ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಸೇನಾನಿಗಳಿಗೆ ಮೊದಲ ಅದ್ಯತೆ: ಬಳ್ಳಾರಿ ಜಿಲ್ಲಾಧಿಕಾರಿ ಎಸ್‌.ಎಸ್‌.ನಕುಲ್

ಕೋವಿಡ್ ಲಸಿಕೆ ವಿತರಣೆಗೆ ವೈದ್ಯ–ಸಿಬ್ಬಂದಿಯ ಮಾಹಿತಿ ಸಂಗ್ರಹಿಸಿ: ಡಿ.ಸಿ.ನಕುಲ್‌ ಸೂಚನೆ
Last Updated 3 ನವೆಂಬರ್ 2020, 8:48 IST
ಅಕ್ಷರ ಗಾತ್ರ

ಬಳ್ಳಾರಿ: ’ಕೊರೊನಾ ಸೋಂಕು ನಿಯಂತ್ರಣ ಲಸಿಕೆಯನ್ನು ಮೊದಲ ಆದ್ಯತೆಯಾಗಿ ಸೋಂಕು ನಿಯಂತ್ರಣ ಕಾರ್ಯದಲ್ಲಿರುವವರಿಗೆ ವಿತರಿಸಲಾಗುವುದು. ಅಂಥವರ ನಿಖರ ಮಾಹಿತಿಯನ್ನು ಕೂಡಲೇ ಸಂಗ್ರಹಿಸಬೇಕು’ ಜಿಲ್ಲಾಧಿಕಾರಿ ಎಸ್‌.ಎಸ್‌.ನಕುಲ್‌ ಅಧಿಕಾರಿಗಳಿಗೆ ಸೂಚಿಸಿದರು.

‘ಸೋಂಕು ನಿಯಂತ್ರಿಸುವ ಲಸಿಕೆಯ ಸಂಶೋಧನೆ ಕಾರ್ಯವು ವಿಶ್ವದಾದ್ಯಂತ ವೇಗದಿಂದ ನಡೆದಿದೆ. ಶೀಘ್ರ ಜನರಿಗೆ ಲಭ್ಯವಾಗುವ ನಿರೀಕ್ಷೆಯೂ ಇದೆ. ಹೀಗಾಗಿ ಮೊದಲಿಗೆ ಕೊರೊನಾ ಸೇನಾನಿಗಳಿಗೆ ನೀಡಲಾಗುವುದು’ ಎಂದು ನಗರದಲ್ಲಿ ಮಂಗಳವಾರ ಕೋವಿಡ್-19 ಲಸಿಕೆ ಜಿಲ್ಲಾ ಟಾಸ್ಕ್ ಫೋರ್ಸ್ ‌ಸಭೆಯಲ್ಲಿ ಹೇಳಿದರು.

‘ಈಗಾಗಲೇ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಗಳು ಸೇರಿದಂತೆ ಎಲ್ಲಾ ಸಿಬ್ಬಂದಿಗಳ ವಿವರಗಳನ್ನು ಸಂಗ್ರಹಿಸಲಾಗಿದೆ. ಜಿಲ್ಲೆಯ ಖಾಸಗಿ ಆಸ್ಪತ್ರೆಗಳ ಆಡಳಿತ ಮಂಡಳಿಗಳು ತಮ್ಮ ಎಲ್ಲಾ ವೈದ್ಯರು ಹಾಗೂ ಸಿಬ್ಬಂದಿಗಳ‌ ವಿವರಗಳನ್ನು ಬುಧವಾರ ಸಂಜೆಯೊಳಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಸಲ್ಲಿಸಬೇಕು’ ಎಂದು ಸ್ಪಷ್ಟಪಡಿಸಿದರು.

‘ಲಸಿಕೆ ವಿತರಣೆಗೆ ಸಂಬಂಧಿಸಿದಂತೆ ಮಾಹಿತಿಯನ್ನು ಜಿಲ್ಲೆಯ ಎಲ್ಲ ಖಾಸಗಿ ಆಸ್ಪತ್ರೆಗಳು ಹಾಗೂ ಕ್ಲಿನಿಕ್ ಗಳಿಗೆ ರವಾನಿಸಬೇಕು’ ಎಂದರು.

‘ಜಿಲ್ಲೆಯ ಪ್ರಮುಖ ಆಸ್ಪತ್ರೆಯಾಗಿರುವ ವಿಮ್ಸ್ ವೈದ್ಯರು, ವೈದ್ಯಕೀಯ ವಿದ್ಯಾರ್ಥಿಗಳು‌ ಮತ್ತು ಸಿಬ್ಬಂದಿಯ ಮಾಹಿತಿಯನ್ನು ಕೂಡಲೇ ಒದಗಿಸಬೇಕು. ಆಯುಷ್, ಆಯುರ್ವೇದ ಆಸ್ಪತ್ರೆ ಹಾಗೂ ಸರ್ಕಾರಿ ದಂತ ವೈದ್ಯಕೀಯ ಕಾಲೇಜಿನ ಮುಖ್ಯಸ್ಥರೂ ವೈದ್ಯರು ಹಾಗೂ ಸಿಬ್ಬಂದಿಯ ಮಾಹಿತಿಯನ್ನು ಒದಗಿಸಬೇಕು. ಸೋಂಕು ನಿಯಂತ್ರಣದಲ್ಲಿ ತೊಡಗಿರುವವರಿಗೆ ಮೊದಲ ಅದ್ಯತೆ ನೀಡಬೇಕು’ ಎಂದು ಸೂಚಿಸಿದರು.

‘ಸರ್ಕಾರವು ಜನರ ಆರೋಗ್ಯಹಿತ ಮತ್ತು ಸುರಕ್ಷತೆಯ ದೃಷ್ಟಿಯಿಂದ ಉತ್ತಮವಾದ ಯೋಜನೆಯೊಂದನ್ನು ರೂಪಿಸಿ ಅನುಷ್ಠಾನಗೊಳಿಸುತ್ತಿದ್ದು, ಅರ್ಹರೆಲ್ಲರೂ ಮಾಹಿತಿ ನೀಡಿ ಸಹಕರಿಸಬೇಕು.ಮಾಹಿತಿ ನೀಡುವುದು ವಿಳಂಬವಾದರೆ ಲಸಿಕೆ ವಿತರಣೆಗೆ ಅಡಚಣೆಯಾಗುತ್ತದೆ ಎಂಬ ಕಾರಣಕ್ಕೆ ಬಹಳಷ್ಟು ಮುಂಚಿತವಾಗಿಯೇ ಸೂಚನೆ ನೀಡಲಾಗಿದೆ’ ಎಂದು ಅವರು ಹೇಳಿದರು.

‘ಲಸಿಕೆ ವಿತರಣೆಯ ಕಾರ್ಯಕ್ಕಾಗಿ ನಿಯೋಜಿತ ಆರೋಗ್ಯ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಮಾಹಿತಿ ಸಂಗ್ರಹಿಸಬೇಕು. ಮಾಹಿತಿಯ ನಿಖರತೆಯನ್ನು ಪರಿಶೀಲಿಸಬೇಕು. ಸೋಂಕು ನಿಯಂತ್ರಿಸುವಲ್ಲಿ ಆರೋಗ್ಯ ಇಲಾಖೆ ಈಗ ನಡೆಸುತ್ತಿರುವ ತಪಾಸಣೆಗಳು ನಿರಾತಂಕವಾಗಿ ನಡೆಯಬೇಕು. ಅದಕ್ಕೆ ಜಿಲ್ಲಾಡಳಿತ ಎಲ್ಲ ಸಹಕಾರ ನೀಡುತ್ತದೆ’ ಎಂದು ಹೇಳಿದರು.

ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಆರ್.ನಂದಿನಿ, ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಎಸ್.ಮಂಜುನಾಥ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಚ್‌.ಎಲ್‌.ಜನಾರ್ಧನ್, ಜಿಲ್ಲಾ ಸರ್ಜನ್‌ ಡಾ.ಎನ್‌.ಬಸರೆಡ್ಡಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT