ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಡುಗಡ್ಡೆಯಾಗಿದ್ದ ಕೋಟೆ ಜನವಸತಿ ಪ್ರದೇಶ

1992ರ ನೆರೆ, ಮಳೆ ಪ್ರವಾಹ ಅವಾಂತರ
Last Updated 12 ಆಗಸ್ಟ್ 2019, 8:48 IST
ಅಕ್ಷರ ಗಾತ್ರ

ಕಂಪ್ಲಿ: ‘ಅಂದು ಮಧ್ಯರಾತ್ರಿ ಏಕಾಏಕಿ ಮನೆಗೆ ಹೊಳೆ ನೀರು ನುಗ್ಗಿದಾಗ ಗಾಢನಿದ್ದೆಯಲ್ಲಿದ್ದ ನಮಗೆ ದಿಕ್ಕೇ ತೋಚಲಿಲ್ಲ. ಮನೆಯವರೆಲ್ಲ ಉಟ್ಟ ಬಟ್ಟೆ ಮೇಲೆ ಕೈಗೆ ಸಿಕ್ಕ ಬಟ್ಟೆ ಬರೆ ಗಂಟು ಕಟ್ಟಿಕೊಂಡು ಹೊರಬಂದಾಗ ಆಕಸ್ಮಿಕ ಹರಿಗೋಲು ಬಂತು. ಅದರಲ್ಲಿಯೇ ಕುಳಿತು ಪೇಟೆ(ಕಂಪ್ಲಿ) ಸೇರಿದೆವು’

1992ರಲ್ಲಿ ತುಂಗಭದ್ರಾ ಜಲಾಶಯದಿಂದ ಸುಮಾರು 4.50ಲಕ್ಷ ಕ್ಯುಸೆಕ್ ನೀರು ನದಿಗೆ ಬಿಡುಗಡೆ ಮಾಡಿದ್ದಾಗ ಏರ್ಪಟ್ಟ ಪ್ರವಾಹದ ನೆನಪನ್ನು ಕೋಟೆ ಪ್ರದೇಶದ ನಿವಾಸಿ ಕಟ್ಟೆ ಅಯ್ಯಪ್ಪ ಬಿಚ್ಚಿಟ್ಟರು. ‘ಅಂದು ಪ್ರವಾಹದಜತೆಗೆ ಭಾರಿ ಮಳೆ ಬೇರೆ. ಇಡೀ ಕೋಟೆ ಜನವಸತಿ ಪ್ರದೇಶ ನಡುಗಡ್ಡೆಯಾಗಿತ್ತು’ ಎಂದರು.

‘ಹೊಳೆ ಆಂಜನೇಯ ದೇವಸ್ಥಾನದಲ್ಲಿ ಮುಂಗಾರಿನಲ್ಲಿ ಬೆಳೆದ ಭತ್ತ ಒಕ್ಕಲು ಮಾಡಿ ಸಂಗ್ರಹಿದ್ದೆವು. ಅದನ್ನು ಆಳುಗಳು ಕಾಯುತ್ತಿದ್ದರು. ಹೊಳೆ ನೀರು ದೇವಸ್ಥಾನಕ್ಕೆ ನುಗ್ಗಿದ ವೇಳೆ ಇಬ್ಬರು ಕೂಲಿ ಆಳುಗಳು ಎಚ್ಚರಗೊಂಡು ಈಜುತ್ತಾ ನಮ್ಮ ಮನೆಗೆ ಬಂದು ಎಚ್ಚರಿಸಿದ್ದರಿಂದ ನಮ್ಮ ಕುಟುಂಬ ಪ್ರಾಣಾಪಾಯದಿಂದ ಪಾರಾದೆವು’ ಎಂದರು.

‘ಬೆಳಕು ಹರಿಯುವದೊರೊಳಗೆ ಕೋಟೆ ಜನವಸತಿ ಪ್ರದೇಶದ ಬಹುತೇಕ ಕುಟುಂಬಗಳು ಕಂಪ್ಲಿ ಸಂಬಂಧಿಕರ ಮನೆಗೆ ಸೇರಿದರೆ, ಇನ್ನು ಕೆಲ ಕುಟುಂಬಗಳು ತಳವಾರ ಓಣಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಆರಂಭಿಸಿದ ಗಂಜಿ ಕೇಂದ್ರದಲ್ಲಿ ನೆಲೆಸಿದರು’ ಎಂದರು.

‘ಮಳೆ ಮತ್ತು ನದಿ ಪ್ರವಾಹಕ್ಕೆ ಅಂದು 150ಮನೆಗಳು ಕುಸಿದವು. ಮನೆಯಲ್ಲಿದ್ದ ದವಸ, ಧಾನ್ಯ ಮತ್ತು ಹೊಲಗಳ ಮುಖ್ಯ ದಾಖಲೆ ಪತ್ರಗಳು, ಮನೆಯಲ್ಲಿದ್ದ ದೈನಂದಿನ ಬಳಕೆ ವಸ್ತುಗಳು ನೀರು ಪಾಲಾದವು. ಆ ಸಂದರ್ಭದಲ್ಲಿ ಗಂಭೀರ ಸ್ಥಿತಿ ಅರಿತ ಸರ್ಕಾರ ಪುರಸಭೆ ವ್ಯಾಪಿಯ ಶಿಬಿರದಿನ್ನಿ ಪ್ರದೇಶದಲ್ಲಿ ಸ್ಥಳ ಗುರುತಿಸಿ ಎಲ್ಲ ಕುಟುಂಬಗಳು ಸ್ಥಳಾಂತರಗೊಳ್ಳುವಂತೆ ಸೂಚಿಸಿದರು. ಅದರೆ ಯಾವ ಕುಟುಂಬಗಳು ಸರ್ಕಾರ ಸೂಚಿಸದ ಸ್ಥಳಕ್ಕೆ ತೆರಳಲಿಲ್ಲ’ ಎಂದು ವಿವರಿಸಿದರು.

‘1992ರಲ್ಲಿ ಅತೀ ಹೆಚ್ಚು ನೀರು ಹರಿದು ಬಂದದ್ದು, ಬಿಟ್ಟರೆ, ಇಲ್ಲಿಯವರೆಗೆ ಆ ಪ್ರಮಾಣದಲ್ಲಿ ನದಿಗೆ ನೀರು ಬಂದಿಲ್ಲ’ ಎಂದರು.

‘ಕೋಟೆ ಪ್ರದೇಶದಲ್ಲಿರುವ ಸುಮಾರು 600ಮನೆಯ 5ಸಾವಿರ ಜನಸಂಖ್ಯೆ ಮಾನಸಿಕವಾಗಿ ಮೂಲ ಸ್ಥಳದಲ್ಲಿಯೇ ವಾಸಿಸಲು ಇಂದಿಗೂ ಇಷ್ಟಪಡುತ್ತಾರೆ. ಅವರ ಹೊಲ ಗದ್ದೆಗಳು ಸಮೀಪದಲ್ಲಿರುವುದರಿಂದ ಸ್ಥಳಾಂತರಕ್ಕೆ ಮನಸ್ಸು ಮಾಡುತ್ತಿಲ್ಲ. ನದಿ ಪ್ರವಾಹ ಬರುತ್ತೆ, ಮೂರು ಇರುತ್ತೆ ಹೋಗುತ್ತೆ, ಅದೆಲ್ಲ ನಮ್ಮ ಜನಕ್ಕೆ ಮಾಮೂಲು ಆಗಿದೆ’ ಎಂದು ಮನದಾಳ ವ್ಯಕ್ತಪಡಿಸಿದರು.

‘1992ರಲ್ಲಿ ತುಂಗಭದ್ರಾ ನದಿ ಪ್ರವಾಹ ಮತ್ತು ಮಳೆಗೆ ಕೋಟೆ ಪ್ರದೇಶದಲ್ಲಿ ನೂರಾರು ಮನೆಗಳಿಗೆ ಹಾನಿಯಾಗಿತ್ತು. ಅಂದಿನ ವೀರಪ್ಪಮೊಯ್ಲಿ ಸರ್ಕಾರ ಸಿಮೆಂಟ್ ಶೀಟ್, ಕಬ್ಬಿಣ ಗರಂಡಾಲ, ಮನೆ ನಿರ್ಮಿಸಿಕೊಳ್ಳಲು ಸಿಮೆಂಟ್ ಚೀಲ ವಿತರಿಸಿತು. ಆದರೆ ಸಾವಿರಾರು ಎಕರೆಯಲ್ಲಿ ಬೆಳೆದ ಭತ್ತ, ಕಬ್ಬು, ಬಾಳೆ ಬೆಳೆ ಅಪಾರ ನಷ್ಟ ಆದರೂ ಯಾವುದೇ ಪರಿಹಾರ ನೀಡಲಿಲ್ಲ’ ಎಂದು ರೈತರಾದ ಕೆ.ಎಸ್. ಈರಣ್ಣ, ಅದ್ದಪ್ಪ ನಾಗಲಾರೆಪ್ಪ ನೆನಪಿಸಿಕೊಂಡರು.

‘ನದಿ ತೀರದ ಕೋಟೆ ಜನವಸತಿ ಪ್ರದೇಶ ಭವಿಷ್ಯದ ದೃಷ್ಟಿಯಿಂದ ಸೂಕ್ತ ಸ್ಥಳಕ್ಕೆ ಸ್ಥಳಾಂತರಗೊಂಡರೆ ಉತ್ತಮ ಎನ್ನುವುದು’ ಕೋಟೆ ಬಹುತೇಕರ ಹಿರಿಯರ ಅಭಿಪ್ರಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT