ಮಂಗಳವಾರ, ಮೇ 17, 2022
25 °C

ಕೊಲೆ ಯತ್ನ; 3 ವರ್ಷ ಕಠಿಣ ಶಿಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಯನಗರ (ಹೊಸಪೇಟೆ): ಇಬ್ಬರು ಮಹಿಳೆಯರ ಕೊಲೆ ಯತ್ನ ನಡೆಸಿರುವ ಅಪರಾಧ ಸಾಬೀತಾಗಿರುವುದರಿಂದ ಹರಪನಹಳ್ಳಿ ತಾಲ್ಲೂಕಿನ ನಂದ್ಯಾಳ ಗ್ರಾಮದ ಅಲಗಿಲವಾಡು ನಾಗರಾಜಪ್ಪ ಹನುಮಂತಪ್ಪನಿಗೆ ಇಲ್ಲಿನ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಕೆ.ಎಂ. ರಾಜಶೇಖರ್‌ ಅವರು ಮೂರು ವರ್ಷ ಕಠಿಣ ಶಿಕ್ಷೆ ವಿಧಿಸಿ ಬುಧವಾರ ಆದೇಶ ನೀಡಿದ್ದಾರೆ.

₹16,500 ದಂಡ, ನೊಂದ ಮಹಿಳೆ ಶೀಲಮ್ಮ ಅವರಿಗೆ ₹50,000 ಪರಿಹಾರ ನೀಡುವಂತೆ ಆದೇಶದಲ್ಲಿ ತಿಳಿಸಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಟಿ. ಅಂಬಣ್ಣ ವಾದ ಮಂಡಿಸಿ, ಶಿಕ್ಷೆ ಕೊಡಿಸಿದ್ದಾರೆ.

ನಡೆದಿದ್ದೇನು?:

ನಾಗರಾಜಪ್ಪ, ಯರಬಾಳು ಗ್ರಾಮದ ಶೀಲಮ್ಮ ಮತ್ತು ಶಾರದಮ್ಮ ಅವರಿಂದ ಮದ್ಯ ಸೇವನೆಗೆ ಆಗಾಗ ಹಣ ಪಡೆಯುತ್ತಿದ್ದ. 2019ರ ಜೂನ್‌ 20ರಂದು ಕುಡಿಯಲು ಇಬ್ಬರಿಗೂ ಹಣ ಕೇಳಿದ್ದಾನೆ. ಅವರು ಹಣ ಕೊಡಲು ನಿರಾಕರಿಸಿದ್ದಾರೆ. ಇದರಿಂದ ಸಿಟ್ಟಿಗೆದ್ದ ನಾಗರಾಜಪ್ಪ, ಶಾರದಮ್ಮ ಎಡ ಕಪಾಳಕ್ಕೆ ಹೊಡೆದಿದ್ದಾನೆ. ಬಿಡಿಸಲು ಹೋದ ಶೀಲಮ್ಮಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ.

ಮರುದಿನ ಬೆಳಿಗ್ಗೆ 5.30ರ ನಸುಕಿನ ವೇಳೆಯಲ್ಲಿ ಶಾರದಮ್ಮ, ಶೀಲಮ್ಮ ಮನೆಯಲ್ಲಿ ಮಲಗಿದ್ದಾಗ ಅವರನ್ನು ಕೊಲೆ ಮಾಡುವ ಉದ್ದೇಶದಿಂದ ಮನೆಯ ತೆಂಗಿನ ನೆರಿಕೆಗೆ ಬೆಂಕಿ ಹಚ್ಚಿದ್ದಾನೆ. ಮನೆಯ ಗೋಡೆ ಸಂಪೂರ್ಣ ಸುಟ್ಟು ಹೋಗಿ, ಹೆಂಚುಗಳೆಲ್ಲ ಕೆಳಗೆ ಬಿದ್ದಿವೆ. ಸುಮಾರು ₹10,000 ಮೌಲ್ಯದ ಅಕ್ಕಿ, ಬೇಳೆ, ಜೋಳ, ಬಟ್ಟೆ ಸೇರಿದಂತೆ ದಿನಬಳಕೆಯ ಅಗತ್ಯ ವಸ್ತುಗಳು ಸುಟ್ಟು ಕರಕಲಾಗಿವೆ. ಈ ಸಂಬಂಧ ಹಲವಾಗಿಲು ಪೊಲೀಸರು ಐಪಿಸಿ ಕಲಂ 323, 307, 427, 436, 504 ಅಡಿ ಪ್ರಕರಣ ದಾಖಲಿಸಿಕೊಂಡು, ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಸಾಕ್ಷಿದಾರರ ವಿಚಾರಣೆ ನಡೆಸಿ, ನ್ಯಾಯಾಲಯವು ಅಪರಾಧಿಗೆ ಶಿಕ್ಷೆ ವಿಧಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು