ಮಂಗಳವಾರ, ಅಕ್ಟೋಬರ್ 4, 2022
26 °C
ವಿಮ್ಸ್‌ನಲ್ಲಿ ನಡೆಯುತ್ತಿರುವ ‘ಗದ್ದುಗೆ ಗುದ್ದಾಟ’

ವಿಮ್ಸ್‌ನಲ್ಲಿ ‘ಗದ್ದುಗೆ ಗುದ್ದಾಟ’: ಗುಂಪುಗಾರಿಕೆಗೆ ಬಡ ಜೀವಗಳು ಬಲಿ?

ಹೊನಕೆರೆ ನಂಜುಂಡೇಗೌಡ Updated:

ಅಕ್ಷರ ಗಾತ್ರ : | |

ಬಳ್ಳಾರಿ: ‘ಇಲ್ಲಿನ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿನ (ವಿಮ್ಸ್‌) ಗುಂಪುಗಾರಿಕೆಗೆ ತೀವ್ರ ನಿಗಾ ಘಟಕದಲ್ಲಿ (ಐಸಿಯು) ಚಿಕಿತ್ಸೆ ಪಡೆಯುತ್ತಿದ್ದ ಬಡವರ ಜೀವಗಳು ಬಲಿ ಆಗಿರಬಹುದು’ ಎಂಬ ಬಲವಾದ ಅನುಮಾನ ವ್ಯಕ್ತವಾಗಿದೆ.

‘ವಿಮ್ಸ್‌ನಲ್ಲಿ ವಿದ್ಯುತ್‌, ಜನರೇಟರ್‌ ಕೈಕೊಟ್ಟು, ಆಮ್ಲಜನಕ ಪೂರೈಸುವ ವೆಂಟಿಲೇಟರ್‌ಗಳ ಬ್ಯಾಟರಿ ಬ್ಯಾಕಪ್‌ ಮುಗಿದ ನಂತರ ನಡೆದ ಅವಘಡದ ಹಿಂದೆ ಕೆಲವರ ಕೈವಾಡ ಇರಬಹುದು‘ ಎಂಬ ಶಂಕೆ ವೈದ್ಯಕೀಯ ಕ್ಷೇತ್ರವನ್ನು ತಲ್ಲಣಗೊಳಿಸಿದೆ.

‘ವಿಮ್ಸ್‌ ನಿರ್ದೇಶಕರ ಹುದ್ದೆಗೆ ಆಗಸ್ಟ್‌ನಲ್ಲಿ ನೇಮಕಾತಿ ನಡೆಯಿತು. ಐವರು ಆಕಾಂಕ್ಷಿಗಳಿದ್ದರು. ಸಂದರ್ಶನ ನಡೆದು ಡಾ. ಗಂಗಾಧರಗೌಡ ನೇಮಕವಾದರು. ಆಗಸ್ಟ್‌ 19ರಂದು ಅಧಿಕಾರ ಸ್ವೀಕರಿಸಿದರು. ನೇಮಕದ ಬಗ್ಗೆ ಅಸಮಾಧಾನಗೊಂಡಿರುವ ಕೆಲವರು ಗುಂಪುಗಾರಿಕೆ ಮಾಡು
ತ್ತಿದ್ದಾರೆ‘ ಎಂದು ಉನ್ನತ ಮೂಲಗಳು ತಿಳಿಸಿವೆ.

ದುರ್ಘಟನೆ ಬಗ್ಗೆ ವಿಚಾರಣೆಗೆ ಶುಕ್ರವಾರ ಸಂಸ್ಥೆಗೆ ಬಂದಿದ್ದ ಬೆಂಗಳೂರು ಮೆಡಿಕಲ್‌ ಕಾಲೇಜಿನ ‍‍ಪ್ರಾಧ್ಯಾಪಕಿ ಡಾ.ಸ್ಮಿತಾ ನೇತೃತ್ವದ ಸಮಿತಿ ಮುಂದೆಯೂ ಡಾ.ಗಂಗಾಧರಗೌಡಗುಂಪುಗಾರಿಕೆ ಕುರಿತು ಆರೋಪಿಸಿದ್ದಾರೆ. ‘ಭೂಮಿಯೊಳಗಿನ ವಿದ್ಯುತ್‌ ಕೇಬಲ್‌ ಸ್ಫೋಟಿಸಿದ್ದರ ಹಿಂದೆ ಪಿತೂರಿ ಇರಬಹುದು. ಸಮಿತಿ ಸರ್ಕಾರಕ್ಕೆ ಸಲ್ಲಿಸುವ ವರದಿಯಲ್ಲಿ ಈ ಅಂಶವನ್ನು ಪರಿಗಣನೆಗೆ ತೆಗೆದುಕೊಳ್ಳಬೇಕು’ ಎಂದೂ ಸಂಸ್ಥೆಯ ನಿರ್ದೇಶಕರು ಮನವಿ ಮಾಡಿದ್ದಾಗಿ ಮೂಲಗಳು ಸ್ಪಷ್ಟಪಡಿಸಿವೆ.

ಈ ಬಗ್ಗೆ ಜಿಲ್ಲಾಡಳಿತಕ್ಕೂ ಡಾ.ಗೌಡ ಮೌಖಿಕ ದೂರು ಕೊಟ್ಟಿದ್ದಾರೆ. ‘ವಿದ್ಯುತ್‌ ವಾಹಕಗಳ (ತಂತಿ) ಜೋಡಣೆ ಲೋಪದಿಂದ ಕೇಬಲ್‌ ಸ್ಫೋಟಿಸಿದೆ ಎಂಬ ಅಭಿಪ್ರಾಯವನ್ನು ಜೆಸ್ಕಾಂನ ಕೆಲವು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ‘ ಎಂದೂ ಅವರು ವಿವರಿಸಿದ್ದಾರೆ.

‘ನಿರ್ದೇಶಕರ ಹುದ್ದೆ ವಂಚಿತ ಅಭ್ಯರ್ಥಿ ಜತೆ ಮಾಜಿ ನಿರ್ದೇಶಕ, ಸಂಸ್ಥೆ ಆಡಳಿತ ವಿಭಾಗದ ಕೆಲವು ಅಧಿಕಾರಿಗಳು, ಲೆಕ್ಕಪತ್ರ ವಿಭಾಗದ ಸಿಬ್ಬಂದಿ ಸೇರಿ ಸಂಸ್ಥೆಯಲ್ಲಿ ಗೊಂದಲ ಸೃಷ್ಟಿಸಲು ಪ್ರಯತ್ನ ಮಾಡುತ್ತಿದ್ದಾರೆ’ ಎಂದು ನಿರ್ದೇಶಕರು ಜಿಲ್ಲಾಡಳಿತದ ಮುಂದೆ ಆರೋಪಿಸಿದ್ದಾರೆ ಎಂದು ಮೂಲಗಳು ಹೇಳಿವೆ.

‘ಐಸಿಯುನಲ್ಲಿ ಬುಧವಾರ (ಸೆ.14) ಬೆಳಿಗ್ಗೆ 8.20ರಲ್ಲಿ ಕರೆಂಟ್‌ ಹೋಯಿತು. ಜನರೇಟರ್‌ ಸಹ ಕೆಲಸ ಮಾಡಲಿಲ್ಲ. ಕರೆಂಟ್‌ ಕೈಕೊಟ್ಟ ವಿಷಯವನ್ನು ಯಾರೂ ನನ್ನ ಗಮನಕ್ಕೆ ತರಲಿಲ್ಲ. ಕರೆಂಟ್‌ ಕೈಕೊಟ್ಟಾಗ ಐಸಿಯುನಲ್ಲಿ ಗಂಭೀರ ಸ್ಥಿತಿಯಲ್ಲಿದ್ದ 25 ರೋಗಿಗಳಿದ್ದರು. ಐವರಿಗೆ ವೆಂಟಿಲೇಟರ್‌ ಅಳವಡಿಸಲಾಗಿತ್ತು. ಬಳಿಕ ರೋಗಿಗಳನ್ನು ಹೊಸದಾಗಿ ನಿರ್ಮಿಸಲಾಗಿರುವ ಶಸ್ತ್ರಚಿಕಿತ್ಸಾ ವಿಭಾಗ ಮತ್ತು ಟ್ರಾಮಾ ಕೇರ್‌ ಸೆಂಟರ್‌ನಲ್ಲಿರುವ ಐಸಿಯುಗೆ ಸ್ಥಳಾಂತರಿಸುವ ಪ್ರಯತ್ನ ನಡೆಯಿತು’ ಎಂದು ನಿರ್ದೇಶಕರು ವಿಚಾರಣಾ ಸಮಿತಿಗೆ ತಿಳಿಸಿದ್ದು, ದಾಖಲೆ ಒದಗಿಸಿದ್ದಾರೆ.

ನೂತನ ಶಸ್ತ್ರಚಿಕಿತ್ಸಾ ವಿಭಾಗದಲ್ಲಿ 80 ಹಾಸಿಗೆಗಳ ಐಸಿಯು ಮತ್ತು ಟ್ರಾಮಾ ಕೇರ್‌ ಸೆಂಟರ್‌ನಲ್ಲಿ 96 ಹಾಸಿಗೆಗಳ ಐಸಿಯು ಇದೆ. ಬುಧವಾರ ಸಂಭವಿಸಿದ್ದ ಅವಘಡದಲ್ಲಿ ಮೂವರು ಮೃತಪಟ್ಟಿದ್ದಾರೆ. ಅನಧಿಕೃತ ಮೂಲಗಳ ಪ್ರಕಾರ ಸತ್ತವರು ಐವರು. ಈ ಬಗ್ಗೆ ವಿಚಾರಣೆಗೆ ಸರ್ಕಾರ ಸಮಿತಿ ರಚಿಸಿದ್ದು, ಸಮಿತಿ ಶೀಘ್ರ ವರದಿ ಕೊಡಬೇಕಿದೆ.

‘ಆರ್‌ಟಿಐ ಕಾರ್ಯಕರ್ತನ ಚಿತಾವಣೆ’

‘ಬಳ್ಳಾರಿ ಭಾಗದ ಆರ್‌ಟಿಐ ಕಾರ್ಯಕರ್ತ ಎಂದು ಹೇಳಿಕೊಳ್ಳುವ ವ್ಯಕ್ತಿಯೊಬ್ಬ ವಿಮ್ಸ್‌ ಮೇಲೆ ನಿಯಂತ್ರಣ ಸಾಧಿಸಲು ಕೆಲ ವೈದ್ಯರು, ಸಿಬ್ಬಂದಿ ಜತೆಗೂಡಿ ಪಿತೂರಿ ಮಾಡುತ್ತಿದ್ದಾನೆ’ ಎಂಬ ಸಂಗತಿ ಜಿಲ್ಲಾಡಳಿತದ ಗಮನಕ್ಕೆ ಬಂದಿದೆ.

‘ವೈದ್ಯರೊಬ್ಬರಿಗೆ ವಿಮ್ಸ್‌ ನಿರ್ದೇಶಕರ ಹುದ್ದೆ ಕೊಡಿಸಲು ಲಾಬಿ ಮಾಡಿದ್ದ. ಅದು ಆಗಲಿಲ್ಲ. ಮುಖಭಂಗ ಅನುಭವಿಸಿದ ಬಳಿಕ ಸಂಸ್ಥೆಯಲ್ಲಿ ಸಮಸ್ಯೆ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾನೆ. ವಿಮ್ಸ್‌ನ ಕೆಲವು ವೈದ್ಯರು, ಅಧಿಕಾರಿಗಳು ಮತ್ತು ಸಿಬ್ಬಂದಿ ಈತನ ಮನೆಯಲ್ಲಿ ಸಭೆ ಸೇರುತ್ತಾರೆ’ ಎಂದು ವಿಮ್ಸ್‌ ನಿರ್ದೇಶಕರು ಜಿಲ್ಲಾಡಳಿತಕ್ಕೆ ನೀಡಿರುವ ಮೌಖಿಕ ದೂರಿನಲ್ಲಿ ತಿಳಿಸಿದ್ದಾರೆ.

ಸಿದ್ದರಾಮಯ್ಯ ನೇತೃತ್ವದ ಸರ್ಕಾರವಿದ್ದಾಗ ಹಿರಿಯ ರಾಜಕಾರಣಿಯೊಬ್ಬರ ಲೈಂಗಿಕ ಹಗರಣದ ವಿಡಿಯೊ ಇಟ್ಟುಕೊಂಡು ಈತ ಬ್ಲಾಕ್‌ಮೇಲ್‌ಗೂ ಯತ್ನಿಸಿದ್ದ ಎನ್ನಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು