ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಮ್ಸ್‌: 35 ದಿನದಲ್ಲಿ 300 ಸೋಂಕಿತರು ಗುಣಮುಖ, ಕೇಕ್‌ ಕತ್ತರಿಸಿ ಸಂಭ್ರಮ

ಕೇಕ್‌ ಕತ್ತರಿಸಿ ಸಂಭ್ರಮಿಸಿದ ವೈದ್ಯ ಸಿಬ್ಬಂದಿ!
Last Updated 27 ಮೇ 2021, 16:01 IST
ಅಕ್ಷರ ಗಾತ್ರ

ಬಳ್ಳಾರಿ: ಇಲ್ಲಿನ ವಿಮ್ಸ್‌ ದಂತ ವೈದ್ಯಕೀಯ ಕಾಲೇಜಿನ ಜಿಲ್ಲಾಮಟ್ಟದ ಕೋವಿಡ್‌ ಆರೋಗ್ಯ ಕೇಂದ್ರದಲ್ಲಿ 35 ದಿನದಲ್ಲಿ 300 ಕೊರೊನಾ ಸೋಂಕಿತರು ಗುಣಮುಖರಾಗಿದ್ದಾರೆ.

ಇದೇ ಕಾರಣಕ್ಕೆ ವೈದ್ಯ ಸಿಬ್ಬಂದಿಯು, ಗುಣಮುಖರಾಗಿ ಶುಕ್ರವಾರ ಬಿಡುಗಡೆಯಾಗಲಿರುವವರೊಂದಿಗೆ ಗುರುವಾರ ಕೇಕ್‌ ಕತ್ತರಿಸಿ ಸಂಭ್ರಮಿಸಿದರು. ತಾವೇ ಕೇಕ್‌ ತಿನ್ನಿಸಿ ಭರವಸೆಯನ್ನೂ ಮೂಡಿಸಿದರು.

ವಿಮ್ಸ್‌ ಆಸ್ಪತ್ರೆ ಆವರಣದ ವಿವಿಧ ಕಟ್ಟಡಗಳಲ್ಲಿ ಟ್ರಯಾಜ್‌ ಕೇರ್‌ ಸೆಂಟರ್‌, ವೈದ್ಯಕೀಯ ಆಕ್ಸಿಜನ್‌ ಸೌಲಭ್ಯವುಳ್ಳ ಕೋವಿಡ್‌ ಕೇರ್‌ ಸೆಂಟರ್‌ಗಳು ಕಾರ್ಯನಿರ್ವಹಿಸುತ್ತಿವೆ. ಹೊಸ ದಂತ ವೈದ್ಯಕೀಯ ಕಾಲೇಜಿನ ಕಟ್ಟಡದಲ್ಲಿ ಸದ್ಯ ಆಮ್ಲಜನಕ ಸೌಲಭ್ಯವುಳ್ಳ 41 ಹಾಸಿಗೆಯ ಕೇಂದ್ರ ಕಾರ್ಯನಿರ್ವಹಿಸುತ್ತಿದೆ. ಈ ಕೇಂದ್ರದಲ್ಲಿ ಬಹುತೇಕ ಹಾಸಿಗೆಗಳು ಭರ್ತಿಯಾಗಿರುತ್ತವೆ.

‘ಏಪ್ರಿಲ್‌ 20ರಿಂದ ಮೇ 26ರವರೆಗೆ ನಮ್ಮ ಕೇಂದ್ರದಲ್ಲಿ 300 ಮಂದಿ ಗುಣಮುಖರಾಗಿರುವುದು ಒಂದು ದಾಖಲೆ ಎಂದೆನಿಸಿದೆ. ಸರಾಸರಿ ದಿನಕ್ಕೊಬ್ಬರಂತೆ ಗುಣಮುಖರಾಗಿದ್ದಾರೆ. ಕೇಂದ್ರದ ಎಲ್ಲ ಸಿಬ್ಬಂದಿಯ ಪರಿಶ್ರಮ ಅದಕ್ಕೆ ಕಾರಣ’ ಎಂದು ಕೇಂದ್ರದ ಉಸ್ತುವಾರಿ ಡಾ.ಅನೀಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೇರ್‌ ಸೆಂಟರ್‌ ಒಳಗೆ ಸೋಂಕಿತರೊಂದಿಗೆ ಕೇಕ್‌ ಕತ್ತರಿಸಿದೆವು. ಹೊರಗೆ ವೈದ್ಯ–ಸಿಬ್ಬಂದಿ ಎಲ್ಲರೂ ಕೇಕ್‌ ಕತ್ತರಿಸಿ ಸಂಭ್ರಮಿಸಿದೆವು. ಸೋಂಕಿತರಲ್ಲಿ ಆತ್ಮಸ್ಥೈರ್ಯ ತುಂಬುವುದೇ ನಮ್ಮ ಉದ್ದೇಶವಾಗಿತ್ತು’ ಎಂದರು.

‘ಜಿಲ್ಲೆಯಲ್ಲಿ ಸೋಂಕಿನಿಂದ ಸಾವಿಗೀಡಾಗುವವರ ಪ್ರಮಾಣ ಹೆಚ್ಚಿದೆ ಎಂಬ ಚರ್ಚೆಗೇ ಹೆಚ್ಚು ಆದ್ಯತೆ ದೊರಕಿದೆ. ಆದರೆ ಗುಣಮುಖರಾಗುವವರ ಸಂಖ್ಯೆಯೂ ಹೆಚ್ಚಿದೆ. ಅದಕ್ಕಾಗಿ ವೈದ್ಯ–ಸಿಬ್ಬಂದಿ ನಿರಂತರ ಶ್ರಮಿಸುತ್ತಿದ್ದಾರೆ’ ಎಂದು ಹೇಳಿದರು.

‘ಜಿಲ್ಲೆಯಲ್ಲಿ ಸೋಂಕಿನಿಂದ ಗುಣಮುಖರಾಗುವವರಲ್ಲಿ ಬಹಳ ಮಂದಿಗೆ ಮತ್ತೆ ಸೋಂಕಿನ ನಂತರದ ಅನಾರೋಗ್ಯದ ಲಕ್ಷಣಗಳು ಕಂಡು ಬಾರದೇ ಇರುವುದು ಇನ್ನೊಂದು ವಿಶೇಷ’ ಎಂದು ಹೇಳಿದರು.

ಆಪ್ತಸಮಾಲೋಚನೆ, ಕಿರು ನಾಟಕ, ರಸಮಂಜರಿ

ಇನ್ನೊಂದೆಡೆ, ವಿಮ್ಸ್‌ ಟ್ರಾಮ ಕೇರ್‌ ಸೆಂಟರ್‌ನಲ್ಲಿ ಸೋಂಕಿತರಿಗೆ ಧೈರ್ಯ ತುಂಬಲೆಂದು ಆಪ್ತಸಮಾಲೋಚನೆ ನಡೆಸುವುದರ ಜೊತೆಗೆ ಕಿರುನಾಟಕ ಪ್ರದರ್ಶನ ಮತ್ತು ರಸಮಂಜರಿ ಕಾರ್ಯಕ್ರಮವನ್ನೂ ಭಾರತೀಯ ರೆಡ್‌ ಕ್ರಾಸ್‌ ಸಂಸ್ಥೆಯ ಸರ್ವ್‌ ಕಾರ್ಯಕರ್ತರು ಏರ್ಪಡಿಸಿದ್ದರು. ಆ ಸಂದರ್ಭದಲ್ಲಿ ಹಿಂದಿ ಸಿನಿಮಾ ಗೀತೆಗೊಂದಕ್ಕೆ ಕಾರ್ಯಕರ್ತರು ಪ್ರಸ್ತುತ ಪಡಿಸಿದ ನೃತ್ಯದ ವೀಡಿಯೋ ವೈರಲ್ ಆಗಿತ್ತು.

‘ಟ್ರಾಮ ಕೇರ್‌ ಸೆಂಟರ್‌ನಲ್ಲಿ ದಾಖಲಾಗಿರುವವರ ಪೈಕಿ ಯುವಕರು ಹೆಚ್ಚಿದ್ದು ಮಾನಸಿಕವಾಗಿ ಕುಗ್ಗಿಹೋಗಿದ್ದು ಕಂಡುಬಂದಿತ್ತು. ಹೀಗಾಗಿ ಸರ್ವ್‌ ತಂಡದವರು ಹಾಡು, ಕುಣಿತ, ಮಿಮಿಕ್ರಿ ಏರ್ಪಡಿಸಿದ್ದರು’ ಎಂದು ಸಂಸ್ಥೆಯ ಕಾರ್ಯದರ್ಶಿ ಎಂ.ಎ.ಷಕೀಬ್‌ ತಿಳಿಸಿದರು. ತಂಡದಲ್ಲಿ ತರಬೇತುದಾರರಾದ ನಿಸಾರ್‌ ಅಹ್ಮದ್‌, ಬಿ.ಹರಿಶಂಕರ್ ಅಗರವಾಲ್, ವಿ.ಉಮಾಮಹೇಶ್ವರಿ, ವಿಷ್ಣುಕುಮಾರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT