ಶನಿವಾರ, ಮೇ 28, 2022
30 °C

ಬಳ್ಳಾರಿ: ಜಿಲ್ಲೆ ವಿಭಜನೆಯಲ್ಲಿ ಅಧಿಕಾರ‌ ದುರ್ಬಳಕೆ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಳ್ಳಾರಿ: 'ಜಿಲ್ಲೆಯ ವಿಭಜ‌ನೆಗಾಗಿ ಸರ್ಕಾರ ಅಧಿಕಾರ ದುರ್ಬಳಕೆ ಮಾಡಿಕೊಂಡಿದೆ.‌ ಎಲ್ಲ ಶಾಸಕರು, ಸಂಸದರು ವಿಭಜನೆ ವಿರುದ್ಧ ಮೌನ ವಹಿಸಿದ್ದಾರೆ' ಎಂದು ಅಖಂಡ ಬಳ್ಳಾರಿ ಹೋರಾಟ ಸಮಿತಿಯ ಮುಖಂಡರಾದ ಕುಡುತಿನಿ ಶ್ರೀನಿವಾಸ್, ದರೂರು ಪುರುಷೋತ್ತಮಗೌಡ, ಸಿದ್ಮಲ್ ಮಂಜುನಾಥ್ ಆರೋಪಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ‌ ಅವರು, ' ಆನಂದ್ ಸಿಂಗ್ ಹೊಸಪೇಟೆಗೆ ಮಾತ್ರ ಸಚಿವರೆ? ಬಿ.ಎಸ್.ಯಡಿಯೂರಪ್ಪ ಮೊದಲ ಬಾರಿಗೆ ಮುಖ್ಯಮಂತ್ರಿಯಾದಾಗ ನಗರದ ಟವರ್ ಕ್ಲಾಕ್ ಒಡೆಯಲಾಗಿತ್ತು. ಎರಡನೇ ಬಾರಿ ಮುಖ್ಯಮಂತ್ರಿಯಾಗಿರುವ ಅವರು ಜಿಲ್ಲೆಯನ್ನೇ ಇಬ್ಭಾಗ ಮಾಡಿ ಜಿಲ್ಲೆಯ ಜನರಿಗೆ ದ್ರೋಹ‌ ಬಗೆದಿದ್ದಾರೆ' ಎಂದು ಆಕ್ರೋಶ ವ್ಯಕ್ತಪಡಿಸಿದರು.

'ವಿಭಜನೆಯ ವಿರುದ್ಧ ಹೋರಾಟಕ್ಕೆ ಜಿಲ್ಲೆಯ ಬಹುತೇಕ ಶಾಸಕರು, ಸಂಸದರು ಬೆಂಬಲ ನೀಡದೇ ಮೌನ ವಹಿಸಿದ್ದು ಕೂಡ ಹೋರಾಟದ ಹಿನ್ನಡೆಗೆ ದಾರಿ ಮಾಡಿತು' ಎಂದು ವಿಷಾದಿಸಿದರು.

'ಶಾಸಕರನ್ನು ಭೇಟಿ ಮಾಡಿ ವಿಭಜನೆಗೆ ಬೆಂಬಲ ನೀಡುವಂತೆ ಕೋರಿದ್ದರೂ ಪ್ರಯೋಜನವಾಗಲಿಲ್ಲ.  ಮುಖ್ಯಮಂತ್ರಿಯನ್ನು ಭೇಟಿ ಮಾಡಿ ಅಹವಾಲು ಹೇಳಿಕೊಳ್ಳುವ ಅವಕಾಶವನ್ನೂ ನೀಡಲಿಲ್ಲ. ಎಲ್ಲವೂ ಏಕಪಕ್ಷೀಯವಾಗಿ ನಡೆಯಿತು' ಎಂದು ದೂರಿದರು.

' ವಿಭಜನೆಯನ್ನು ಬೆಂಬಲಿಸಿದ ಜನಪ್ರತಿನಿಧಿಗಳು ಬಳ್ಳಾರಿಯ ಐತಿಹಾಸಿಕ ಕೋಟೆಯನ್ನೂ ಹಂಚಿಕೊಂಡು ಬಿಡಲಿ' ಎಂದು ಆಕ್ರೋಶ ವ್ಯಕ್ತಪಡಿಸಿದರು.

'ವಿಭಜನೆ ವಿರುದ್ಧ ಸಲ್ಲಿಸಿದ ಆಕ್ಷೇಪಣೆಗಳ ಸಂಖ್ಯೆಯನ್ನು ಇರುವುದಕ್ಕಿಂತಲೂ ಕಡಿಮೆ ಎಂದು ಸರ್ಕಾರ ಹೇಳಿದೆ.‌ ಇದು ಹೇಗೆಂದು ಗೊತ್ತಾಗುತ್ತಿಲ್ಲ. ಸಾರ್ವಜನಿಕ ಸಭೆಗಳನ್ನು ಅಲ್ಲಿ ಜನರಿಂದ ಸಹಿ ಪಡೆದು ಸಲ್ಲಿಸಿದ ಒಂದೇ ಮಾದರಿಯ ಆಕ್ಷೇಪಣೆಗಳನ್ನು ಪರಿಗಣಿಸಿಲ್ಲ ಎಂದು ಗೊತ್ತಾಗಿದೆ. ತಾಂತ್ರಿಕ ಕಾರಣಕ್ಕಾಗಿ ಬಹುತೇಕ ಆಕ್ಷೇಪಣೆಗಳನ್ನು ತಿರಸ್ಕರಿಸಿರುವುದು ವಿಷಾದನೀಯ' ಎಂದರು.

'ಜಿಲ್ಲೆಯ ವಿಭಜನೆಯಾಗಿರುವುದು ಸ್ಥಿರವಾದ ನಿರ್ಧಾರವಲ್ಲ. ಮುಂದಿನ ದಿನಗಳಲ್ಲಿ ಆಡಳಿತ ಬದಲಾವಣೆಯಾದಾಗ ಹೊಸಪೇಟೆ ಮತ್ತೆ ಬಳ್ಳಾರಿಗೆ ಸೇರ್ಪಡೆಯಾಗಲಿದೆ' ಎಂಬ ಆಶಾವಾದವನ್ನೂ ಪ್ರಕಟಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಜಗದೀಶ್, ನಾಗರಾಜ್ ಇದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು