ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನಂದ್‌ ಸಿಂಗ್‌ ವಿರುದ್ಧ ಭುಗಿಲೆದ್ದ ಆಕ್ರೋಶ

ಬಿಜೆಪಿ ನಿಷ್ಠಾವಂತರಿಗೆ ಟಿಕೆಟ್‌ ಕೊಡಲು ಹಕ್ಕೊತ್ತಾಯ; ಸಭೆ ರದ್ದು
Last Updated 24 ಸೆಪ್ಟೆಂಬರ್ 2019, 11:01 IST
ಅಕ್ಷರ ಗಾತ್ರ

ಹೊಸಪೇಟೆ: ಅನರ್ಹ ಶಾಸಕ ಆನಂದ್‌ ಸಿಂಗ್‌ ವಿರುದ್ಧ ಮಂಗಳವಾರ ನಗರದ ಬಿಜೆಪಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಸ್ಥಳೀಯ ಮುಖಂಡರು, ಟಿಕೆಟ್‌ ಆಕಾಂಕ್ಷಿಗಳು ತೀವ್ರ ಆಕ್ರೋಶ ಹೊರಹಾಕಿದರು. ಸಭೆ ಗೊಂದಲದ ಗೂಡಾಗಿದ್ದರಿಂದ ರದ್ದುಪಡಿಸಬೇಕಾಯಿತು.

ಜಿಲ್ಲಾ ಬಿಜೆಪಿ ಸಂಘಟನಾ ಉಸ್ತುವಾರಿ ಸಿದ್ದೇಶ್‌ ಯಾದವ್‌ ನೇತೃತ್ವದಲ್ಲಿ ಸಭೆ ಆರಂಭಗೊಂಡಿತು. ಪಕ್ಷದ ಸದಸ್ಯತ್ವ ಅಭಿಯಾನ, ಬೂತ್‌ಮಟ್ಟ, ಮಂಡಲ ಹಾಗೂ ಜಿಲ್ಲಾ ಅಧ್ಯಕ್ಷರ ಆಯ್ಕೆ ಕುರಿತು ಯಾದವ್‌ ಮುಖಂಡರ ಅಭಿಪ್ರಾಯ ಕೇಳಿದರು. ಅದಕ್ಕೆ ಮುಖಂಡರು ವಿರೋಧ ವ್ಯಕ್ತಪಡಿಸಿ, ‘ವಿಜಯನಗರ ಕ್ಷೇತ್ರದ ಉಪಚುನಾವಣೆಯ ಟಿಕೆಟ್‌ ವಿಷಯ ಮೊದಲು ಇತ್ಯರ್ಥಗೊಳ್ಳಬೇಕು. ಅದಾದ ನಂತರ ಅನ್ಯ ವಿಷಯದ ಕುರಿತು ಚರ್ಚೆ ನಡೆಸಿ’ ಎಂದು ಆಗ್ರಹಿಸಿದರು.

ಹೀಗೆ ಹೆಚ್ಚಿನ ಮುಖಂಡರು, ಕಾರ್ಯಕರ್ತರು ಅದಕ್ಕೆ ದನಿಗೂಡಿಸಿದ್ದರಿಂದ ಸಭೆ ಗೊಂದಲದ ಗೂಡಾಯಿತು. ಮುಖಂಡ ಕಟಗಿ ರಾಮಕೃಷ್ಣ ಮಾತನಾಡಿ, ‘ಚುನಾವಣೆಗೆ ಕೆಲವೇ ದಿನಗಳು ಉಳಿದಿವೆ. ಆದರೆ, ಸ್ಥಳೀಯ ಮುಖಂಡರಿಗೆ ಅಭ್ಯರ್ಥಿ ಯಾರು ಎಂಬ ವಿಷಯವೇ ತಿಳಿಸಿಲ್ಲ. ಯಾವುದೇ ಕಾರಣಕ್ಕೂ ಆನಂದ್‌ ಸಿಂಗ್‌ ಅವರಿಗೆ ಟಿಕೆಟ್‌ ಕೊಡಬಾರದು. ಪಕ್ಷಕ್ಕಾಗಿ ನಿಷ್ಠೆಯಿಂದ ದುಡಿಯುತ್ತಿರುವವರಲ್ಲಿ ಯಾರಿಗೆ ಬೇಕಾದರೂ ಕೊಡಿ’ ಎಂದು ಒತ್ತಾಯಿಸಿದರು.

‘ಸಿಂಗ್‌ ಅವರಿಂದ ಪಕ್ಷಕ್ಕೆ ಸಾಕಷ್ಟು ಹಾನಿಯಾಗಿದೆ. ಅವರು ಪುನಃ ಪಕ್ಷಕ್ಕೆ ಬಂದರೆ ಇಡೀ ಪಕ್ಷವನ್ನು ಅವರ ತೆಕ್ಕೆಗೆ ತೆಗೆದುಕೊಳ್ಳುತ್ತಾರೆ. ಸ್ವಾಭಿಮಾನಿ, ನಿಷ್ಠಾವಂತ ಕಾರ್ಯಕರ್ತರಿಗೆ ಅನ್ಯಾಯವಾಗುತ್ತದೆ. ಕಷ್ಟಕಾಲದಲ್ಲಿ ಪಕ್ಷ ಕಟ್ಟಿದವರಿಗೆ ಮೊದಲ ಆದ್ಯತೆ ಸಿಗಬೇಕು’ ಎಂದರು. ಅವರ ಮಾತಿಗೆ ರಾಮಚಂದ್ರಗೌಡ, ಗುದ್ಲಿ ಪರಶುರಾಮ, ಬಾಬು, ವ್ಯಾಸನಕೆರೆ ಸೀನಪ್ಪ, ಗಾಳೆಪ್ಪ ಸೇರಿದಂತೆ ಹಲವರು ದನಿಗೂಡಿಸಿದರು.

ಮಂಡಲ ಅಧ್ಯಕ್ಷ ಅನಂತ ಪದ್ಮನಾಭ ಮಾತನಾಡಿ, ‘ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಯಡಿಯೂರಪ್ಪನವರ ಪರಿವರ್ತನಾ ರ್‍ಯಾಲಿಗೆ ಒಂದೇ ದಿನ ಇರುವಾಗ ಆನಂದ್‌ ಸಿಂಗ್‌ ಏಕಾಏಕಿ ಪಕ್ಷ ತೊರೆದು ಮುಜುಗರ ಉಂಟು ಮಾಡಿದ್ದರು. ಆದರೆ, ನಿಷ್ಠಾವಂತ ಕಾರ್ಯಕರ್ತರು ಎದೆಗುಂದದೆ ಯಶಸ್ವಿಯಾಗಿ ಕಾರ್ಯಕ್ರಮ ಸಂಘಟಿಸಿದ್ದರು. ಪಕ್ಷದಿಂದ ಎಲ್ಲ ರೀತಿಯ ಅಧಿಕಾರ ಅನುಭವಿಸಿದರೂ ಪಕ್ಷ ತೊರೆದರು. ಅಂತಹವರಿಗೆ ಮಣೆ ಹಾಕಿದರೆ ಕಾರ್ಯಕರ್ತರು ಸಿಡಿದೇಳುವುದು ಖಚಿತ’ ಎಂದು ಎಚ್ಚರಿಸಿದರು.

‘ಆನಂದ್‌ ಸಿಂಗ್‌ ಅವರ ಅಳಿಯ ಸಂದೀಪ್‌ ಸಿಂಗ್‌ ಅವರು ನಡುಬೀದಿಯಲ್ಲಿ ಪ್ರಧಾನಿ ಮೋದಿಯವರಿಗೆ ‘ಚೌಕಿದಾರ್‌ ಚೋರ್‌ ಹೈ’ ಎಂದು ಧಿಕ್ಕಾರ ಕೂಗಿದರು. ಈಗ ಅಂತಹವರಿಗೆ ಟಿಕೆಟ್‌ ಕೊಟ್ಟರೆ ಪಕ್ಷದ ಘನತೆಗೆ ಧಕ್ಕೆಯಾಗುವುದಿಲ್ಲವೇ? ಹಿರಿಯ ಮುಖಂಡರು ಕ್ಷೇತ್ರಕ್ಕೆ ಬಂದು ಕಾರ್ಯಕರ್ತರ ಅಭಿಪ್ರಾಯ ಪಡೆದು ಟಿಕೆಟ್‌ ವಿಚಾರದಲ್ಲಿ ತೀರ್ಮಾನಕ್ಕೆ ಬರಬೇಕು. ಅಲ್ಲಿಯವರೆಗೆ ತಟಸ್ಥವಾಗಿ ಉಳಿಯಲು ತೀರ್ಮಾನಿಸಲಾಗಿದೆ’ ಎಂದರು.

ಸಿದ್ದೇಶ್‌ ಯಾದವ್‌ ಪ್ರತಿಕ್ರಿಯಿಸಿ, ’ವಿಜಯನಗರ ಕ್ಷೇತ್ರದಲ್ಲಿ ಇಷ್ಟೊಂದು ಅಸಮಾಧಾನವಿದೆ ಎನ್ನುವುದು ಇಲ್ಲಿಗೆ ಬಂದ ನಂತರ ಗೊತ್ತಾಗಿದೆ. ಈ ವಿಷಯವನ್ನು ವರಿಷ್ಠರ ಗಮನಕ್ಕೆ ತರುವೆ’ ಎಂದು ಹೇಳಿ ಸಭೆ ರದ್ದುಪಡಿಸಿದರು.

ಮುಖಂಡರಾದ ಸಾಲಿ ಸಿದ್ದಯ್ಯ ಸ್ವಾಮಿ, ಚಂದ್ರಕಾಂತ ಕಾಮತ್‌, ಭರಮನಗೌಡ, ಭರಮಪ್ಪ, ರಾಘವೇಂದ್ರ, ಶಂಕರ್‌ ಮೇಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT