ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳ್ಳಾರಿ ಜಿಲ್ಲೆಯಲ್ಲಿ ಹಿಮ್ಮೆಟ್ಟಿದ ಕೊರೊನಾ ಸೋಂಕು!

ಮೃತರ ಸಂಖ್ಯೆಯಲ್ಲೂ ಇಳಿಮುಖ ಕಂಡ ಜಿಲ್ಲೆ
Last Updated 22 ಅಕ್ಟೋಬರ್ 2020, 10:34 IST
ಅಕ್ಷರ ಗಾತ್ರ

ಬಳ್ಳಾರಿ: ಜಿಲ್ಲೆಯಲ್ಲಿ ಕೊರೊನಾ ಸೋಂಕಿತರು ಮತ್ತು ಅದರಿಂದ ಮೃತಪಡುವವರ ಸಂಖ್ಯೆಯಲ್ಲಿ ಇಳಿಮುಖವಾಗಿದೆ. ಜಿಲ್ಲೆಯ ಮಟ್ಟಿಗೆ ನವರಾತ್ರಿ ಹಬ್ಬ ನಿರಾಳ ಭಾವವನ್ನು ಮೂಡಿಸಿದೆ.

ಲಾಕ್‌ಡೌನ್‌ 5ನೇ ಹಂತದ ತೆರವಿನ ಬಳಿಕ ಜನ ಸಮುದಾಯದಲ್ಲಿ ಕೊರೊನಾ ನಿಯಂತ್ರಣ ಕ್ರಮಗಳ ಕುರಿತ ಜಾಗೃತಿಯ ಕೊರತೆ ನಡುವೆಯೂ ಈ ಬೆಳವಣಿಗೆ ಕಂಡುಬಂದಿರುವುದು ವಿಶೇಷ.

ಮಾರ್ಚ್‌ ಅಂತ್ಯದಲ್ಲಿ ಲಾಕ್‌ಡೌನ್‌ ಘೋಷಣೆಯಾದ ಬಳಿಕ ಜಿಲ್ಲೆಯಲ್ಲಿ ಆ ತಿಂಗಳಲ್ಲಿ ಸೋಂಕು ಯಾರಲ್ಲೂ ಕಂಡುಬಂದಿರಲಿಲ್ಲ. ಏಪ್ರಿಲ್‌ನಿಂದ ಜಿಲ್ಲೆಯಲ್ಲಿ ಹಬ್ಬಲಾರಂಭಿಸಿದ ಸೋಂಕು ಆಗ ಕೇವಲ ಎರಡಂಕಿಯಷ್ಟೇ ಇತ್ತು. ಮೇ ತಿಂಗಳಲ್ಲೂ ಇದೇ ಪರಿಸ್ಥಿತಿ ಮುಂದುವರಿದಿತ್ತು.

ಜೂನ್‌ ತಿಂಗಳ ಬೇಸಿಗೆಯಲ್ಲಿ ತೀವ್ರವಾಗಿ ಹಬ್ಬಲಾರಂಭಿಸಿದ ಸೋಂಕಿಗೆ ಆಗ 28 ಮಂದಿ ಮೃತಪಟ್ಟಿದ್ದರು. ಸೋಂಕಿತರ ಸಂಖ್ಯೆಯು 900ರ ಗಡಿ ಮುಟ್ಟಿತ್ತು. ಪರಿಸ್ಥಿತಿಯ ಗಾಂಭೀರ್ಯವನ್ನು ಅರಿತ ಜಿಲ್ಲಾಡಳಿತ ಅದೇ ತಿಂಗಳಿಂದಲೇ ಸೋಂಕಿತರಿಗಾಗಿ ಜಿಲ್ಲೆಯಾದ್ಯಂತ ಕೇರ್‌ ಸೆಂಟರ್‌ಗಳನ್ನು ತೆರೆದಿತ್ತು. ಕೋವಿಡ್‌ ಆಸ್ಪತ್ರೆಯಾಗಿ ಪರಿವರ್ತಿಸಲಾಗಿದ್ದ ಜಿಲ್ಲಾಸ್ಪತ್ರೆಯ ರೀತಿಯಲ್ಲೇ ಸಂಡೂರಿನ ಒಪಿಜೆ ಸಂಜೀವಿನಿ ಆಸ್ಪತ್ರೆಯಲ್ಲೂ ಚಿಕಿತ್ಸೆ ಆರಂಭವಾಗಿತ್ತು.

ಅತಿ ಏರಿಕೆ: ಜುಲೈ ತಿಂಗಳಲ್ಲಿ ಕೊರೊನಾ ವೇಗವಾಗಿ ಹಬ್ಬಿದ ಪರಿಣಾಮವಾಗಿ ಜಿಲ್ಲೆಯ ಎಲ್ಲೆಡೆ ಹೆಚ್ಚು ಸೋಂಕಿತರು ಕಂಡುಬಂದರು ಜಿಲ್ಲಾಡಳಿತಕ್ಕೆ ಬೃಹತ್‌ ಸವಾಲು ಎದುರಾಗಿತ್ತು. ತಾಲ್ಲೂಕು ಆಸ್ಪತ್ರೆಗಳನ್ನೂ ಕೋವಿಡ್‌ ಆಸ್ಪತ್ರೆಗಳನ್ನಾಗಿ ಪರಿವರ್ತಿಸಲಾಗಿತ್ತು.

ಆಗಸ್ಟ್‌ ತಿಂಗಳಲ್ಲಿ ಸೋಂಕಿತರ ಸಂಖ್ಯೆಯು 15 ಸಾವಿರಕ್ಕೆ ಏರಿದರೆ, ಸೋಂಕಿತರ ಸಂಖ್ಯೆಯು ಎರಡು ನೂರರ ಅಂಚಿಗೆ ಬಂದು ನಿಂತಿತ್ತು. ಸೋಂಕಿನಿಂದ ಮೃತಪಟ್ಟವರ ಶವಗಳನ್ನು ಗುಂಡಿಗೆ ಎಸೆಯುವ ವೀಡಿಯೋ ದೃಶ್ಯಾವಳಿಯು ರಾಜ್ಯದಾದ್ಯಂತ ವಿವಾದ ಸೃಷ್ಟಿಸಿತ್ತು.

ಪರಿಸ್ಥಿತಿ ಹೀಗೆ ಮುಂದುವರಿದರೆ ಜಿಲ್ಲೆಯ ಇನ್ನಷ್ಟು ಮಂದಿ ಜೀವ ಕಳೆದುಕೊಳ್ಳಬೇಕಾಗಬಹುದು ಎಂಬ ಆತಂಕಕಾರಿ ನಿರೀಕ್ಷೆಯ ನಡುವೆಯೇ ಬಂದ ಸೆಪ್ಟೆಂಬರ್‌ ಜಿಲ್ಲೆಯ ಮಟ್ಟಿಗೆ ಕೊಂಚ ಸಮಾಧಾನವನ್ನು ತಂದಿತ್ತು. ಸೋಂಕಿತರ ಸಂಖ್ಯೆಯು ಹತ್ತು ಸಾವಿರಕ್ಕೆ ಇಳಿದು, ಮೃತರ ಸಂಖ್ಯೆಯೂ ಕಡಿಮೆಯಾಗಿದೆ.

ಬಳ್ಳಾರಿಯಲ್ಲೇ ಹೆಚ್ಚು:ಜಿಲ್ಲೆಯ ವಿವಿಧ ತಾಲ್ಲೂಕುಗಳ ಪೈಕಿ ಬಳ್ಳಾರಿ ತಾಲ್ಲೂಕಿನಲ್ಲೇ ಆರಂಭದಿಂದಲೂ ಹೆಚ್ಚಿನ ಸೋಂಕಿತರು ಕಂಡುಬಂದಿದ್ದಾರೆ. ಹೊಸಪೇಟೆ ಎರಡನೇ ಸ್ಥಾನದಲ್ಲಿದ್ದರೆ, ಸಂಡೂರು ಮೂರನೇ ಸ್ಥಾನದಲ್ಲಿದೆ. ಅ.20ರ ವೇಳೆಯಲ್ಲೂ ಈ ವಿಷಯದಲ್ಲಿ ಬದಲಾವಣೆ ಕಂಡು ಬಂದಿಲ್ಲ.

ಈ ಮೂರು ತಾಲ್ಲೂಕುಗಳಿಂದಲೂ ತೋರಣಗಲ್‌ನ ಜಿಂದಾಲ್‌ಗೆ ಹೆಚ್ಚಿನ ಜನ ಉದ್ಯೋಗದ ಸಲುವಾಗಿ ಸಂಚರಿಸುತ್ತಿದ್ದರು. ಜಿಲ್ಲೆಯಲ್ಲಿ ಸೋಂಕು ಹೆಚ್ಚಳವಾಗಲು, ಲಾಕ್‌ಡೌನ್‌ನಂಥ ಬಿಕ್ಕಟ್ಟಿನ ಕಾಲದಲ್ಲೂ ಜಿಂದಾಲ್‌ ಕಾರ್ಖಾನೆಗಳು ಕಾರ್ಯನಿರ್ವಹಿಸಿದ್ದೇ ಕಾರಣ ಎಂಬ ಆಕ್ರೋಶವೂ ಜಿಲ್ಲೆಯಾದ್ಯಂತ ವ್ಯಕ್ತವಾಗಿತ್ತು.

ಇದೀಗ ನವರಾತ್ರಿ ಹಬ್ಬದ ಸಂಭ್ರಮದಲ್ಲಿರುವ ಜಿಲ್ಲೆಯಲ್ಲಿ ಸೋಂಕು ಕ್ರಮೇಣ ಇಳಿಮುಖ ಕಂಡಿದೆ. ಮೃತಪಡುವವರ ಸಂಖ್ಯೆಯಲ್ಲೂ ಇಳಿಮುಖವಾಗಿದೆ. ಜಿಲ್ಲಾಸ್ಪತ್ರೆಯನ್ನು ಕೋವಿಡ್‌ ಕರ್ತವ್ಯದಿಂದ ಬಹುತೇಕ ಬಿಡುಗಡೆಗೊಳಿಸಿ ಜನಸಾಮಾನ್ಯರಿಗೆ ತೆರೆಯಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT