ಗುರುವಾರ , ಸೆಪ್ಟೆಂಬರ್ 16, 2021
29 °C

ವಿವಿಧ ಬೇಡಿಕೆ ಈಡೇರಿಕೆಗೆ ಸಿಐಟಿಯು ಪ್ರತಿಭಟನೆ 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಂಪ್ಲಿ: ಸಿಐಟಿಯು ಕಂಪ್ಲಿ ತಾಲ್ಲೂಕು ಸಮಿತಿ ಪದಾಧಿಕಾರಿಗಳು ಕ್ವಿಟ್ ಇಂಡಿಯಾ ಚಳವಳಿ ಸ್ಮರಣಾರ್ಥ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ತಾಲ್ಲೂಕು ಕಚೇರಿ ಬಳಿ ಸೋಮವಾರ ಪ್ರತಿಭಟನೆ ನಡೆಸಿದರು.

ಸಿಐಟಿಯು ತಾಲ್ಲೂಕು ಸಂಚಾಲಕ ಬಂಡಿ ಬಸವರಾಜ ಮಾತನಾಡಿ, ‘ನೂತನ ಕೃಷಿ. ಕಾರ್ಮಿಕ ಮತ್ತು ವಿದ್ಯುತ್ ತಿದ್ದುಪಡಿ ಕಾಯ್ದೆಗಳನ್ನು ಕೇಂದ್ರ ಸರ್ಕಾರ ರದ್ದುಪಡಿಸಬೇಕು’ ಎಂದು ಒತ್ತಾಯಿಸಿದರು.

‘ರೈತರ ಋಣಮುಕ್ತ ಕಾಯ್ದೆ, ರೈತರ ಎಲ್ಲ ಬೆಳೆಗೆ ಕನಿಷ್ಠ ಬೆಂಬಲ ಬೆಲೆ ಕಾಯ್ದೆ ಜಾರಿಗೊಳಿಸಬೇಕು. ಭೂಸುಧಾರಣೆ ತಿದ್ದುಪಡಿ ಕಾಯ್ದೆ ಹಿಂಪಡೆಯಬೇಕು. ಸರ್ಕಾರಿ ಭೂಮಿ ಸಾಗುವಳಿ ಮಾಡುವವರಿಗೆ ಸಕ್ರಮ ಚೀಟಿ ನೀಡಬೇಕು. ನಿವೇಶನ ರಹಿತರಿಗೆ ನಿವೇಶನ, ಪೆಟ್ರೋಲ್, ಡೀಸೆಲ್, ದಿನಸಿ ವಸ್ತುಗಳ ಬೆಲೆ ನಿಯಂತ್ರಿಸಬೇಕು. ಗ್ರಾ.ಪಂ ನೌಕರರನ್ನು ಕಾಯಂಗೊಳಿಸಬೇಕು’ ಎಂದು ಮನವಿ ಮಾಡಿದರು.

ಬಿಸಿಯೂಟ ನೌಕರರ ಸಂಘದ ಅಧ್ಯಕ್ಷೆ ಬಿ. ಖುರ್ಷಿದ್‍ಬೇಗಂ ಮಾತನಾಡಿ, ‘ಬಿಸಿಯೂಟ ನೌಕರರಿಗೆ 3 ತಿಂಗಳ ಬಾಕಿ ಸಂಬಳ ನೀಡಬೇಕು. ಮಾಸಿಕ ಕನಿಷ್ಠ ಸಂಬಳ ₹ 18ಸಾವಿರ ನೀಡಬೇಕು. ಕೊರೊನಾ ಪರಿಹಾರ, ಆಹಾರ ಕಿಟ್ ವಿತರಿಸಬೇಕು’ ಎಂದು ಆಗ್ರಹಿಸಿದರು.

ಪ್ರಧಾನಮಂತ್ರಿಗಳಿಗೆ ಬರೆದ ಮನವಿಯನ್ನು ತಹಶೀಲ್ದಾರ್ ಗೌಸಿಯಾಬೇಗಂ ಅವರಿಗೆ ಸಲ್ಲಿಸಿದರು. ವಿವಿಧ ಸಂಘಟನೆ ಪದಾಧಿಕಾರಿಗಳಾದ ಆರ್. ನಾಗರಾಜ, ಎಚ್.ಎಂ. ಮಾರುತಿ, ಎನ್. ರಾಜಭಕ್ಷಿ, ಎಚ್. ಮಂಜುಳಾ, ಐ. ಹೊನ್ನೂರಸಾಬ್, ಕೊಟ್ಟೂರು ರಮೇಶ್, ಎನ್. ಅನುರಾಧ, ಗೋದಾವರಿ, ಮಲ್ಲಮ್ಮ, ಹುಲಿಗೆಮ್ಮ, ಲಕ್ಷ್ಮೀ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.