ಶನಿವಾರ, 10 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಪೇಟೆಯಲ್ಲಿ ಕಾನೂನುಬಾಹಿರ ನಿವೇಶನ ಮಾರಾಟದ ಆರೋಪ

ಎನ್‌ಎ ಆಗದ, ಲೇಔಟ್‌ ನಿರ್ಮಿಸದೆ ನಿವೇಶನ ಮಾರಾಟದ ವಿರುದ್ಧ ಅಪಸ್ವರ
Last Updated 5 ಜನವರಿ 2021, 13:53 IST
ಅಕ್ಷರ ಗಾತ್ರ

ಹೊಸಪೇಟೆ: ಕೃಷಿ ಜಮೀನನ್ನು ಕೃಷಿಯೇತರ ಜಮೀನಾಗಿ ಪರಿವರ್ತಿಸಿಕೊಳ್ಳದೆ, ನಗರಾಭಿವೃದ್ಧಿ ಪ್ರಾಧಿಕಾರದಿಂದ ಲೇಔಟ್‌ಗೆ ಅನುಮತಿ ಪಡೆದುಕೊಳ್ಳದೆಯೇ ವಿಜಯನಗರ ಡೆವಲಪರ್ಸ್‌ನವರು ನಿವೇಶನ ಮಾರಾಟಕ್ಕೆ ಮುಂದಾಗಿರುವುದು ಕಾನೂನುಬಾಹಿರ ಎಂಬ ಆರೋಪಗಳು ಕೇಳಿ ಬಂದಿವೆ.

ತಾಲ್ಲೂಕಿನ ಕಾರಿಗನೂರು ಗ್ರಾಮದ ಸರ್ವೇ ನಂಬರ್‌ 127/12ರಲ್ಲಿ 9.19 ಎಕರೆಯಲ್ಲಿ ಕೃಷ್ಣದೇವರಾಯನಗರ ವಸತಿ ಬಡಾವಣೆ ನಿರ್ಮಿಸಿ, ಅಲ್ಲಿ 9X12 ಅಳತೆಯ ನಿವೇಶನಗಳನ್ನು ₹6.66 ಲಕ್ಷಕ್ಕೆ ಮಾರಾಟ ಮಾಡಲು ವಿಜಯನಗರ ಡೆವಲಪರ್ಸ್‌ ಮುಂದಾಗಿದೆ. ಈ ಸಂಬಂಧ ಆಸಕ್ತರಿಂದ ಮುಂಗಡವಾಗಿ ₹5,000 ಹಣ ಕಟ್ಟಿಸಿಕೊಂಡು ನಿವೇಶನ ಕಾಯ್ದಿರಿಸುತ್ತಿದೆ. ಕಂತುಗಳಲ್ಲಿ ಸಂಪೂರ್ಣ ಹಣ ಕಟ್ಟಿದ ನಂತರ ನಿವೇಶನ ನೋಂದಣಿ ಮಾಡಿಸಿಕೊಡುವುದಾಗಿ ಭರವಸೆ ನೀಡುತ್ತಿದೆ. ಈಗಾಗಲೇ ಸುಮಾರು 200ಕ್ಕೂ ಹೆಚ್ಚು ಜನ ಮುಂಗಡವಾಗಿ ಹಣ ಪಾವತಿಸಿದ್ದಾರೆ ಎಂದು ಗೊತ್ತಾಗಿದೆ.

ಎಂ. ಮಂಜುನಾಥ ವೀರಭದ್ರಯ್ಯ ಸ್ವಾಮಿ ಅವರ ಹೆಸರಿನಲ್ಲಿ 9.19 ಎಕರೆ ಜಮೀನಿದೆ. ಈಗಲೂ ಆ ಜಮೀನಿನಲ್ಲಿ ಕೃಷಿ ಚಟುವಟಿಕೆಗಳು ಮುಂದುವರೆದಿವೆ. ಕೃಷಿಯೇತರ ಜಮೀನಾಗಿ ಪರಿವರ್ತಿಸಿಕೊಳ್ಳದೆ, ಲೇಔಟ್‌ಗೆ ಅನುಮತಿ ಪಡೆದುಕೊಳ್ಳದೆ ಜನರಿಂದ ಹಣ ಸಂಗ್ರಹಿಸುತ್ತಿರುವುದು ಸರಿಯಲ್ಲ. ಇದು ಕಾನೂನುಬಾಹಿರ ಎಂದು ಈಗಾಗಲೇ ಹಣ ಕಟ್ಟಿರುವ ಯರ್ರಿಸ್ವಾಮಿ ಆರೋಪಿಸಿದ್ದಾರೆ.

‘ನಮ್ಮ ಮನೆಯಲ್ಲಿ ಒಟ್ಟು ಐದು ಜನ ಹಣ ಕಟ್ಟಿದ್ದೇವೆ. ಅನುಮಾನ ಬಂದು ಲೇಔಟ್‌ನ ದಾಖಲೆಗಳನ್ನು ಕೇಳಿದರೆ ಒದಗಿಸಿಲ್ಲ. ನಮಗೆ ನಿವೇಶನ ಬೇಡ, ಕಟ್ಟಿರುವ ಹಣ ವಾಪಸ್‌ ಕೊಡಬೇಕು ಎಂದು ಕೇಳಿದರೆ, ಪಾವತಿಸಿರುವ ಒಟ್ಟು ಹಣದಲ್ಲಿ ಶೇ 20ರಷ್ಟು ಕಡಿತ ಮಾಡಿಕೊಂಡು ಕೊಡುವುದಾಗಿ ಹೇಳುತ್ತಿದ್ದಾರೆ. ಈ ರೀತಿ ಮಾಡುತ್ತಿರುವುದು ಸರಿಯಲ್ಲ’ ಎಂದು ಯರ್ರಿಸ್ವಾಮಿ ತಿಳಿಸಿದರು.

ಈ ಸಂಬಂಧ ಡೆವಲಪರ್ಸ್‌ನ ಮಂಜು ಸ್ವಾಮಿ ಅವರನ್ನು ‘ಪ್ರಜಾವಾಣಿ’ ಸಂಪರ್ಕಿಸಿದಾಗ ಅವರು ಕರೆ ಸ್ವೀಕರಿಸಲಿಲ್ಲ. ಏಜೆಂಟ್‌ ಶೇಖರ್‌ ಅವರನ್ನು ಸಂಪರ್ಕಿಸಿದಾಗ, ‘ಜಮೀನು ಖರೀದಿಸಲಾಗಿದೆ. ಕೃಷಿಯೇತರ ಜಮೀನಾಗಿ ಮಾಡಿಕೊಂಡ ಬಳಿಕ ಲೇಔಟ್‌ ನಿರ್ಮಿಸಿ, ನಿವೇಶನ ಮಾರಾಟ ಮಾಡಲಾಗುತ್ತದೆ. ಜನ ಕಂತುಗಳಲ್ಲಿ ಹಣ ತುಂಬಲು ನಾಲ್ಕೈದು ವರ್ಷಗಳಾಗುತ್ತವೆ. ಅಷ್ಟರೊಳಗೆ ನಿವೇಶನ ಸಿದ್ಧಗೊಳ್ಳುತ್ತವೆ. ಒಂದುವೇಳೆ ಈಗಾಗಲೇ ಯಾರಾದರೂ ಹಣ ಕಟ್ಟಿದರೆ, ಅಂಥವರಿಗೆ ಇಷ್ಟವಿಲ್ಲದಿದ್ದರೆ ಯಾವುದೇ ಸಂದರ್ಭದಲ್ಲಿ ಅದನ್ನು ವಾಪಸ್‌ ಪಡೆಯಬಹುದು. ಜಿಲ್ಲೆಯ ಹಲವೆಡೆ ಲೇಔಟ್‌ ಮಾಡಲಾಗಿದೆ. ಒಬ್ಬರಿಂದಲೂ ಒಂದೇ ದೂರುಗಳು ಬಂದಿಲ್ಲ’ ಎಂದು ತಿಳಿಸಿದರು.

ಕಂದಾಯ ಇನ್‌ಸ್ಪೆಕ್ಟರ್‌ ಅನಿಲ್‌ ಕುಮಾರ್‌ ಅವರು ಪ್ರತಿಕ್ರಿಯಿಸಿ, ‘ಸರ್ವೇ ನಂಬರ್‌ 127/2 ಈಗಲೂ ಕೃಷಿ ಜಮೀನಾಗಿಯೇ ಇದೆ. ಹೀಗಿರುವಾಗ ಅದರ ಹೆಸರಿನಲ್ಲಿ ನಿವೇಶನ ಮಾಡಿ, ಮಾರಾಟಕ್ಕೆ ಮುಂದಾಗಿರುವುದು ಕಾನೂನುಬಾಹಿರ’ ಎಂದು ಹೇಳಿದರು.

‘ಕಂದಾಯ ಜಮೀನು ಕೃಷಿಯೇತರ ಜಮೀನಾಗಿ ಪರಿವರ್ತಿಸಿಕೊಳ್ಳಲು ಜಿಲ್ಲಾಧಿಕಾರಿಗಳ ಅನುಮತಿ ಪಡೆಯಬೇಕು. ನಂತರ ಲೇಔಟ್‌ ನಿರ್ಮಾಣಕ್ಕೆ ನಗರಾಭಿವೃದ್ಧಿ ಪ್ರಾಧಿಕಾರದ ಒಪ್ಪಿಗೆ ಸಿಗಬೇಕು. ಹೀಗೆ ಮಾಡದೇ ನಿವೇಶನ ಮಾರಾಟ ಮಾಡಲು ಬರುವುದಿಲ್ಲ’ ಎಂದು ಹುಡಾ ಆಯುಕ್ತ ಎಚ್‌.ಎನ್‌. ಗುರುಪ್ರಸಾದ್‌ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT