ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನಂದ್‌ ಸಿಂಗ್‌ಗೆ ಮತ್ತೆ ‌ಮತ್ತೆ ಪ್ರವಾಸೋದ್ಯಮ ಖಾತೆ!

ಜಗದೀಶ ಶೆಟ್ಟರ, ಯಡಿಯೂರಪ್ಪ ಸಂಪುಟದಲ್ಲೂ ಈ ಖಾತೆ ನಿರ್ವಹಣೆ
Last Updated 7 ಆಗಸ್ಟ್ 2021, 8:39 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಸಚಿವ ಆನಂದ್‌ ಸಿಂಗ್‌ ಅವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರವಾಸೋದ್ಯಮ ಖಾತೆ ಹಂಚಿಕೆ ಮಾಡಿದ್ದಾರೆ.

ಆದರೆ, ಆನಂದ್‌ ಸಿಂಗ್‌ ಅವರು ಈಗ ಹಂಚಿಕೆ ಮಾಡಿರುವ ಖಾತೆ ಬಗ್ಗೆ ಅಪಸ್ವರ ಎತ್ತಿದ್ದಾರೆ. ‘ನಾನು ಕೇಳಿದ್ದೆ ಒಂದು, ಅವರು ಕೊಟ್ಟಿದ್ದೆ ಒಂದು. ಈ ಕುರಿತು ಮುಖ್ಯಮಂತ್ರಿಯವರನ್ನು ಭೇಟಿಯಾಗಿ ಸಮಾಲೋಚಿಸುತ್ತೇನೆ’ ಎಂದು ಆನಂದ್‌ ಸಿಂಗ್‌ ಶನಿವಾರ ಅಸಮಾಧಾನ ಹೊರಹಾಕಿದ್ದಾರೆ. ಹೀಗಾಗಿ ಹಾಲಿ ಹಂಚಿಕೆ ಮಾಡಿರುವ ಖಾತೆ ಬದಲಿಸುತ್ತಾರೋ ಅಥವಾ ಬೇರೆ ಖಾತೆ ನೀಡುತ್ತಾರೋ ಕಾದು ನೋಡಬೇಕು.

ಅಂದಹಾಗೆ, ಆನಂದ್‌ ಸಿಂಗ್‌ ಅವರಿಗೆ ಪ್ರವಾಸೋದ್ಯಮ ಖಾತೆ ಮೂರನೇ ಬಾರಿಗೆ ಒಲಿದು ಬಂದಿದೆ. ಈ ಹಿಂದೆ ಅವರು 2012ರಲ್ಲಿ ಅಂದಿನ ಮುಖ್ಯಮಂತ್ರಿ ಜಗದೀಶ ಶೆಟ್ಟರ ಅವರ ಸಂಪುಟದಲ್ಲಿ ಮೊಟ್ಟ ಮೊದಲ ಬಾರಿಗೆ ಪ್ರವಾಸೋದ್ಯಮ ಖಾತೆ ಸಚಿವರಾಗಿ ಕೆಲಸ ನಿರ್ವಹಿಸಿದ್ದರು. ಅದಾದ ಬಳಿಕ ಯಡಿಯೂರಪ್ಪ ಮುಖ್ಯಮಂತ್ರಿಯಾದಾಗ ಅರಣ್ಯದಂತಹ ಮಹತ್ವದ ಖಾತೆ ನೀಡಿದ್ದರು. ರಾಜ್ಯದಾದ್ಯಂತ ಉತ್ಸಾಹದಿಂದ ಓಡಾಡಿ ಕೆಲಸ ಮಾಡಿದ್ದರು. ‘ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಅವರ ಹೆಸರು ಇರುವುದರಿಂದ ಆ ಖಾತೆ ಅವರಿಗೆ ಕೊಟ್ಟಿರುವುದು ಸರಿಯಲ್ಲ. ಪ್ರಕರಣದ ತನಿಖೆ ದಿಕ್ಕು ತಪ್ಪಬಹುದು’ ಎಂದು ವಿರೋಧ ಪಕ್ಷಗಳು, ಹಲವು ಸಂಘಟನೆಗಳು ಆತಂಕ ವ್ಯಕ್ತಪಡಿಸಿ, ಅದಕ್ಕೆ ವಿರೋಧ ವ್ಯಕ್ತಪಡಿಸಿದ್ದವು.

ಯಡಿಯೂರಪ್ಪನವರು ಅದಕ್ಕೆ ಮಣಿದು ಆ ಖಾತೆಯ ಜವಾಬ್ದಾರಿ ಅರವಿಂದ ಲಿಂಬಾವಳಿ ಅವರಿಗೆ ಕೊಟ್ಟು ಆನಂದ್‌ ಸಿಂಗ್‌ ಅವರಿಗೆ ಪ್ರವಾಸೋದ್ಯಮ ಖಾತೆ ಹಂಚಿಕೆ ಮಾಡಿದ್ದರು. ಇನ್ನೇನು ಆನಂದ್‌ ಸಿಂಗ್‌ ಆ ಖಾತೆಯ ಜವಾಬ್ದಾರಿ ವಹಿಸಿಕೊಂಡು ಕಾರ್ಯಪ್ರವೃತ್ತರಾಗಿದ್ದಾಗಲೇ ಪುನಃ ಅವರ ಖಾತೆ ಬದಲಿಸಿ, ಪ್ರವಾಸೋದ್ಯಮ ಖಾತೆಯನ್ನು ಸಿ.ಟಿ. ರವಿ ಅವರಿಗೆ ನೀಡಿದ್ದರು. ಆನಂದ್‌ ಸಿಂಗ್‌ ಅವರಿಗೆ ಮೂಲಸೌಕರ್ಯ, ಹಜ್‌ ಮತ್ತು ವಕ್ಫ್‌ ಖಾತೆ ನೀಡಿದ್ದರು.

ಆ ಖಾತೆ ಬಗ್ಗೆ ಅಷ್ಟೇನೂ ಅವರು ಒಲವು ತೋರಿಸಿರಲಿಲ್ಲ. ಅಸಮಾಧಾನವಿದ್ದರೂ ಬಹಿರಂಗವಾಗಿ ವ್ಯಕ್ತಪಡಿಸಿರಲಿಲ್ಲ. ‘ಹಜ್‌ ಮತ್ತು ವಕ್ಫ್‌ ಖಾತೆಯಲ್ಲಿ ಹೆಚ್ಚಿನ ಕೆಲಸ ಇರುವುದಿಲ್ಲ’ ಎಂದು ಆ ಖಾತೆಯ ಬಗ್ಗೆ ಅಪರೋಕ್ಷವಾಗಿ ನೋವು ತೋಡಿಕೊಂಡಿದ್ದರು. ಹಿಂದಿನ ಮುಖ್ಯಮಂತ್ರಿ ಯಡಿಯೂರಪ್ಪನವರಿಂದ ವಿಜಯನಗರ ಜಿಲ್ಲೆ ಘೋಷಣೆ, ಏತ ನೀರಾವರಿ ಯೋಜನೆಗೆ ಅನುಮೋದನೆ ಪಡೆಯುವಲ್ಲಿ ಆನಂದ್‌ ಸಿಂಗ್‌ ಯಶಸ್ವಿಯಾಗಿದ್ದರು. ಯಡಿಯೂರಪ್ಪನವರು ಪ್ರಮುಖ ಬೇಡಿಕೆಗಳನ್ನು ಈಡೇರಿಸಿದ್ದರಿಂದ ತಮ್ಮಲ್ಲಿನ ಅಸಮಾಧಾನ ಹೊರಹಾಕದೆ ಅದನ್ನು ಅದುಮಿಟ್ಟುಕೊಂಡಿದ್ದರು.

ಆದರೆ, ಬಸವರಾಜ ಬೊಮ್ಮಾಯಿ ಅವರು ಯಾವಾಗ ಮುಖ್ಯಮಂತ್ರಿಯಾದರೋ ಅವರನ್ನು ಆನಂದ್‌ ಸಿಂಗ್‌ ಭೇಟಿಯಾಗಿ ಪ್ರಮುಖ ಖಾತೆಗೆ ಬೇಡಿಕೆ ಸಲ್ಲಿಸಿದ್ದರು. ಸ್ವತಃ ಈ ವಿಚಾರವನ್ನು ಆನಂದ್‌ ಸಿಂಗ್‌ ಅವರೇ ಮಾಧ್ಯಮಗಳಿಗೆ ಶುಕ್ರವಾರ ತಿಳಿಸಿದ್ದರು. ಆದರೆ, ಅವರ ಬೇಡಿಕೆ ಈಡೇರದ ಕಾರಣ ಈಗ ಮುನಿಸಿಕೊಂಡಿದ್ದಾರೆ. ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಶಾಸಕನಾಗಿ ಉಳಿಯುವ ಮಾತುಗಳನ್ನು ಆಡಿದ್ದಾರೆ. ಬರುವ ದಿನಗಳಲ್ಲಿ ಈ ವಿಚಾರ ಯಾವ ತಿರುವು ಪಡೆದುಕೊಳ್ಳುತ್ತದೆ ನೋಡಬೇಕಿದೆ.

------

ಬೇಡಿಕೆ ಸಲ್ಲಿಸಿದ್ದು ಯಾವ ಖಾತೆಗೆ?:

ಸಚಿವ ಆನಂದ್‌ ಸಿಂಗ್‌ ಅವರು ಸಣ್ಣ ನೀರಾವರಿ ಖಾತೆ ಕೊಡಬೇಕೆಂದು ಮುಖ್ಯಮಂತ್ರಿಗೆ ಬೇಡಿಕೆ ಇಟ್ಟಿದ್ದರು. ಬಹುತೇಕ ಅದೇ ಖಾತೆ ಸಿಗಬಹುದು ಎಂಬ ನಿರೀಕ್ಷೆ ಅವರದಾಗಿತ್ತು. ಈ ವಿಷಯವನ್ನು ಅವರು ಅವರ ಆಪ್ತರ ಬಳಿ ಹೇಳಿಕೊಂಡಿದ್ದರು ಎಂದು ಗೊತ್ತಾಗಿದೆ. ಆದರೆ, ಈಗ ಪ್ರವಾಸೋದ್ಯಮ ಖಾತೆ ಸಿಕ್ಕಿರುವುದರಿಂದ ಅವರ ಲೆಕ್ಕಾಚಾರ ತಲೆಕೆಳಗಾಗಿದೆ.

–––––––

‘ನನಗೆ ಈಗ ಹಂಚಿಕೆ ಮಾಡಿರುವ ಖಾತೆ ಬದಲಿಸದಿದ್ದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಶಾಸಕನಾಗಿ ಉಳಿಯುವುದರ ಬಗ್ಗೆ ಆಲೋಚಿಸುವೆ’
–ಆನಂದ್ ಸಿಂಗ್‌, ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT