ಶನಿವಾರ, ಸೆಪ್ಟೆಂಬರ್ 18, 2021
30 °C
ಮೂರನೇ ಸಲ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಿಂಗ್‌

ಬೊಮ್ಮಾಯಿ ಸಂಪುಟ: ಖುಲಾಯಿಸಿದ ಆನಂದ್‌ ಸಿಂಗ್‌ ನಸೀಬು

ಶಶಿಕಾಂತ ಎಸ್‌. ಶೆಂಬೆಳ್ಳಿ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ (ವಿಜಯನಗರ): ರಾಜಕೀಯ ಹಾವು–ಏಣಿ ಆಟದಲ್ಲಿ ಆನಂದ್‌ ಸಿಂಗ್‌ ಅವರಿಗೆ ಮತ್ತೆ ಅದೃಷ್ಟ ಒಲಿದು ಬಂದಿದೆ.

ರಾಜ್ಯದ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಚೊಚ್ಚಲ ಸಚಿವ ಸಂಪುಟದಲ್ಲಿ ಸ್ಥಾನ ಪಡೆದು ನಸೀಬು ಖುಲಾಯಿಸಿದೆ.

2019ರಲ್ಲಿ ಜೆಡಿಎಸ್‌–ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರ ಅಧಿಕಾರದಿಂದ ತೊಲಗಲು ಆನಂದ್‌ ಸಿಂಗ್‌ ಪ್ರಮುಖ ಪಾತ್ರ ವಹಿಸಿದರು. ಜೆಡಿಎಸ್‌, ಕಾಂಗ್ರೆಸ್‌ ಪಕ್ಷ ತೊರೆದು ಬಿಜೆಪಿ ಸೇರಿದ 17 ಜನ ಶಾಸಕರಲ್ಲಿ ಆನಂದ್‌ ಸಿಂಗ್‌ ಎಲ್ಲರಿಗಿಂತ ಮೊದಲು ರಾಜೀನಾಮೆ ನೀಡಿದರು. ಅಷ್ಟೇ ಅಲ್ಲ, ಎಲ್ಲ ಶಾಸಕರು ಮುಂಬೈ ರೆಸಾರ್ಟ್‌ಗೆ ತೆರಳಿ ಹಲವು ದಿನ ಠಿಕಾಣಿ ಹೂಡಿದರು. ಆದರೆ, ಆನಂದ್‌ ಸಿಂಗ್‌ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಕ್ಷೇತ್ರಕ್ಕೆ ಮರಳಿದರು. ಬಳಿಕ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿತು. 2019ರ ನವೆಂಬರ್‌ನಲ್ಲಿ ನಡೆದ ಉಪಚುನಾವಣೆಯಲ್ಲಿ ಗೆದ್ದ ಅವರಿಗೆ ಬಿಜೆಪಿ ಸರ್ಕಾರ ಸಚಿವ ಸ್ಥಾನದ ‘ಉಡುಗೊರೆ’ ನೀಡಿತು.

ಇದಾದ ನಂತರ ಅವರು ಉಪಚುನಾವಣೆಯಲ್ಲಿ ಕೊಟ್ಟ ಭರವಸೆಯಂತೆ ವಿಜಯನಗರ ಜಿಲ್ಲೆ ರಚನೆ, ಏತ ನೀರಾವರಿ ಯೋಜನೆಗೆ ಚಾಲನೆ ಕೊಡಿಸಿ ಮಾತು ಉಳಿಸಿಕೊಂಡರು. ನೂತನ ಜಿಲ್ಲೆಗೆ ಹೆಚ್ಚಿನ ಅನುದಾನ ತಂದು, ಆದಷ್ಟು ಶೀಘ್ರದಲ್ಲಿ ಅಭಿವೃದ್ಧಿಪಡಿಸಲು ಅಮೀತೋತ್ಸಾಹ ತೋರಿಸಿದರು. ಆದರೆ, ಕೋವಿಡ್‌ ಲಾಕ್‌ಡೌನ್‌, ರಾಜಕೀಯ ಅನಿಶ್ಚಿತತೆ ಅದಕ್ಕೆ ತೊಡಕಾಯಿತು. ಹೊಸ ಮಂತ್ರಿ ಮಂಡಲದಲ್ಲಿ ಅವರಿಗೆ ಸ್ಥಾನ ಸಿಗುತ್ತದೆಯೋ ಇಲ್ಲವೋ ಎಂಬ ಜಿಜ್ಞಾಸೆ ಇತ್ತು. ಆದರೆ, ಅದೀಗ ದೂರವಾಗಿದೆ. ಅವರ ಬೆಂಬಲಿಗರಲ್ಲಿ ಸಂಭ್ರಮ ಮನೆ ಮಾಡಿದೆ.

ಮೂರನೇ ಸಲ ಸಚಿವಗಿರಿ: ಅಂದಹಾಗೆ, ನಾಲ್ಕು ಸಲ ಶಾಸಕರಾಗಿರುವ ಆನಂದ್‌ ಸಿಂಗ್‌ ಅವರಿಗೆ ಮೂರನೇ ಸಲ ಸಚಿವ ಪದವಿ ಒಲಿದು ಬಂದಿದೆ. ಈ ಹಿಂದೆ ಅಂದಿನ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರ ಸಂಪುಟದಲ್ಲಿ ಪ್ರವಾಸೋದ್ಯಮ ಸಚಿವರಾಗಿ ಕೆಲಸ ನಿರ್ವಹಿಸಿದರು. ಅದಾದ ಬಳಿಕ ಬಿ.ಎಸ್‌. ಯಡಿಯೂರಪ್ಪನವರ ಸಂಪುಟದಲ್ಲಿ ಅರಣ್ಯ, ಪರಿಸರ, ಜೀವಿಶಾಸ್ತ್ರ ಸಚಿವರಾದರು.

ಇದಾದ ನಂತರ ಪ್ರವಾಸೋದ್ಯಮ, ಮೂಲಸೌಕರ್ಯ ಅಭಿವೃದ್ಧಿ, ಹಜ್‌ ಮತ್ತು ವಕ್ಫ್‌ ಖಾತೆ ಸಚಿವರಾದರು. ಯಡಿಯೂರಪ್ಪನವರ ಎರಡು ವರ್ಷಗಳ ಅಧಿಕಾರದ ಅವಧಿಯಲ್ಲಿ ಆನಂದ್‌ ಸಿಂಗ್‌ ಅವರ ಖಾತೆಗಳನ್ನು ಮೂರು ಸಲ ಬದಲಿಸಲಾಯಿತು. ಅರಣ್ಯ, ಪರಿಸರದಂತಹ ಮಹತ್ವದ ಖಾತೆ ಕಸಿದುಕೊಂಡು ಪ್ರವಾಸೋದ್ಯಮ ಖಾತೆ ಕೊಟ್ಟಾಗ ಅವರು ವಿಚಲಿತರಾಗಿರಲಿಲ್ಲ. ಆದರೆ, ಮೂಲಸೌಕರ್ಯ, ಹಜ್‌ ಮತ್ತು ವಕ್ಫ್‌ ಖಾತೆ ಕೊಟ್ಟಾಗ ಮುನಿಸಿಕೊಂಡರು. ಆದರೆ, ಬಹಿರಂಗವಾಗಿ ಎಲ್ಲೂ ಅದರ ಬಗ್ಗೆ ನೇರವಾಗಿ ಪ್ರಸ್ತಾಪಿಸದಿದ್ದರೂ ಅಪ್ರತ್ಯಕ್ಷವಾಗಿ ಗೋಳು ತೋಡಿಕೊಂಡಿದ್ದರು.

ವಿಜಯನಗರ ಹೆಸರಲ್ಲಿ ಪ್ರಮಾಣ
ಆನಂದ್‌ ಸಿಂಗ್‌ ಅವರು ಬುಧವಾರ ವಿಜಯನಗರ, ಪಂಪಾ ವಿರೂಪಾಕ್ಷ ಮತ್ತು ತಾಯಿ ಭುವನೇಶ್ವರಿ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಆನಂದ್‌ ಸಿಂಗ್‌ ಯಾವುದೇ ಸಭೆ, ಸಮಾರಂಭದಲ್ಲಿ ಭಾಷಣ ಮಾಡುವುದಕ್ಕೂ ಮುನ್ನ ಪಂಪಾ ವಿರೂಪಾಕ್ಷ ಹಾಗೂ ತಾಯಿ ಭುವನೇಶ್ವರಿಯನ್ನು ಸ್ಮರಿಸುತ್ತಾರೆ. ಈಗ ವಿಜಯನಗರ ಜಿಲ್ಲೆ ಅಸ್ತಿತ್ವಕ್ಕೆ ಬಂದಿರುವುದರಿಂದ ಅದನ್ನು ಸೇರಿಸಿ ಹೇಳಿದ್ದಾರೆ.

ಆನಂದ್‌ ಸಿಂಗ್‌ ರಾಜಕೀಯ ಪಯಣ
ಆರಂಭದಲ್ಲಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ಆನಂದ್‌ ಸಿಂಗ್‌ 2008ರಲ್ಲಿ ಮೊದಲ ಬಾರಿಗೆ ವಿಜಯನಗರ ಕ್ಷೇತ್ರದಿಂದ ಗೆದ್ದು ಶಾಸಕರಾದರು. ಅದರ ಬಳಿಕ 2013, 2018ರ ಸಾರ್ವತ್ರಿಕ ಚುನಾವಣೆ ಹಾಗೂ 2019ರ ಉಪಚುನಾವಣೆಯಲ್ಲಿ ಜಯಿಸಿದರು. 2008, 2013ರಲ್ಲಿ ಬಿಜೆಪಿಯಿಂದ ಗೆದ್ದರೆ, 2018ರಲ್ಲಿ ಪಕ್ಷಾಂತರ ಮಾಡಿ ಕಾಂಗ್ರೆಸ್‌ನಿಂದ ಆಯ್ಕೆಯಾದರು. ಅದಾದ ಒಂದು ವರ್ಷದ ನಂತರ ಪುನಃ ಮಾತೃಪಕ್ಷ ಬಿಜೆಪಿಗೆ ಮರಳಿ ಉಪಚುನಾವಣೆಯಲ್ಲಿ ಗೆದ್ದರು. ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜೈಲಿಗೂ ಹೋಗಿ ಬಂದಿದ್ದಾರೆ. ಇನ್ನೂ ಹಲವು ಪ್ರಕರಣಗಳ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿದೆ.

ವಿಜಯನಗರ ಜಿಲ್ಲೆ ಅಭಿವೃದ್ಧಿಗೆ ವೇಗ
ಆನಂದ್‌ ಸಿಂಗ್‌ ಅವರು ಪುನಃ ಸಚಿವರಾಗಿರುವುದರಿಂದ ವಿಜಯನಗರ ಜಿಲ್ಲೆಯ ಅಭಿವೃದ್ಧಿಗೆ ಮತ್ತಷ್ಟು ವೇಗ ಸಿಗುವ ಸಾಧ್ಯತೆ ಇದೆ.
ವಿಜಯನಗರವನ್ನು ಬಹಳ ಸುವ್ಯವಸ್ಥಿತವಾಗಿ ಕಟ್ಟಬೇಕೆಂಬ ಕನಸು ಆನಂದ್‌ ಸಿಂಗ್‌ ಹೊಂದಿದ್ದಾರೆ. ಅದಕ್ಕೆ ಪೂರಕವಾಗಿ ಶ್ರಮಿಸುತ್ತಿದ್ದಾರೆ. ಈಗಾಗಲೇ ಜಿಲ್ಲೆಗೆ ವಿಶೇಷ ಅಧಿಕಾರಿ ನಿಯೋಜನೆಗೊಂಡಿದ್ದಾರೆ. ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸೇರಿದಂತೆ ಇತರೆ ಪ್ರಮುಖ ಇಲಾಖೆಗಳಿಗೆ ಅಧಿಕಾರಿಗಳ ನೇಮಕ ಪ್ರಕ್ರಿಯೆ ಬಹಳ ತಿಂಗಳಿಂದ ನನೆಗುದಿಗೆ ಬಿದ್ದಿದೆ. ಅನುದಾನವೂ ಬಿಡುಗಡೆಯಾಗಿಲ್ಲ. ಈಗ ಅದು ಚುರುಕು ಪಡೆಯಬಹುದು. ಅಷ್ಟೇ ಅಲ್ಲ, ಜಿಲ್ಲಾಧಿಕಾರಿ ತಾತ್ಕಾಲಿಕ ಕಚೇರಿ ಕಾರ್ಯಾರಂಭ, ಜಿಲ್ಲಾಡಳಿತ ಭವನ ನಿರ್ಮಾಣ, ಅಗತ್ಯ ಅನುದಾನ ಸೇರಿದಂತೆ ಇತರೆ ಕೆಲಸಗಳು ವೇಗ ಪಡೆವ ಸಾಧ್ಯತೆ ಹೆಚ್ಚಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು