ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಮ್ಸ ಅಭಿವೃದ್ಧಿಗೆ ಬದ್ಧ: ಸಚಿವ ಜಾರಕಿಹೊಳಿ

Last Updated 7 ಜುಲೈ 2013, 12:38 IST
ಅಕ್ಷರ ಗಾತ್ರ

ಬೆಳಗಾವಿ: `ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಬಿಮ್ಸ) ಅಭಿವೃದ್ಧಿಗಾಗಿ ಐದು ವರ್ಷಗಳ ಅವಧಿಯಲ್ಲಿ ಆಗಬೇಕಾದ ಕಾಮಗಾರಿಗಳ ಬಗ್ಗೆ ಯೋಜನೆ ರೂಪಿಸಬೇಕು' ಎಂದು ಜಿಲ್ಲಾ ಉಸ್ತುವಾರಿ ಹಾಗೂ ಅಬಕಾರಿ ಖಾತೆ ಸಚಿವ ಸತೀಶ ಜಾರಕಿಹೊಳಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಶನಿವಾರ ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಕಾರ್ಯಚಟುವಟಿಕೆಗಳ ಪ್ರಗತಿ ಪರಿಶೀಲನೆ ನಡೆಸಿದ ಅವರು, ಇತರೆ ವೈದ್ಯಕೀಯ ಸಂಸ್ಥೆಗಳಿಗೆ ಹೋಲಿಸಿದಾಗ ಬಿಮ್ಸ ಸಂಸ್ಥೆಗೆ ರೋಗಿಗಳು ಬರುವ ಸಂಖ್ಯೆ ಹೆಚ್ಚಿದೆ. ಇಲ್ಲಿ ಮೂಲ ಸೌಲಭ್ಯಗಳನ್ನು ಹೆಚ್ಚಾಗಿ ಅಭಿವೃದ್ಧಿಪಡಿಸುವುದು ಅವಶ್ಯವಿದೆ. ಇದಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿ ಅನುಮೋದನೆ ಪಡೆದು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದರು.

ಬಿಮ್ಸಗೆ ಹೊಂದಿಕೊಂಡಂತೆ 500 ಹಾಸಿಗೆಗಳ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ ಅವಶ್ಯಕತೆ ಇದೆ. ಇದಕ್ಕಾಗಿ 100 ಕೋಟಿ ರೂಪಾಯಿ ಮೊತ್ತದ ಪ್ರಸ್ತಾವ ಸರ್ಕಾರಕ್ಕೆ ಈಗಾಗಲೇ ಸಲ್ಲಿಸಲಾಗಿದೆ. ಸರ್ಕಾರದಿಂದ ಅನುಮೋದನೆ ಪಡೆದು ಈ ಆಸ್ಪತ್ರೆ ನಿರ್ಮಾಣಕ್ಕೆ ಕ್ರಮಕೈಗೊಳ್ಳಲಾಗುವುದು ಎಂದರು.

`ಜಿಲ್ಲಾ ಆಸ್ಪತ್ರೆಯು ತುಂಬಾ ಹಳೆಯ ಕಟ್ಟಡದಲ್ಲಿದೆ. ಆಸ್ಪತ್ರೆಯ ವಿವಿಧ ವಾರ್ಡುಗಳು ಒಂದೇ ಕಟ್ಟಡದಲ್ಲಿ ಇಲ್ಲ. ಬೇರೆ ಬೇರೆ ಕಟ್ಟಡಗಳಲ್ಲಿ ವಾರ್ಡುಗಳು ಇರುವುದರಿಂದ ತುರ್ತಾಗಿ ತಜ್ಞರ ಅಭಿಪ್ರಾಯ ಪಡೆಯಲು ಸಮಸ್ಯೆಯಾಗಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ಸುಪರ್ ಸ್ಪೇಷಾಲಿಟಿ ಆಸ್ಪತ್ರೆ ಅವಶ್ಯವಾಗಿದ್ದು, ಸರ್ಕಾರದ ಮೇಲೆ ಈ ವಿಷಯದ ಕುರಿತು ಒತ್ತಡ ತರಬೇಕು' ಎಂದು ಬಿಮ್ಸ ನಿರ್ದೇಶಕ ಡಾ. ರಾಮಯ್ಯ ಮನವಿ ಮಾಡಿದರು.

ವೈದ್ಯಕೀಯ ಸಂಸ್ಥೆಯಲ್ಲಿ ಹಾಗೂ ಜಿಲ್ಲಾ ಆಸ್ಪತ್ರೆಯಲ್ಲಿ ಸಿಟಿ ಸ್ಕ್ಯಾನ್ ಹಾಗೂ ಇನ್ನಿತರ ಅತ್ಯಾಧುನಿಕ ಯಂತ್ರೋಪಕರಣಗಳನ್ನು ಅಳವಡಿಸುವ ಅವಶ್ಯವಿದೆ. ಈ ಕುರಿತು ಈಗಾಗಲೇ ಸರ್ಕಾರಕ್ಕೆ 6 ಕೋಟಿ ರೂಪಾಯಿ ಮೊತ್ತದ ಪ್ರಸ್ತಾವ ಕಳುಹಿಸಲಾಗಿದೆ ಎಂದು ತಿಳಿಸಿದರು.

ಎಂಸಿಐ ಮಾನದಂಡದಂತೆ ಸ್ನಾತಕೋತ್ತರ ವೈದ್ಯ ವಿದ್ಯಾರ್ಥಿಗಳಿಗೆ ವಸತಿ ಸೌಕರ್ಯ ಕಲ್ಪಿಸುವುದು ಅವಶ್ಯವಿದೆ. 100 ಕೋಣೆಗಳ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗೆ ಪ್ರತ್ಯೇಕವಾಗಿ 2 ವಸತಿಗೃಹಗಳನ್ನು ನಿರ್ಮಾಣ ಮಾಡಬೇಕು. ಸಂಸ್ಥೆಗೆ ಬರುವ ರೋಗಿಗಳ ಸಂಬಂಧಿಕರಿಗೆ ಹಾಗೂ ಸಹಾಯಕರ ವಸತಿಗಾಗಿ 50 ಕೋಣೆಗಳ ಧರ್ಮಶಾಲೆ ನಿರ್ಮಾಣ ಮಾಡುವ ಅವಶ್ಯವಿದೆ ಎಂದರು.

ಸಂಸ್ಥೆಯ ಆವರಣದಲ್ಲಿ ಜಲ ತ್ಯಾಜ್ಯ ಸಂಸ್ಕರಣಾ ಘಟಕ ಸ್ಥಾಪನೆ, ಒಳಚರಂಡಿ ವ್ಯವಸ್ಥೆ ನವೀಕರಣ, ಸಂಸ್ಥೆಗೆ ಅವಶ್ಯಕ ಔಷಧಿ ಹಾಗೂ ರಾಸಾಯನಿಕಗಳ ಪೂರೈಕೆ ಆಗುವ ಅವಶ್ಯಕತೆ ಇದೆ. ಸಾರ್ವಜನಿಕರ ಹಿತದೃಷ್ಟಿಯಿಂದ ಕ್ಯಾನ್ಸರ್ ಘಟಕ ಸ್ಥಾಪಿಸುವ ಯೋಜನೆ ಸಿದ್ಧಪಡಿಸಲಾಗಿದೆ. ಇದಕ್ಕಾಗಿ ಸಂಸ್ಥೆಯ ಆವರಣದಲ್ಲಿ ನಿವೇಶನವಿದ್ದು, ನೀಲನಕ್ಷೆ ಹಾಗೂ ಅಂದಾಜು ಪತ್ರಿಕೆ ಸಿದ್ಧಪಡಿಸಲಾಗಿದೆ ಎಂದು ಹೇಳಿದರು.

ಬಿಮ್ಸನಲ್ಲಿರುವ ಸಮಸ್ಯೆಗಳ ಪರಿಹಾರಕ್ಕೆ ಹಾಗೂ ಅಭಿವೃದ್ಧಿಗಾಗಿ ಸಮಗ್ರ ಯೋಜನೆ ರೂಪಿಸಬೇಕು. ಅವಶ್ಯಕತೆಗನುಗುಣವಾಗಿ ಸರ್ಕಾರದಿಂದ ಹಂತ ಹಂತವಾಗಿ ಅನುದಾನ ಪಡೆದು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಸಚಿವ ಜಾರಕಿಹೊಳಿ ತಿಳಿಸಿದರು.

ಸಂಸ್ಥೆಯ ಪ್ರತಿಯೊಂದು ವಿಭಾಗದ ಕಾರ್ಯವೈಖರಿ ಹಾಗೂ ಸಮಸ್ಯೆಗಳನ್ನು ಪರಿಶೀಲಿಸಿದ ಸಚಿವರು, ಇವೆಲ್ಲವುಗಳಿಗೆ ಪರಿಹಾರ ಕಂಡುಹಿಡಿಯಲಾಗುವುದು. ಆಸ್ಪತ್ರೆಗೆ ಬರುವ ರೋಗಿಗಳನ್ನು ಸೇವಾಮನೋಭಾವದಿಂದ ಉಪಚರಿಸಬೇಕು ಎಂದು ಸೂಚಿಸಿದರು.

ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಕೊರತೆಯನ್ನು ಪರಿಹರಿಸಬೇಕು ಎಂದು ರಾಮಯ್ಯ ಅವರು ಮಾಡಿದ ಮನವಿಗೆ ಸ್ಪಂದಿಸಿದ ಸಚಿವರು, ಇತರೆ ಸರ್ಕಾರಿ ಇಲಾಖೆಗಳಂತೆ ಬಿಮ್ಸನಲ್ಲಿ ಸಹ ಸಿಬ್ಬಂದಿ ಕೊರತೆ ಇದೆ. ಅವಶ್ಯಕ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳುವಂತೆ ವೈದ್ಯಕೀಯ ಶಿಕ್ಷಣ ಖಾತೆ ಸಚಿವರನ್ನು ಕೋರಲಾಗುವುದು ಎಂದು ತಿಳಿಸಿದರು.

`ಜನಪ್ರತಿನಿಧಿಗಳಿಗೆ ಗೌರವ ನೀಡಬೇಕು. ಗ್ರಾಮ ಪಂಚಾಯತಿಯಿಂದ ಹಿಡಿದು ಸಂಸತ್ ಸದಸ್ಯರ ಸಲಹೆಯನ್ನು ಕೇಳಬೇಕು. ಆಸ್ಪತ್ರೆಗೆ ಬರುವ ಬಡ ರೋಗಿಗಳಿಗೆ ಸೂಕ್ತ ಚಿಕಿತ್ಸೆ ಒದಗಿಸಬೇಕು. ಎಲ್ಲ ಔಷಧಿಗಳನ್ನು ಆಸ್ಪತ್ರೆಯಲ್ಲಿಯೇ ನೀಡಬೇಕು' ಎಂದು ಶಾಸಕರಾದ ಫಿರೋಜ್ ಸೇಠ್, ವೀರಕುಮಾರ ಪಾಟೀಲ, ಸಂಭಾಜಿ ಪಾಟೀಲ ಹೇಳಿದರು.

`ಪ್ರತಿ 3 ತಿಂಗಳಿಗೊಮ್ಮೆ ಪರಿಶೀಲನಾ ಸಭೆ ನಡೆಸಲಾಗುವುದು. ಆಸ್ಪತ್ರೆಯಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಹುಬ್ಬಳ್ಳಿಯ ಕಿಮ್ಸ ಆಸ್ಪತ್ರೆಯಂತೆ ಯಾವುದೇ ದೂರು ಬರಬಾರದು' ಎಂದು ಸತೀಶ ಜಾರಕಿಹೊಳಿ ಸೂಚಿಸಿದರು.

ಮುಖ್ಯಮಂತ್ರಿಗಳ ನರೋತ್ಥಾನ ಯೋಜನೆಯಡಿ ಮಹಾನಗರ ಪಾಲಿಕೆಗೆ ಬಿಡುಗಡೆಯಾಗಿರುವ ಎರಡನೇ ಹಂತದ 100 ಕೋಟಿ ರೂಪಾಯಿ ಅನುದಾನದಲ್ಲಿ ಆಸ್ಪತ್ರೆ ಹಾಗೂ ಸಂಸ್ಥೆಯ ಅಭಿವೃದ್ಧಿಗೆ ಸಹಾಯ ಮಾಡುವ ಬಗ್ಗೆ ಚಿಂತನೆ ನಡೆಸಲಾಗಿದೆ. ಈ ಅನುದಾನದಲ್ಲಿ ಬಿಮ್ಸನ ಅಭಿವೃದ್ಧಿ ಕೆಲಸಗಳಿಗೆ ಬಳಸಿಕೊಳ್ಳುವ ಯೋಚನೆ ಇದೆ ಎಂದರು.

ಸಂಸದ ಸುರೇಶ ಅಂಗಡಿ, ಜಿಲ್ಲಾಧಿಕಾರಿ ಎನ್.ಜಯರಾಂ, ಜಿಲ್ಲಾ ಆಸ್ಪತ್ರೆಯ ಅಧೀಕ್ಷಕ ಡಾ. ಎಸ್.ಟಿ.ಕಳಸದ ಹಾಗೂ ವಿವಿಧ ವಿಭಾಗಗಳ ಮುಖ್ಯಸ್ಥರು ಸಭೆಯಲ್ಲಿ ಭಾಗವಹಿಸಿದ್ದರು.

ಆಸ್ಪತ್ರೆಗೆ ಭೇಟಿ: ಸಭೆಯ ನಂತರ ಸಚಿವ ಸತೀಶ ಜಾರಕಿಹೊಳಿ, ಶಾಸಕ ಸಂಭಾಜಿ ಪಾಟೀಲ ಅವರು ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದರು.

`ವಿಶೇಷ ಪ್ಯಾಕೇಜ್ ಪ್ರಸ್ತಾವ ಸಲ್ಲಿಸಿಲ್ಲ'
ಬೆಳಗಾವಿ: `ಇದೇ 12 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಲಿರುವ ಬಜೆಟ್‌ನಲ್ಲಿ ಬೆಳಗಾವಿ ಜಿಲ್ಲೆಗೆ ವಿಶೇಷ ಪ್ಯಾಕೇಜ್ ನೀಡುವಂತೆ ಯಾವುದೇ ಪ್ರಸ್ತಾವ ಸಲ್ಲಿಸಿಲ್ಲ' ಎಂದು ಸಚಿವ ಸತೀಶ ಜಾರಕಿಹೊಳಿ ಸ್ಪಷ್ಟಪಡಿಸಿದರು.

ಬಿಮ್ಸನ ಪ್ರಗತಿ ಪರಿಶೀಲನಾ ಸಭೆಯ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಎಲ್ಲ ಇಲಾಖೆಗಳಿಗೆ ಕಳೆದ ವರ್ಷಕ್ಕಿಂತ ಶೇ 10ರಷ್ಟು ಹೆಚ್ಚಿನ ಅನುದಾನ ಸಿಗಲಿದೆ. ಎಲ್ಲ ಇಲಾಖೆಯವರು ಕ್ರಿಯಾ ಯೋಜನೆ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಿದ್ದಾರೆ ಎಂದು ತಿಳಿಸಿದರು.

ಬಿಮ್ಸ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಅಗತ್ಯವಿರುವ ಸೌಲಭ್ಯಗಳಿಗೆ ಆದ್ಯತೆ ನೀಡಲಾಗುವುದು. ಸಿಬ್ಬಂದಿ ಕೊರತೆ ನಿವಾರಿಸಲು ಕಾಲಾವಕಾಶ ಬೇಕಾಗುತ್ತದೆ. ಸರ್ಕಾರಕ್ಕೆ ಈಗಾಗಲೇ ಸಲ್ಲಿಸಿರುವ ಪ್ರಸ್ತಾವಗಳಿಗೆ ಮಂಜೂರಾತಿ ದೊರಕಿಸಿಕೊಡಲು ಪ್ರಯತ್ನ ಮಾಡಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT