ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳ್ಳಾರಿ ವಿಮಾನ ನಿಲ್ದಾಣ: ‘ಮಾರ್ಗ್‌’ ಒಪ್ಪಂದ ರದ್ದತಿಗೆ ಹಸಿರು ನಿಶಾನೆ

ಕೆಎಸ್‌ಐಡಿಸಿಯಿಂದ ನಿರ್ಮಾಣ?
Last Updated 25 ಸೆಪ್ಟೆಂಬರ್ 2022, 19:52 IST
ಅಕ್ಷರ ಗಾತ್ರ

ಬಳ್ಳಾರಿ: ಇಲ್ಲಿನ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಚೆನ್ನೈ ಮೂಲದ ‘ಮಾರ್ಗ್‌’ ಕಂಪನಿಯ ಜತೆ ಮಾಡಿಕೊಂಡಿರುವ ಒಪ್ಪಂದ ರದ್ದುಪಡಿಸಲು ಮೂಲಸೌಕರ್ಯ ಇಲಾಖೆ (ಐಡಿಡಿ) ಹಸಿರು ನಿಶಾನೆ ತೋರಿದೆ. ಮುಂದಿನ ಸಚಿವ ಸಂಪುಟ ಸಭೆ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಿದೆ.

ರಾಜ್ಯ ಮೂಲಸೌಕರ್ಯ ಅಭಿವೃದ್ಧಿ ನಿಗಮದಿಂದಲೇ (ಕೆಎಸ್‌ಐಐಡಿಸಿ) ವಿಮಾನ ನಿಲ್ದಾಣ ನಿರ್ಮಾಣವಾಗಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಸಮೀಪದ ಚಾಗನೂರಿನಲ್ಲಿ ಸ್ವಾಧೀನಪಡಿಸಿಕೊಂಡಿರುವ 900 ಎಕರೆ ಜಮೀನಿನಲ್ಲಿ ವಿಮಾನ ನಿಲ್ದಾಣ ನಿರ್ಮಿಸಲು 2010ರ ಆಗಸ್ಟ್‌ನಲ್ಲಿ ‘ಮಾರ್ಗ್‌’ ಜತೆ ರಾಜ್ಯ ಸರ್ಕಾರ ಒಪ್ಪಂದ ಮಾಡಿಕೊಂಡಿದೆ. 12 ವರ್ಷ ಕಳೆದರೂ ಯೋಜನೆ ಪ್ರಗತಿ ಆಗದಿದ್ದರಿಂದ ಒಪ್ಪಂದ ರದ್ದುಪಡಿಸುವಂತೆ ಹೇಳಲಾಗಿದೆ.

ಮೂಲಸೌಕರ್ಯ ಸಚಿವ ವಿ.ಸೋಮಣ್ಣ ಅವರ ಸಮ್ಮುಖದಲ್ಲಿ ಬೆಂಗಳೂರಲ್ಲಿ ಶುಕ್ರವಾರ ಸೇರಿದ್ದ ಉನ್ನತ ಮಟ್ಟದ ಸಭೆಯಲ್ಲಿ, ಈ ಕುರಿತಂತೆ ಟಿಪ್ಪಣಿಯನ್ನು ಸಿದ್ಧಪಡಿಸಿ ಸಂಪುಟ ಸಭೆ ಕಾರ್ಯಸೂಚಿಯಲ್ಲಿ ಸೇರ್ಪಡೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು. ಪ್ರಕ್ರಿಯೆ ತ್ವರಿತಗೊಳಿಸಿ, ಒಂದು ತಿಂಗಳೊಳಗೆ ಅಂತಿಮ ರೂಪ ನೀಡಲು ನಿರ್ದೇಶಿಸಲಾಗಿದೆ ಎಂದು ಮೂಲಗಳು ಹೇಳಿವೆ.

ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು, ಮೂಲಸೌಕರ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್‌ ಗುಪ್ತಾ, ಶಾಸಕ ಎನ್‌.ವೈ. ಗೋಪಾಲಕೃಷ್ಣ, ಕೆಎಸ್‌ಐಐಡಿಸಿ ವ್ಯವಸ್ಥಾಪಕ ನಿರ್ದೇಶಕ ಎಂ.ಆರ್. ರವಿ, ಕಾರ್ಯನಿರ್ವಾಹಕ ನಿರ್ದೇಶಕ ಡಿ.ಪಿ. ಪ್ರಕಾಶ್‌ ಮತ್ತಿತರರು ಸಭೆಯಲ್ಲಿದ್ದರು.

ರಾಜ್ಯದಲ್ಲಿ ಖಾಸಗಿ ಮತ್ತು ಸಾರ್ವಜನಿಕ ಪಾಲುದಾರಿಕೆಯಲ್ಲಿ (ಪಿಪಿಪಿ ಮಾದರಿ) ಆರಂಭಿಸಿದ ವಿಮಾನ ನಿಲ್ದಾಣಗಳ ನಿರ್ಮಾಣ ಯೋಜನೆಗಳು ವಿಫಲವಾಗಿರುವುದರಿಂದ ರಾಜ್ಯ ಸರ್ಕಾರವೇ ಎಂಜಿನಿಯರಿಂಗ್‌, ಪ್ರೊಕ್ಯೂರ್‌ಮೆಂಟ್‌ ಹಾಗೂ ಕನ್‌ಸ್ಟ್ರಕ್ಷನ್‌ (ಇಪಿಸಿ) ಮಾದರಿಯಲ್ಲಿ ಸ್ವಂತ ಸಂಪನ್ಮೂಲದಲ್ಲಿ ಯೋಜನೆ ಕೈಗೆತ್ತಿಕೊಳ್ಳಲು ಉದ್ದೇಶಿಸಿದೆ.

‘ಸರ್ಕಾರ ಮಾರ್ಗ್‌ಗೆ ಎಲ್ಲಾ ಅನುಕೂಲ ಮಾಡಿಕೊಟ್ಟು, ಸಾಕಷ್ಟು ಕಾಲಾವಕಾಶ ನೀಡಿದರೂ ಯೋಜನೆ ಪ್ರಗತಿ ಆಗಿಲ್ಲ. ತೋರಣಗಲ್‌ನಲ್ಲಿರುವ ಖಾಸಗಿ ವಿಮಾನ ನಿಲ್ದಾಣವನ್ನು ‘ಉಡಾನ್‌ ಯೋಜನೆ’ಯಲ್ಲಿ ಸೇರಿಸಿದ್ದರೂ ವಿಮಾನಗಳ ಹಾರಾಟ ನಡೆಯುತ್ತಿಲ್ಲ. ವಿಶೇಷ ವಿಮಾನಗಳು ಇಲ್ಲಿಗೆ ಬಂದು ಹೋಗುತ್ತಿವೆ. ಬಳ್ಳಾರಿಯಲ್ಲಿ ವಿಮಾನ ನಿಲ್ದಾಣಕ್ಕೆ ಸಿಕ್ಕಾಪಟ್ಟೆ ಬೇಡಿಕೆಯಿದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.

ಚಾಗನೂರು ಗ್ರಾಮದಲ್ಲಿ 987ಎಕರೆ ಭೂಮಿಯಲ್ಲಿ ₹330 ಕೋಟಿ ವೆಚ್ಚದಲ್ಲಿ ನಿರ್ಮಾಣ, ನಿರ್ವಹಣೆ ಮತ್ತು ವರ್ಗಾವಣೆ (ಬಿಲ್ಡ್‌– ಆಪರೇಟ್‌ ಅಂಡ್ ಟ್ರಾನ್ಸ್‌ಫರ್‌) ಆಧಾರದಲ್ಲಿ 30 ವರ್ಷಗಳ ಅವಧಿಗೆ ಮಾರ್ಗ್‌ ಜತೆ ಒಪ್ಪಂದ ಏರ್ಪಟ್ಟಿದೆ. ರೈತರ ತೀವ್ರ ಪ್ರತಿಭಟನೆ ನಡುವೆ ಫಲವತ್ತಾದ ಜಮೀನು ವಶಪಡಿಸಿಕೊಳ್ಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT