ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಪೇಟೆ: ತೈಲ ದರ ಏರಿಕೆ ವಿರೋಧಿಸಿಬೀದಿಗಳಿದ ಆಟೊ ಚಾಲಕರು

‘ಮನ್ ಕೀ ಬಾತ್‌’ ಬದಲು ‘ಕಾಮ್‌ ಕೀ ಬಾತ್‌’ಗೆ ಆಗ್ರಹ
Last Updated 17 ಫೆಬ್ರುವರಿ 2021, 9:27 IST
ಅಕ್ಷರ ಗಾತ್ರ

ವಿಜಯನಗರ (ಹೊಸಪೇಟೆ): ಪೆಟ್ರೋಲ್‌, ಡೀಸೆಲ್‌ ಹಾಗೂ ವಾಹನ ಗ್ಯಾಸ್‌ ಸಿಲಿಂಡರ್‌ ದರ ಏರಿಕೆ ವಿರೋಧಿಸಿ ಫೆಡರೇಶನ್‌ ಆಫ್ ಆಟೊ ಡ್ರೈವರ್‌ ಯೂನಿಯನ್‌ನವರು ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ನಗರದ ಡಾ.ಬಿ.ಆರ್‌. ಅಂಬೇಡ್ಕರ್‌ ವೃತ್ತದಲ್ಲಿ ಸೇರಿದ ಯೂನಿಯನ್‌ನವರು ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ತೈಲ ದರ ಏರಿಕೆಯಾಗದಂತೆ ಕ್ರಮ ಕೈಗೊಳ್ಳದ್ದಕ್ಕೆ ಆಕ್ರೋಶ ಹೊರ ಹಾಕಿದರು. ಬಳಿಕ ಅಲ್ಲಿಂದ ಪ್ರಮುಖ ಮಾರ್ಗಗಳ ಮೂಲಕ ಮೂಲಸೌಕರ್ಯ ಅಭಿವೃದ್ಧಿ, ಹಜ್‌ ಮತ್ತು ವಕ್ಫ್‌ ಖಾತೆ ಸಚಿವ ಆನಂದ್‌ ಸಿಂಗ್‌ ಅವರ ರಾಣಿಪೇಟೆ ಕಚೇರಿ ವರೆಗೆ ಪ್ರತಿಭಟನಾ ರ್‍ಯಾಲಿ ನಡೆಸಿದರು. ನಂತರ ಅವರ ಸಹಾಯಕರಿಗೆ ಬರೆದ ಮನವಿ ಪತ್ರ ಸಲ್ಲಿಸಿದರು.

ಆಟೊ ಯೂನಿಯನ್‌ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಂ. ಸಂತೋಷ್ ಕುಮಾರ್ ಮಾತನಾಡಿ, ‘ಸತತವಾಗಿ ಏರಿಕೆಯಾಗುತ್ತಿರುವ ತೈಲ ದರದಿಂದಾಗಿ ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಏರಿದೆ. ಆಟೊ ಗ್ಯಾಸ್‌ ಸಿಲಿಂಡರ್‌ ದರವೂ ಏಕಾಏಕಿ ಹೆಚ್ಚಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ‘ಮನ್ ಕೀ ಬಾತ್‌’ ಆಡುವುದರ ಬದಲು ‘ಕಾಮ್‌ ಕೀ ಬಾತ್‌’ ಆಡಬೇಕು. ಜನಸಾಮಾನ್ಯರ ಮೇಲೆ ಹೊರೆ ಬೀಳದಂತೆ ನೋಡಿಕೊಳ್ಳಬೇಕು’ ಎಂದು ಆಗ್ರಹಿಸಿದರು.

‘ಕೋವಿಡ್‌ ಲಾಕ್‌ಡೌನ್ ಸಂದರ್ಭದಲ್ಲಿ ಸಂಕಷ್ಟಕ್ಕೆ ಒಳಗಾದ ಆಟೊ ಚಾಲಕರಿಗೆ ಪರಿಹಾರ ಸಿಕ್ಕಿಲ್ಲ. ರಾಜ್ಯದ 7.75 ಲಕ್ಷ ಚಾಲಕರ ಪೈಕಿ 2.13 ಲಕ್ಷ ಚಾಲಕರಿಗಷ್ಟೇ ಪರಿಹಾರ ಸಿಕ್ಕಿದೆ. ತಾಂತ್ರಿಕ ದೋಷದ ನೆಪವೊಡ್ಡಿ ಚಾಲಕರಿಗೆ ಇದುವರೆಗೆ ಪರಿಹಾರ ನೀಡದೆ ಸತಾಯಿಸುತ್ತಿರುವುದು ಸರಿಯಾದ ಕ್ರಮವಲ್ಲ’ ಎಂದು ರಾಜ್ಯ ಸರ್ಕಾರವನ್ನು ಟೀಕಿಸಿದರು.

‘ನಗರದಲ್ಲಿ ಆಟೊ ಗ್ಯಾಸ್‌ ಫಿಲ್ಲಿಂಗ್‌ ದರ ಬಂಕ್‌ ಮಾಲೀಕರು ಮನಸ್ಸಿಗೆ ತೋಚಿದಂತೆ ನಿಗದಿ ಮಾಡಿದ್ದಾರೆ. ಬಳ್ಳಾರಿಗಿಂತ ನಗರದಲ್ಲಿ ಪ್ರತಿ ಲೀಟರ್‌ಗೆ ₹3ರಿಂದ ₹4 ಹೆಚ್ಚಿಗೆ ಪಡೆಯಲಾಗುತ್ತಿದೆ. ಅದನ್ನು ತಡೆಯಲು ತಾಲ್ಲೂಕು ಆಡಳಿತ ಕ್ರಮ ಜರುಗಿಸಬೇಕು’ ಎಂದು ಆಗ್ರಹಿಸಿದರು.

ಸಿಐಟಿಯು ಅಧ್ಯಕ್ಷೆ ನಾಗರತ್ನಮ್ಮ ಮಾತನಾಡಿ, ‘ಒಂದು ಸಲ ಅವಕಾಶ ಕೊಟ್ಟರೆ ದೇಶದ ಚಿತ್ರಣವೇ ಬದಲಿಸುತ್ತೇವೆ ಎಂದು ಬಿಜೆಪಿಯವರು ಹೇಳಿದ್ದರು. ಆದರೆ, ಆರು ವರ್ಷವಾದರೂ ಏನೂ ಕೆಲಸ ಮಾಡಿಲ್ಲ. ಪ್ರತಿ ದಿನ ಪೆಟ್ರೋಲ್‌, ಡೀಸೆಲ್‌ ದರ ಹೆಚ್ಚಾಗುತ್ತಿದೆ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಏರುತ್ತಿದೆ. ಪ್ರತಿಯೊಂದಕ್ಕೂ ಪ್ರತಿಕ್ರಿಯಿಸುವ ಪ್ರಧಾನಿ ನರೇಂದ್ರ ಮೋದಿಯವರು ಬೆಲೆ ಏರಿಕೆ ಕುರಿತು ಮೌನ ವಹಿಸಿದ್ದಾರೆ’ ಎಂದು ಟೀಕಿಸಿದರು.

‘ಕೋವಿಡ್‌ ಲಾಕ್‌ಡೌನ್‌ನಿಂದ ಕೋಟ್ಯಂತರ ಜನ ಕೆಲಸ ಕಳೆದುಕೊಂಡು ನಿರುದ್ಯೋಗಿಗಳಾಗಿದ್ದಾರೆ. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಎಲ್ಲ ಅಗತ್ಯ ವಸ್ತುಗಳ ಬೆಲೆ ಏರಿಕೆ ಜನಸಾಮಾನ್ಯರನ್ನು ಮತ್ತಷ್ಟು ಕಷ್ಟಕ್ಕೆ ತಳ್ಳಿದೆ. ಆಟೊ ಚಾಲಕರು ಇದಕ್ಕೆ ಹೊರತಾಗಿಲ್ಲ’ ಎಂದರು.

ಆಟೊ ಯೂನಿಯನ್ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಯಮುನಪ್ಪ, ಸಿಐಟಿಯು ಉಪಾಧ್ಯಕ್ಷೆ ಸ್ವಪ್ನಾ, ಖಜಾಂಚಿ ಅನಂತಶಯನ, ಸಂಘಟನಾ ಕಾರ್ಯದರ್ಶಿ ಎಸ್. ವಿಜಯಕುಮಾರ್, ಮೂರ್ತಿ, ಸಮೀರ್ ಶೇಕ್‌, ಮೊಹಮ್ಮದ್ ಹನೀಫ್, ಹಜರತ್ ತಿಪ್ಪೇಸ್ವಾಮಿ, ರಘು, ಶಿವಪ್ಪ, ಹಂಪಿ, ಟಿ.ಬಿ ಡ್ಯಾಂ, ಕಮಲಾಪುರದ ಆಟೊ ಚಾಲಕರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT