ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾಕ್‌ ಮಾನ್ಯತೆಯೇ ಅನುದಾನಕ್ಕೆ ಮಾನದಂಡ: ಪ್ರೊ.ಸಿದ್ದು ಅಲಗೂರು

ಕಾಲೇಜುಗಳ ಮಾನ್ಯತೆ–ಮೌಲ್ಯಮಾಪನ ಮಾರ್ಗಸೂಚಿ ಕಾರ್ಯಾಗಾರ.
Last Updated 25 ಫೆಬ್ರುವರಿ 2021, 8:14 IST
ಅಕ್ಷರ ಗಾತ್ರ

ಬಳ್ಳಾರಿ:‘ವಿಶ್ವವಿದ್ಯಾಲಯ ಧನಸಹಾಯ ಆಯೋಗದ ನ್ಯಾಷನಲ್‌ ಅಸೆಸ್‌ಮೆಂಟ್‌ ಅಂಡ್‌ ಅಕ್ರಡಿಶನ್‌ ಕೌನ್ಸಿಲ್‌ನಿಂದ (ನ್ಯಾಕ್‌) ಮಾನ್ಯತೆ ಪಡೆದರಷ್ಟೇ ಕಾಲೇಜುಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನ ದೊರಕಲು ಸಾಧ್ಯ’ ಎಂದು ವಿಜಯನಗರ ಶ್ರೀ ಕೃಷ್ಣ ದೇವರಾಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸಿದ್ದು. ಪಿ. ಅಲಗೂರು ಪ್ರತಿಪಾದಿಸಿದರು.

ಕಾಲೇಜುಗಳ ಮಾನ್ಯತೆ ಮತ್ತು ಮೌಲ್ಯಮಾಪನ ಮಾರ್ಗಸೂಚಿ ಕುರಿತು ಕಾರ್ಯಾಗಾರ ವಿಶ್ವವಿದ್ಯಾಲಯದಲ್ಲಿ ಗುರುವಾರ ಏರ್ಪಡಿಸಿದ್ದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ ಉನ್ನತ ಶಿಕ್ಷಣ ಪರಿಷತ್ತಿನ ಪ್ರಕಾರ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತವಾಗಿರುವ ಬಹುತೇಕ ಕಾಲೇಜುಗಳು ನ್ಯಾಕ್ ಮಾನ್ಯತೆಗೆ ಒಳಪಟ್ಟಿಲ್ಲ. ಹೀಗಾಗಿ ಅನುದಾನವೂ ದೊರಕುವ ಸಾಧ್ಯತೆ ಇಲ್ಲ. ಹೀಗಾಗಿ ಮುಂದಿನ ಶೈಕ್ಷಣಿಕ ವರ್ಷದ ಒಳಗೆ ನ್ಯಾಕ್ ಮಾನ್ಯತೆಯನ್ನು ಪಡೆಯಲು ಶ್ರಮಿಸಬೇಕು’ ಎಂದರು.

‘ರಾಷ್ಟ್ರೀಯ ಶಿಕ್ಷಣ ನೀತಿ 202020ಯನ್ನು ಅನುಷ್ಠಾನಕ್ಕೆ ತರಬೇಕಾದರೆ ಕಾಲೇಜುಗಳ ಆಂತರಿಕ ಗುಣಮಟ್ಟ ಮೇಲ್ಮಟ್ಟಕ್ಕೇರಬೇಕು. ಪದವಿ ಮತ್ತು ಸ್ನಾತಕೋತ್ತರ ಕಾಲೇಜುಗಳಲ್ಲಿ ನೀಡಲಾಗುವ ಸೌಲಭ್ಯಗಳನ್ನು ಗಮನಿಸಿಯೇ ಪೋಷಕರು ಮಕ್ಕಳನ್ನು ದಾಖಲಾತಿ ಮಾಡುತ್ತಾರೆ. ಕಾಲೇಜಿನ ತಾಂತ್ರಿಕ ಮತ್ತು ಆಂತರಿಕ ಗುಣಮಟ್ಟವೇ ಶೈಕ್ಷಣಿಕ ಗುಣಮಟ್ಟವನ್ನು ಉತ್ತಮಪಡಿಸುತ್ತದೆ. ಅದರೊಂದಿಗೆ ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆಯನ್ನೂ ಹೆಚ್ಚಿಸುತ್ತದೆ ಎಂಬುದನ್ನು ಮರೆಯಬಾರದು’ ಎಂದು ಹೇಳಿದರು.

‘ಮುಂದಿನ ಶೈಕ್ಷಣಿಕ ವರ್ಷದಿಂದಲೇ ರಾಷ್ಟ್ರೀಯ ಶಿಕ್ಷಣ ನೀತಿಯ ಅನುಷ್ಠಾನಕ್ಕೆ ಕಾಲೇಜುಗಳು ಸಜ್ಜುಗೊಳ್ಳಬೇಕು. ಅದಕ್ಕಾಗಿ ಮಾನ್ಯತೆ ಮತ್ತು ಮೌಲ್ಯಮಾಪನದ ನಿಯಮಗಳಿಗೆ ಅನುಸಾರವಾಗಿಯೇ ಕಾರ್ಯನಿರ್ವಹಿಸಬೇಕು’ ಎಂದು ಸಲಹೆ ನೀಡಿದರು.

ವಿಶೇಷ ಉಪನ್ಯಾಸ ನೀಡಿದ ಬೆಂಗಳೂರಿನ ನ್ಯಾಕ್‌ ಸಹಾಯಕ ಸಲಹೆಗಾರ ಡಿ.ಕೆ.ಕಾಂಬಳೆ, ‘ಇಡೀ ವಿಶ್ವದಲ್ಲಿಯೇ ಭಾರತವು ವೈವಿಧ್ಯಮಯವಾದ ಶಿಕ್ಷಣ ವ್ಯವಸ್ಥೆಯನ್ನು ಒಳಗೊಂಡಿದೆ. ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಗುಣಮಟ್ಟ ಮೌಲ್ಯಮಾಪನವನ್ನು ಕಡ್ಡಾಯಗೊಳಿಸಿರುವುದರಿಂದ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳು ನ್ಯಾಕ್‌ನಿಂದ ಮಾನ್ಯತೆ ಪಡೆಯುವುದರ ಜೊತೆಗೆ, ಉತ್ತಮ ಶ್ರೇಣಿಯಲ್ಲಿ ನಿಲ್ಲಬೇಕು’ ಎಂದು ಅಭಿಪ್ರಾಯಪಟ್ಟರು.

ಬೆಂಗಳೂರಿನ ಬಿಎಂಎಸ್‌ ಇನ್‌ಸ್ಟಿಟ್ಯೂಟ್‌ನ ಡೀನ್‌ ತಿಪ್ಪೇಸ್ವಾಮಿ, ಮಾನ್ಯತೆ ಪಡೆಯಲು ಅನುಸರಿಸಬೇಕಾದ ನಿಯಮಗಳ ಕುರಿತು ಉಪನ್ಯಾಸ ನೀಡಿದರು.

ವಿಶ್ವವಿದ್ಯಾಲಯ ವ್ಯಾಪ್ತಿಯ ಪದವಿ ಮತ್ತು ಸ್ನಾತಕೋತ್ತರ ಪದವಿ ಕಾಲೇಜುಗಳ ಪ್ರಾಂಶುಪಾಲರು, ಆಂತರಿಕ ಗುಣಮಟ್ಟ ಮೌಲ್ಯಮಾಪನ ಸಮಿತಿಯ (ಐಕ್ಯುಎಸಿ)ಸಂಯೋಜಕರು ಪಾಲ್ಗೊಂಡಿದ್ದರು.

ವಿಶ್ವವಿದ್ಯಾಲಯದ ಐಕ್ಯುಎಸಿ ನಿರ್ದೇಶಕ ಪ್ರೊ. ರಾಬರ್ಟ ಜೋಸ್, ಕಾಲೇಜು ಅಭಿವೃದ್ಧಿ ಸಮಿತಿ ನಿರ್ದೇಶಕ. ಪ್ರೊ. ವೆಂಕಟಯ್ಯ, ವಿತ್ತಾಧಿಕಾರಿ. ಡಾ. ಕೆ.ಸಿ. ಪ್ರಶಾಂತ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT