ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

9 ತಿಂಗಳಲ್ಲಿ 247 ಮಂದಿ ಕ್ಷಯರೋಗದಿಂದ ಸಾವು, ಜಿಲ್ಲೆಗಳಿಗೆ ಕೇಂದ್ರ ತಂಡ ಭೇಟಿ

Last Updated 24 ಅಕ್ಟೋಬರ್ 2021, 13:23 IST
ಅಕ್ಷರ ಗಾತ್ರ

ಬಳ್ಳಾರಿ: ಬಳ್ಳಾರಿ ಮತ್ತು ಹೊಸಪೇಟೆ ಸೇರಿದಂತೆ ಅವಿಭಜಿತ ಜಿಲ್ಲೆಯಲ್ಲಿ ಕೇವಲ 9 ತಿಂಗಳಲ್ಲಿ 247 ಮಂದಿ ಕ್ಷಯರೋಗದಿಂದ ಮೃತಪಟ್ಟಿದ್ದಾರೆ!

ಬಳ್ಳಾರಿ ತಾಲೂಕು ಒಂದರಲ್ಲೇ 93 ಮಂದಿ ಈ ರೋಗಕ್ಕೆ ಸಾವಿಗೀಡಾಗಿದ್ದಾರೆ. ಎರಡನೇ ಸ್ಥಾನದಲ್ಲಿ ಸಿರುಗುಪ್ಪ ತಾಲ್ಲೂಕಿದ್ದು, 34 ಮಂದಿ ಮೃತಪಟ್ಟಿದ್ದಾರೆ. ವಿಜಯನಗರ ತಾಲೂಕಿನಲ್ಲಿ 33 ಜನ ಮೃತಪಟ್ಟಿದ್ದು, ಮೂರನೇ ಸ್ಥಾನದಲ್ಲಿದೆ. ಕ್ಷಯರೋಗ ಪ್ರಕರಣ ಜಿಲ್ಲೆಯಲ್ಲಿ ಹೆಚ್ಚಿದ್ದರೂ ಜಿಲ್ಲಾಡಳಿತ ಮಾತ್ರ ಮಾಹಿತಿ ಗೋಪ್ಯತೆ ಕಾಪಾಡಿಕೊಂಡು ತಣ್ಣಗಿದೆ!

ಕ್ಷಯರೋಗ ಪತ್ತೆ, ಚಿಕಿತ್ಸೆ ಮತ್ತು ಚೇತರಿಕೆ ಕುರಿತ ಸಮೀಕ್ಷೆಗಾಗಿ ಕೇಂದ್ರ ಆರೋಗ್ಯ ಸಚಿವಾಲಯದ ಸೂಚನೆ ಮೇಲೆ ಅವಿಭಜಿತ ಬಳ್ಳಾರಿ ಜಿಲ್ಲೆಗೆ ಬಂದಿರುವ ಡಾ.ತಾರಕ್‌ ಶಾ ಅವರ ನೇತೃತ್ವದ ತಜ್ಞ ವೈದ್ಯರ ತಂಡಕ್ಕೆ ಈ ಆಘಾತಕಾರಿ ಮಾಹಿತಿ ಸಿಕ್ಕಿದೆ. ತಂಡ ದೆಹಲಿಗೆ ಹಿಂತಿರುಗಿದ ಬಳಿಕ ಆರೋಗ್ಯ ಸಚಿವಾಲಯಕ್ಕೆ ವರದಿ ಸಲ್ಲಿಸಲಿದೆ. ಇದಕ್ಕೂ ಮುನ್ನ ರಾಜ್ಯ ಆರೋಗ್ಯ ಕಾರ್ಯದರ್ಶಿ ಅವರಿಗೆ ಪ್ರಾಥಮಿಕ ವರದಿ ಸಲ್ಲಿಸಲಿದೆ.

ಕೇಂದ್ರ ತಜ್ಞರ ತಂಡ ಬಳ್ಳಾರಿ ಜಿಲ್ಲೆಯ ವಿವಿಧ ಆಸ್ಪತ್ರೆಗಳಿಗೆ ಭೇಟಿ ಕೊಟ್ಟು ರೋಗಿಗಳು, ಅವರ ಸಂಬಂಧಿಕರು, ವೈದ್ಯರು ಮತ್ತು ಅಧಿಕಾರಿಗಳಿಂದ ಮಾಹಿತಿ ಪಡೆಯುತ್ತಿದೆ. ಬೆಂಗಳೂರು ಎನ್‌ಟಿಇಪಿ ಹಿರಿಯ ಕ್ಷಯರೋಗ ತಜ್ಞ ಡಾ.ಸುರೇಶ್‌ ಶಾಸ್ತ್ರಿ ಈ ತಂಡದ ಸಮನ್ವಯ ಅಧಿಕಾರಿ ಆಗಿದ್ದಾರೆ.

ಜಿಲ್ಲೆಯಲ್ಲಿ 10 ತಿಂಗಳಲ್ಲಿ 3,407 ಕ್ಷಯರೋಗ ಪ್ರಕರಣ ಪತ್ತೆಯಾಗಿದ್ದು, 1,170 ಜನ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. 1,780 ಮಂದಿ ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ರೋಗದಿಂದ ನರಳುತ್ತಿರುವ 24 ಜನರ ಸುಳಿವಿಲ್ಲ. ಅವರ ಪತ್ತೆ ಕಾರ್ಯ ನಡೆಯುತ್ತಿದೆ ಎಂದು ತಂಡದ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

‘ಬಳ್ಳಾರಿ, ಹೊಸಪೇಟೆ, ಸಿರುಗುಪ್ಪ ಮತ್ತು ಸಂಡೂರು ತಾಲೂಕುಗಳಲ್ಲಿ ಹೆಚ್ಚು ಪ್ರಕರಣ ಕಂಡುಬಂದಿರುವುದಕ್ಕೆ ಕಾರಣವೇನು? ವ್ಯಾಪಕವಾಗಿ ನಡೆದಿರುವ ಅದಿರು ಗಣಿಗಾರಿಕೆ, ಹೆಚ್ಚಿನ ಸಂಖ್ಯೆಯಲ್ಲಿರುವ ಹತ್ತಿ ಗಿರಣಿ, ಅಕ್ಕಿ ಗಿರಣಿ ಕಾರಣದಿಂದ ಆಗುತ್ತಿರುವ ಪರಿಸರ ಮಾಲಿನ್ಯವೇ ಕ್ಷಯರೋಗಕ್ಕೆ ಮೂಲವೇ ಎಂಬ ಕುರಿತು ಅಧ್ಯಯನ ನಡೆಯಬೇಕಿದೆ’ ಎಂದೂ ಮೂಲಗಳು ತಿಳಿಸಿವೆ.

ಹಿಂದಿನ 3 ವರ್ಷಗಳಿಗೆ ಹೋಲಿಸಿದರೆ, ಈ ವರ್ಷ 9 ತಿಂಗಳಲ್ಲಿ ಕ್ಷಯರೋಗ ಪ್ರಕರಣಗಳು ಹಾಗೂ ಅದರಿಂದ ಸತ್ತವರ ಸಂಖ್ಯೆ ಕಡಿಮೆ ಇರುವಂತೆ ಮೇಲ್ನೋಟಕ್ಕೆ ಕಂಡುಬಂದರೂ, ಕೊನೆ 3 ತಿಂಗಳು ಇನ್ನೂ ಬಾಕಿ ಇದೆ. 2019ರಲ್ಲಿ 451, 2020ರಲ್ಲಿ 372 ಮಂದಿ ಈ ರೋಗಕ್ಕೆ ಬಲಿಯಾಗಿದ್ದಾರೆ.

ವರ್ಷ ಕ್ಷಯರೋಗಪ್ರಕರಣ ಗುಣಮುಖ ಚಿಕಿತ್ಸೆ ಸತ್ತವರು ಸುಳಿವಿಲ್ಲದವರು
2019 5246 4209 0 451 235
2020 3906 3162 24 372 81
2021 3407 1170 1789 247 24

ಕ್ಷಯರೋಗ ಮುಕ್ತ ದೇಶ?

ಕೇಂದ್ರ ಸರ್ಕಾರ 2025ರ ವೇಳೆಗೆ ದೇಶವನ್ನು ಕ್ಷಯರೋಗ ಮುಕ್ತ ಮಾಡಲು ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಪ್ರತಿ ರಾಜ್ಯದಲ್ಲೂ ತಲಾ ಎರಡು ಜಿಲ್ಲೆಗಳನ್ನು ಆಯ್ಕೆ ಮಾಡಿಕೊಂಡು ಸಮೀಕ್ಷೆ ನಡೆಸುತ್ತಿದೆ ಎಂದು ತಜ್ಞರ ತಂಡದ ಸದಸ್ಯ ಡಾ. ಗುಲ್ಫಮ್‌ ಹಾಶ್ಮಿ ತಿಳಿಸಿದರು.

‘ನಾವು ದೆಹಲಿಗೆ ಹಿಂತಿರುಗಿದ ಬಳಿಕ ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ವರದಿ ಕೊಡಲಿದ್ದೇವೆ. ಈ ವರದಿ ಆಧರಿಸಿ ಸರ್ಕಾರ ಮುಂದಿನ ತೀರ್ಮಾನ ಕೈಗೊಳ್ಳಲಿದೆ ಎಂದು ಹಾಶ್ಮಿ ಸ್ಪಷ್ಟಪಡಿಸಿದರು.

ಕೇಂದ್ರ ತಜ್ಞರ ತಂಡದಲ್ಲಿ ಡಾ. ಸುರೇಶ್‌ ಶಾಸ್ತ್ರಿ, ಡಾ. ತಾರಕ್‌ ಶಾ, ಡಾ. ಶಾಜಿಯಾ ವಫಾಯ್‌, ಡಾ. ಗುಲ್ಫಮ್‌ ಹಾಶ್ಮಿ, ಡಾ. ನಿಶ್ಚಿತ್‌ ಹಾಗೂ ಡಾ. ದೇವಿಗಾನ್‌ ಇದ್ದಾರೆ.

***

ಕೋವಿಡ್‌ನಿಂದ ಮಾಸ್ಕ್‌ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡಿರುವುದರಿಂದ ಕ್ಷಯರೋಗ ಪ್ರಕರಣಗಳ ಸಂಖ್ಯೆಯೂ ಕಡಿಮೆ ಆಗಿರಬಹುದು.

–ಸುರೇಶ್‌ ಶಾಸ್ತ್ರಿ, ಹಿರಿಯ ಕ್ಷಯರೋಗ ತಜ್ಞ .

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT