ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಆಯುರ್ವೇದ ಕಾಲೇಜಿನಲ್ಲಿ ಸೀಟು ಹೆಚ್ಚಳ

ಸೀಟು ನಿಗದಿಯಾದ ರಾಜ್ಯದ ಮೊದಲ ಕಾಲೇಜು
Last Updated 7 ನವೆಂಬರ್ 2020, 14:35 IST
ಅಕ್ಷರ ಗಾತ್ರ

ಬಳ್ಳಾರಿ: ರಾಜ್ಯದಲ್ಲಿರುವ ನಾಲ್ಕು ಸರ್ಕಾರಿ ಆಯುರ್ವೇದ ಕಾಲೇಜುಗಳ ಪೈಕಿ, ಈ ವರ್ಷ ಪದವಿ ಮತ್ತು ಸ್ನಾತಕೋತ್ತರ ಪದವಿ ತರಗತಿಗಳ ದಾಖಲಾತಿ ಸೀಟು ನಿಗದಿಯಾದ ಮತ್ತು ಹೆಚ್ಚಳವಾದ ಮೊದಲ ಕಾಲೇಜಾಗಿ ನಗರದ ತಾರಾನಾಥ ಸರ್ಕಾರಿ ಆಯುರ್ವೇದ ವೈದ್ಯಕೀಯ ಕಾಲೇಜು ಹೊರಹೊಮ್ಮಿದೆ. ಇದರಿಂದ ಕಲ್ಯಾಣ ಕರ್ನಾಟಕ ಪ್ರದೇಶದ ಆರ್ಥಿಕವಾಗಿ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ.

ಅಷ್ಟೇ ಅಲ್ಲದೆ, ನಾಲ್ಕು ಸ್ನಾತಕೋತ್ತರ ವಿಭಾಗಗಳು ಸೇರಿದಂತೆ ಪದವಿ ತರಗತಿಗಳಿಗೆ ಇರುವ ಪ್ರವೇಶಾತಿ ಸೀಟುಗಳ ಜೊತೆಗೆ ಇನ್ನೂ 21 ಸೀಟುಗಳನ್ನು ಹೆಚ್ಚಿಸಿ ಕೇಂದ್ರದ ಆಯುಷ್‌ ಮಂತ್ರಾಲಯ ಕಾಲೇಜಿಗೆ ಕೆಲವು ನಿರ್ದೇಶನಗಳನ್ನೂ ನೀಡಿದೆ. ಈ ಕುರಿತ ಪತ್ರವನ್ನು ನ.6ರಂದು ಕಾಲೇಜಿನ ಪ್ರಾಂಶುಪಾಲರಿಗೂ ರವಾನಿಸಿದೆ. ಒಟ್ಟಾರೆ ಸೀಟುಗಳಲ್ಲಿ ಶೇ 15ರಷ್ಟನ್ನು ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಿರಿಸುವಂತೆ ಸೂಚಿಸಿದೆ.

ರಸಶಾಸ್ತ್ರ ಮತ್ತು ಬೈಸಜ್ಯ ಕಲ್ಪನಾ, ಕಾಯಚಿಕಿತ್ಸೆ, ಪಂಚಕರ್ಮ, ಶಲ್ಯತಂತ್ರ ಸ್ನಾತಕೋತ್ತರ ವಿಭಾಗಗಳು ಮತ್ತು ಪದವಿ ವಿಭಾಗ (ಬಿಎಎಂಎಸ್‌) ಕಾಲೇಜಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಸೀಟುಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಮೂಲಸೌಕರ್ಯ ಮತ್ತು ಬೋಧಕರ ಕೊರತೆಯಾಗದಂತೆ ಡಿ.31ರ ಒಳಗೆ ಕ್ರಮ ಕೈಗೊಳ್ಳಬೇಕು ಎಂದು ಇಲಾಖೆಯು ಸೂಚನೆ ನೀಡಿದೆ.

ಈ ಕುರಿತು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಕಾಲೇಜಿನ ಪ್ರಭಾರಿ ಪ್ರಾಂಶುಪಾಲ ಡಾ.ಮಾಧವ್‌ ದಿಗ್ಗಾವಿ, ‘ಸೀಟುಗಳನ್ನು ಹೆಚ್ಚಿಸಿರುವುದರಿಂದ ಆರ್ಥಿಕವಾಗಿ ಹಿಂದುಳಿದಿರುವ ನಮ್ಮ ಪ್ರದೇಶದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಖಾಸಗಿ ಕಾಲೇಜುಗಳಲ್ಲಿ ಪದವಿ ತರಗತಿಗಳ ಪ್ರವೇಶಾತಿಗೆ ಸದ್ಯ ಸುಮಾರು ₨ 25 ಲಕ್ಷ ಶುಲ್ಕ ವಿಧಿಸಲಾಗುತ್ತಿದೆ’ ಎಂದರು.

10 ಹುದ್ದೆ ಖಾಲಿ: ಸೀಟುಗಳು ಹೆಚ್ಚಿರುವುದರಿಂದ ಬೋಧಕರ ಕೊರತೆಯನ್ನು ನೀಗಿಸಬೇಕಾದ ಸವಾಲೂ ಕಾಲೇಜಿನ ಮುಂದೆ ಇದೆ. ಸದ್ಯ 48ಹುದ್ದೆಗಳ ಪೈಕಿ 38 ಪೂರ್ಣಾವಧಿ ಬೋಧಕರಿದ್ದು, ಉಳಿದ ಹುದ್ದೆಗಳಲ್ಲಿ ಅರೆಕಾಲಿಕ ಉಪನ್ಯಾಸಕರನ್ನು ನೇಮಿಸಿಕೊಳ್ಳಲಾಗಿದೆ.

‘ಬಳ್ಳಾರಿ ಹೊರತುಪಡಿಸಿದರೆ, ಬೆಂಗಳೂರು, ಮೈಸೂರು ಮತ್ತು ಶಿವಮೊಗ್ಗದಲ್ಲಿ ಮಾತ್ರವೇ ಸರ್ಕಾರಿ ಆಯುರ್ವೇದ ಕಾಲೇಜು ಇದೆ. ಈ ನಾಲ್ಕು ಕಾಲೇಜುಗಳಲ್ಲಿ ಉಚಿತ ಸೀಟು ಸಿಕ್ಕರೆ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರ ಮೇಲಿನ ಅರ್ಥಿಕ ಹೊರೆ ತಪ್ಪುತ್ತದೆ. ಕಾಲೇಜು ದಶಕಗಳಿಂದಲೂ ಉತ್ತಮ ರೀತಿಯಲ್ಲಿ ಬೋಧನೆ ನಡೆಸುತ್ತಿರುವುದರಿಂದಲೇ ಆಯುಷ್‌ ಮಂತ್ರಾಲಯ ವಿದ್ಯಾರ್ಥಿಗಳ ದಾಖಲಾತಿ ಸೀಟುಗಳ ಸಂಖ್ಯೆಯನ್ನು ಹೆಚ್ಚಿಸಿದೆ’ ಎಂದು ಕಾಲೇಜಿನ ಪ್ರಾಧ್ಯಾಪಕ ಡಾ.ರಾಜಶೇಖರ ಗಾಣಿಗೇರ ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT