ಗುರುವಾರ , ಅಕ್ಟೋಬರ್ 21, 2021
28 °C

ಕಲ್ಯಾಣ ಕರ್ನಾಟಕಕ್ಕೆ ನೀಡುತ್ತಿರುವ ಅನುದಾನ ಖರ್ಚಾಗುತ್ತಿಲ್ಲ: ಬೊಮ್ಮಾಯಿ ಬೇಸರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಳ್ಳಾರಿ: ‘ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ತಮ್ಮ ಸರ್ಕಾರ ಬದ್ಧವಾಗಿದ್ದು, ಪ್ರತಿ ವರ್ಷ ಕೊಡಮಾಡುತ್ತಿರುವ ಅನುದಾನವನ್ನು ₹ 1500 ಕೋಟಿಯಿಂದ ₹ 3000 ಸಾವಿರ ಕೋಟಿಗೆ ಹೆಚ್ಚಿಸಲಾಗುವುದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪುನರುಚ್ಚರಿಸಿದರು.

ಇಲ್ಲಿನ ವೀರಶೈವ ವಿದ್ಯಾವರ್ಧಕ್ಕೆ ದಾನವಾಗಿ ಬಂದಿರುವ ಎಸ್‌.ಕೆ.ಮೋದಿ ನ್ಯಾಷನಲ್‌ ಸ್ಕೂಲ್‌ ಹಾಗೂ ಕಿಂಡರ್‌ ಗಾರ್ಟನ್‌ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ, ‘ಪ್ರತಿ ವರ್ಷ ಕಲ್ಯಾಣ ಕರ್ನಾಟಕಕ್ಕೆ ನೀಡುತ್ತಿರುವ ಅನುದಾನ ಖರ್ಚಾಗದೆ ಉಳಿಯುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಆ ವರ್ಷದ ಅನುದಾನವನ್ನು ಅದೇ ವರ್ಷ ಖರ್ಚು ಮಾಡಬೇಕು. ಈ ವರ್ಷವಾದರೂ ಸಂಪೂರ್ಣವಾಗಿ ಖರ್ಚು ಮಾಡಿ, ಇದಾದ ಬಳಿಕ ಉಳಿದ ₹ 1500 ಕೋಟಿ ಹಣವನ್ನು ಇದೇ ವರ್ಷ ಬಿಡುಗಡೆ ಮಾಡಲಾಗುವುದು. ಬಳ್ಳಾರಿ ಜಿಲ್ಲೆ ಸಮಗ್ರ ಅಭಿವೃದ್ಧಿಯೂ ಇದರಲ್ಲಿ ಸೇರಿದೆ. ಕಲ್ಯಾಣ ಕರ್ನಾಟಕದಲ್ಲಿ ಅನೇಕ ಸಮಸ್ಯೆಗಳಿದ್ದು,  ಅವುಗಳನ್ನು ಬಗೆಹರಿಸಲು ಸರ್ಕಾರ ಬದ್ಧವಾಗಿದೆ’ ಎಂದು ಮುಖ್ಯಮಂತ್ರಿ ಭರವಸೆ ನೀಡಿದರು.

ಇದನ್ನೂ ಓದಿ... ಮೇಕೆದಾಟು ಯೋಜನೆ ಜಾರಿ ಶತಸಿದ್ಧ: ಸಿ.ಎಂ ಬೊಮ್ಮಾಯಿ

‘ಕಲ್ಯಾಣ ಕರ್ನಾಟಕಕ್ಕೆ ಇದುವರೆಗೆ ಏನೂ ಮಾಡದವರು ಹೆಚ್ಚುವರಿ ಅನುದಾನವನ್ನು ಯಾವಾಗ ಕೊಡುತ್ತೀರಿ ಎಂದು ಕೇಳಿದರು. ಅವರು ಪ್ರಶ್ನೆ ಕೇಳುವ ಜಾಗದಲ್ಲಿ ಇರುವುದರಿಂದ ನಾವು ಉತ್ತರ ಕೊಡಬೇಕಾಗುತ್ತದೆ’ ಎಂದು ಸೂಚ್ಯವಾಗಿ ಟೀಕಿಸಿದರು.

‘ನಮ್ಮಲ್ಲಿರುವ ನೈಸರ್ಗಿಕ ಸಂಪತ್ತು ಸುಸ್ಥಿರ ಅಭಿವೃದ್ಧಿಗೆ ಬಳಕೆಯಾಗಬೇಕು. ನಮ್ಮ ಮುಂದಿನ ಪೀಳಿಗೆಗೂ ನಾವು ಈ ಸಂಪತ್ತನ್ನು ಬಿಟ್ಟು ಹೋಗಬೇಕು’ ಎಂದು ಮುಖ್ಯಮಂತ್ರಿ ಅದಿರು ಲೂಟಿ ಕುರಿತು ಪರೋಕ್ಷವಾಗಿ ಪ್ರಸ್ತಾಪಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು