದ್ದಾರೆ. ಅವರಿಗೆ ಕೋವಿಡ್ ಲಾಕ್‌ಡೌನ್‌ ಪರಿಹಾರ ಕೊಟ್ಟಿಲ್ಲ. ಮಾತನಾಡಬೇಡಿ ಎಂದರೆ ನಮ್ಮನ್ನೇಕೆ ಕರೆದಿದ್ದೀರಿ. ಇಬ್ಬರು ನೇಕಾರರು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾರೆ. ಅದನ್ನು ಹೇಳಬೇಕೋ ಬೇಡವೋ?’ ಎಂದು ಆಕ್ರೋಶದಿಂದ ಕೇಳಿದರು.

‘ನೇಕಾರರ ಸಲುವಾಗಿ ನಿರ್ಧಾರ ಕೈಗೊಳ್ಳಲಾಗಿದೆ. ಪ್ರತಿ ಪವರ್‌ಲೂಮ್‌ ನೇಕಾರರು ಹಾಗೂ ಅಲ್ಲಿನ ಇಬ್ಬರು ಕೂಲಿ ಕಾರ್ಮಿಕರಿಗೆ ಪರಿಹಾರ ನೀಡಲು ಮುಖ್ಯಮಂತ್ರಿ ನಿರ್ಧರಿಸಿದ್ದಾರೆ’ ಎಂದು ಕಾರಜೋಳ ತಿಳಿಸಿದರು.

‘ಬಿಮ್ಸ್‌ನಲ್ಲಿ ರೋಗಿಗಳಿಗೆ ಸರಿಯಾಗ ಆರೈಕೆ ದೊರೆಯುತ್ತಿಲ್ಲ. ಬಹಳ ದೂರುಗಳಿವೆ. ಆಮ್ಲಜನಕ ಕೊರತೆ ಆಗುತ್ತಿದೆ. ಹೀಗಾಗಿ, ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ’ ಎಂದು ಅಭಯ ಹೇಳಿದರು. ಆಗ, ಮಧ್ಯಪ್ರವೇಶಿಸಿದ ಕಾರಜೋಳ ಮಧ್ಯಪ್ರವೇಶಿಸಿ ಮಾತನಾಡಿದರು. ‘ಬಿಮ್ಸ್‌ನಲ್ಲಿ 13 ಕೆ.ಎಲ್. ಆಮ್ಲಜನಕ ಟ್ಯಾಂಕ್ ಇದೆ. ಆಮ್ಲಜನಕ ಸಮಸ್ಯೆ ಇಲ್ಲ’ ಎಂದು ಸಮರ್ಥಿಸಿಕೊಂಡರು.

ಇಬ್ಬರನ್ನೂ ಸಮಾಧಾನಪಡಿಸಿದ ಮುಖ್ಯಮಂತ್ರಿ, ‘ನಾನೇ ಖುದ್ದಾಗಿ ಬೆಳಗಾವಿಗೆ ಬಂದು ಸಮಸ್ಯೆ ಬಗೆಹರಿಸುತ್ತೇನೆ’ ಎಂದು ಭರವಸೆ ನೀಡಿ ಚರ್ಚೆಗೆ ತೆರೆ ಎಳೆದರು.

ಇತರ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಮ್ಮುಖದಲ್ಲೇ ನಡೆದ ಈ ಘಟನೆಯಿಂದ ಕಾರಜೋಳ ಹಾಗೂ ಮುಖ್ಯಮಂತ್ರಿ ಮುಜುಗರಕ್ಕೆ ಒಳಗಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT