ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲೆ ಕಟ್ಟಡ: ಉದ್ಘಾಟನೆಗೂ ಮುನ್ನ ಗೋಡೆ ಬಿರುಕು

ಒಡೆದ ಕಿಟಕಿ ಗಾಜು, ಬಾಯ್ತೆರೆದ ಬಾಗಿಲು; ಕಳಪೆ ಕಾಮಗಾರಿ ಆರೋಪ
Last Updated 10 ಜುಲೈ 2021, 19:30 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಉದ್ಘಾಟನೆಗೂ ಮುನ್ನವೇ ತಾಲ್ಲೂಕಿನ ಧರ್ಮಸಾಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಗೋಡೆಯಲ್ಲಿ ಬಿರುಕು ಬಿಟ್ಟಿದ್ದು, ಕಳಪೆ ಕಾಮಗಾರಿಯ ಆರೋಪ ಕೇಳಿ ಬಂದಿದೆ.

ಶಾಲೆಯಹಳೇ ಕಟ್ಟಡ ಕುಸಿದು ಬೀಳುವ ಹಂತಕ್ಕೆ ಬಂದದ್ದರಿಂದ ಹೊಸದಾಗಿ 2.37 ಎಕರೆ ಜಾಗ ಶಾಲೆಗೆ ನೀಡಲಾಗಿತ್ತು. ಮೊದಲ ಹಂತದಲ್ಲಿ ಐದು ಕೊಠಡಿಗಳನ್ನು ನಿರ್ಮಿಸಲಾಗಿತ್ತು. ಅದಾದ ಬಳಿಕ ಪುನಃ ಎರಡು ಹೆಚ್ಚುವರಿ ಕೊಠಡಿಗಳನ್ನು ನಿರ್ಮಿಸಲಾಗಿದೆ. ಜಿಲ್ಲಾ ಖನಿಜ ನಿಧಿಯ ₹20 ಲಕ್ಷ ಅನುದಾನದಿಂದ ಹೊಸ ಕಟ್ಟಡ ನಿರ್ಮಿಸಲಾಗಿದೆ.

ಪಂಚಾಯತ್‌ ರಾಜ್‌ ಎಂಜಿನಿಯರಿಂಗ್‌ ಇಲಾಖೆಯು ಕಾಮಗಾರಿ ಪೂರ್ಣಗೊಳಿಸಿ, ಮೂರು ತಿಂಗಳ ಹಿಂದೆ ಶಿಕ್ಷಣ ಇಲಾಖೆಗೆ ಕಟ್ಟಡ ಹಸ್ತಾಂತರಿಸಿದೆ. ಎರಡು ಹೆಚ್ಚುವರಿ ಕೊಠಡಿಗಳ ಉದ್ಘಾಟನೆ ಇನ್ನಷ್ಟೇಆಗಬೇಕು. ಅಷ್ಟರಲ್ಲೇ ಗೋಡೆಯಲ್ಲಿ ಬಿರುಕು ಕಾಣಿಸಿಕೊಂಡಿದೆ. ಕಿಟಕಿ ಗಾಜುಗಳು ಒಡೆದು ಹೋಗಿವೆ. ಬಾಗಿಲು ಬಾಯ್ತೆರೆದುಕೊಂಡಿವೆ. ಶಾಲೆಯಲ್ಲಿ ಒಂದರಿಂದ ಎಂಟನೇ ತರಗತಿ ವರೆಗೆ ಇದೆ.

‘ಮೂರ್ನಾಲ್ಕು ತಿಂಗಳ ಹಿಂದೆಯಷ್ಟೇ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಹೀಗಿದ್ದರೂ ಗೋಡೆಯಲ್ಲಿ ಬಿರುಕು ಮೂಡಿದೆ. ಕಳಪೆ ವಸ್ತುಗಳನ್ನು ಬಳಸಿರುವುದೇ ಇದಕ್ಕೆ ಕಾರಣ. ಎರಡು ಕೊಠಡಿಗಳಿಗೆ ₹20 ಲಕ್ಷ ಮಂಜೂರಾದರೂ ಕಳಪೆ ಕಾಮಗಾರಿ ಮಾಡಿ ಕೈತೊಳೆದುಕೊಂಡಿದ್ದಾರೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಗ್ರಾಮಸ್ಥರು ಆರೋಪ ಮಾಡಿದ್ದಾರೆ.

‘ಕೋವಿಡ್‌ ಲಾಕ್‌ಡೌನ್‌ ನಂತರ ಯಾರೊಬ್ಬರೂ ಶಾಲೆಯ ಕಡೆಗೆ ತಿರುಗಿ ನೋಡಿಲ್ಲ. ಈಗ ಶಾಲೆ ಜೂಜಾಟ, ಮದ್ಯಪಾನ ಮಾಡುವ ಅಡ್ಡೆಯಾಗಿ ಮಾರ್ಪಟ್ಟಿದೆ. ಸಂಜೆಯಾದರೆ ಜನರು ಅಲ್ಲಿ ಸೇರುತ್ತಾರೆ. ಶಾಲೆಯ ಸುತ್ತಲೂ ಕಾಂಪೌಂಡ್‌ ಇಲ್ಲದ್ದರಿಂದ ಮೂಲ ಮೂತ್ರ ವಿಸರ್ಜನೆ ಮಾಡುತ್ತಾರೆ. ಎಲ್ಲೆಡೆ ದುರ್ವಾಸನೆ ಹರಡಿದೆ. ಇಂತಹ ಪರಿಸರದಲ್ಲಿ ಮಕ್ಕಳು ಓದಲು ಸಾಧ್ಯವೇ’ ಎಂದು ಪ್ರಶ್ನಿಸಿದ್ದಾರೆ.

‘ಶಾಲೆಯ ಪರಿಸರದಲ್ಲಿ ನಡೆಯುತ್ತಿರುವ ಅಕ್ರಮಗಳಿಗೆ ಕಡಿವಾಣ ಹಾಕಬೇಕು. ಕಳಪೆ ಕಾಮಗಾರಿ ಮಾಡಿದವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಅವರಿಗೆ ದಂಡ ವಿಧಿಸಬೇಕು. ಸುತ್ತಲೂ ಕಾಂಪೌಂಡ್‌ ನಿರ್ಮಿಸಬೇಕು’ ಎಂದು ಆಗ್ರಹಿಸಿದ್ದಾರೆ.

ಈ ಸಂಬಂಧ ಕ್ಷೇತ್ರ ಶಿಕ್ಷಣಾಧಿಕಾರಿ ಪಿ. ಸುನಂದಾ ಅವರನ್ನು ‘ಪ್ರಜಾವಾಣಿ’ ಸಂಪರ್ಕಿಸಿದಾಗ, ‘ಎಲ್ಲ ಶಾಲೆಗಳಿಗೆ ಉದ್ಯೋಗ ಖಾತ್ರಿ ಯೋಜನೆಯಡಿ ಈಗಾಗಲೇ ಕಾಂಪೌಂಡ್‌ ನಿರ್ಮಿಸಲಾಗುತ್ತಿದೆ. ಈ ಶಾಲೆಯ ಸುತ್ತವೂ ಕಾಂಪೌಂಡ್‌ ನಿರ್ಮಿಸಬೇಕೆಂದು ಜಿಲ್ಲಾ ಪಂಚಾಯಿತಿಗೆ ಮನವಿ ಸಲ್ಲಿಸಲಾಗುವುದು’ ಎಂದು ಪ್ರತಿಕ್ರಿಯಿಸಿದ್ದಾರೆ. ಆದರೆ, ಕಳಪೆ ಕಾಮಗಾರಿ ಕುರಿತು ಅವರು ಏನನ್ನೂ ಪ್ರತಿಕ್ರಿಯಿಸಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT