ಸೋಮವಾರ, ಜನವರಿ 27, 2020
28 °C
ಜಿಲ್ಲಾ ಖನಿಜ ನಿಧಿ ಅನುದಾನದಡಿ ಸಕಲ ಸೌಲಭ್ಯ ಕಲ್ಪಿಸಲು ಯೋಜನೆ

250 ಹಾಸಿಗೆ ಆಸ್ಪತ್ರೆಗೆ ರೂಪುರೇಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ: ಜಿಲ್ಲಾ ಖನಿಜ ನಿಧಿ ಅನುದಾನದಿಂದ ನಗರದ ನೂರು ಹಾಸಿಗೆ ಸರ್ಕಾರಿ ಆಸ್ಪತ್ರೆಯ ಖಾಲಿ ಜಾಗದಲ್ಲಿ 250 ಹಾಸಿಗೆಯ ಸುಸಜ್ಜಿತ ಆಸ್ಪತ್ರೆ ನಿರ್ಮಾಣಕ್ಕೆ ರೂಪುರೇಷೆ ತಯಾರಿಸಲಾಗುತ್ತಿದೆ.

ಜಿಲ್ಲಾಧಿಕಾರಿ ಎಸ್‌.ಎಸ್‌. ನಕುಲ್‌, ಶಾಸಕ ಆನಂದ್‌ ಸಿಂಗ್‌ ಸಮ್ಮುಖದಲ್ಲಿ ಶುಕ್ರವಾರ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದ ಸಭೆಯಲ್ಲಿ ಈ ಕುರಿತು ಸುದೀರ್ಘ ಚರ್ಚೆ ನಡೆಸಲಾಯಿತು. ನುರಿತ ವೈದ್ಯರು, ಎಂಜಿನಿಯರ್‌ಗಳ ಸಲಹೆ ಪಡೆದು ಯಾವುದೇ ಕೊರತೆ ಉಂಟಾಗದ ರೀತಿಯಲ್ಲಿ ಕಟ್ಟಡ ನಿರ್ಮಿಸುವುದರ ಬಗ್ಗೆ ಸುದೀರ್ಘವಾಗಿ ಚರ್ಚಿಸಲಾಯಿತು.

‘ಒಂದು ಸುಸಜ್ಜಿತವಾದ ಆಸ್ಪತ್ರೆಗೆ ಏನೆಲ್ಲ ಬೇಕೋ ಅದೆಲ್ಲ ಇರಬೇಕು. ಆ ರೀತಿ ನೀಲ ನಕ್ಷೆ ಸಿದ್ಧಪಡಿಸಿ, ಅಂದಾಜು ವೆಚ್ಚ ತಯಾರಿಸಬೇಕು’ ಎಂದು ನಕುಲ್‌ ಅವರು ಎಂಜಿನಿಯರ್‌ಗಳಿಗೆ ನಿರ್ದೇಶನ ನೀಡಿದರು.

ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ, ‘₹104 ಕೋಟಿ ವೆಚ್ಚದಲ್ಲಿ 250 ಹಾಸಿಗೆ ಆಸ್ಪತ್ರೆ ನಿರ್ಮಿಸಲು ಉದ್ದೇಶಿಸಲಾಗಿದೆ. ಈ ಕುರಿತು ಪ್ರಾಥಮಿಕ ಹಂತದಲ್ಲಿ ಚರ್ಚೆ ನಡೆಸಿದ್ದೇವೆ. ಜನಪ್ರತಿನಿಧಿಗಳು, ತಜ್ಞರಿಂದ ಸಲಹೆ ಪಡೆಯಲಾಗಿದೆ. ಒಟ್ಟಾರೆ ನಾಲ್ಕು ಅಂತಸ್ತಿನ ಆಸ್ಪತ್ರೆ ಇದಾಗಲಿದೆ. ಪ್ರಸ್ತಾವ ಸಿದ್ಧಪಡಿಸಿ ರಾಜ್ಯ ಸರ್ಕಾರಕ್ಕೆ ಕಳುಹಿಸಿಕೊಡಲಾಗುವುದು. ರಾಜ್ಯ ಸಚಿವ ಸಂಪುಟದಲ್ಲಿ ಒಪ್ಪಿಗೆ ಸಿಕ್ಕ ನಂತರ ಕೆಲಸ ಆರಂಭಿಸಲಾಗುವುದು’ ಎಂದು ಹೇಳಿದರು.

‘ಹೊಸದಾಗಿ ನಿರ್ಮಾಣಗೊಳ್ಳಲಿರುವ ಆಸ್ಪತ್ರೆಯಲ್ಲಿ ಸೋಲಾರ್‌, ಮಳೆ ನೀರು ಸಂಗ್ರಹದ ವ್ಯವಸ್ಥೆ ಇರಲಿದೆ. ಈಗಿರುವ ನೂರು ಹಾಸಿಗೆ ಆಸ್ಪತ್ರೆಯಲ್ಲಿ ಕೆಲ ಉಪಕರಣಗಳ ಖರೀದಿಗೆ ಹೈದರಾಬಾದ್‌ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ₹50 ಲಕ್ಷ ಅನುದಾನ ಒದಗಿಸಲಾಗುವುದು’ ಎಂದು ತಿಳಿಸಿದರು.

ಉಪವಿಭಾಗಾಧಿಕಾರಿ ಶೇಖ್‌ ತನ್ವೀರ್‌ ಆಸಿಫ್‌, ತಹಶೀಲ್ದಾರ್‌ ಎಚ್‌. ವಿಶ್ವನಾಥ್‌, ಜಿಲ್ಲಾ ಆರೋಗ್ಯ ಅಧಿಕಾರಿ ಜನಾರ್ದನ್‌, ಜಿಲ್ಲಾ ಶಸ್ತ್ರಚಿಕಿತ್ಸಕ ಬಸಾರೆಡ್ಡಿ, ನೂರು ಹಾಸಿಗೆ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಸಲೀಂ ಇದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು