ಸೋಮವಾರ, ಏಪ್ರಿಲ್ 12, 2021
25 °C

‘ಮುಖ್ಯಶಿಕ್ಷಕನ ವಿರುದ್ಧದ ಆರೋಪ ಕೈಬಿಡಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಯನಗರ (ಹೊಸಪೇಟೆ): ‘ವಿದ್ಯಾರ್ಥಿನಿಯರೊಂದಿಗೆ ಅಸಭ್ಯವಾಗಿ ವರ್ತಿಸಿ, ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ತಾಲ್ಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಡ್ತಿ ಮುಖ್ಯಶಿಕ್ಷಕರ ವಿರುದ್ಧದ ಆರೋಪ ಕೈಬಿಡುವಂತೆ’ ಅದೇ ಗ್ರಾಮದ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಹಾಗೂ ಕೆಲ ಮುಖಂಡರು ಆಗ್ರಹಿಸಿದ್ದಾರೆ.

ಈ ಸಂಬಂಧ ಎಸ್‌ಡಿಎಂಸಿ ಅಧ್ಯಕ್ಷ ಎಚ್‌. ವೆಂಕಟೇಶ್ ಹಾಗೂ ಗ್ರಾಮದ ಮುಖಂಡರಾದ ಎ.ಕೆ.ಉದೇದಪ್ಪ, ಬಿ.ರಾಮಪ್ಪ, ರಾಮಲಿ, ಕೆ.ವೆಂಕಟೇಶ, ಎಚ್.ಹನುಮಂತಪ್ಪ, ಎ.ಕೆ.ಗೋಪಾಲ, ಗಾದಿಲಿಂಗಪ್ಪ, ಮಲ್ಲಪ್ಪ, ಶಾಂತಕುಮಾರ ಅವರು ಸೋಮವಾರ ಕ್ಷೇತ್ರ ಶಿಕ್ಷಣಾಧಿಕಾರಿ ಪಿ. ಸುನಂದಾ ಅವರನ್ನು ಭೇಟಿ ಮಾಡಿ ಒತ್ತಾಯಿಸಿದ್ದಾರೆ.

‘ಗ್ರಾಮದ ಹೆಸರಿಗೆ ಧಕ್ಕೆ ತಂದಿರುವ, ಮುಖ್ಯಶಿಕ್ಷಕರ ವಿರುದ್ಧ ಮಕ್ಕಳನ್ನು ಎತ್ತಿ ಕಟ್ಟಿರುವ ಶಾಲೆಯ ಎಲ್ಲ ಶಿಕ್ಷಕರನ್ನು ಸಾಮೂಹಿಕವಾಗಿ ವರ್ಗಾವಣೆ ಮಾಡಬೇಕು’ ಎಂದು ಆಗ್ರಹಿಸಿದ್ದಾರೆ.

ತಾಲ್ಲೂಕಿನ ಸರ್ಕಾರಿ ಶಾಲೆಯೊಂದ ಮುಖ್ಯಶಿಕ್ಷಕನ ವಿರುದ್ಧ ಇತ್ತೀಚೆಗೆ ವಿದ್ಯಾರ್ಥಿನಿಯರ ಪೋಷಕರು, ಕೆಲ ಗ್ರಾಮಸ್ಥರು ಬಿಇಒ ಪಿ.ಸುನಂದಾ ಅವರಿಗೆ ದೂರು ಸಲ್ಲಿಸಿದ್ದರು. ‘ಈ ಸಂಬಂಧ ರಚಿಸಲಾಗಿದ್ದ ಸಮಿತಿಯು ಮುಖ್ಯಶಿಕ್ಷಕ ತಪ್ಪು ಎಸಗಿದ್ದಾನೆ ಎಂದು ವರದಿ ನೀಡಿದೆ. ಶೀಘ್ರದಲ್ಲೇ ಮುಖ್ಯಶಿಕ್ಷಕನ ವಿರುದ್ಧ ಶಿಸ್ತು ಕ್ರಮಕ್ಕೆ ಮೇಲಧಿಕಾರಿಗಳಿಗೆ ಶಿಫಾರಸು ಮಾಡಲಾಗುವುದು. ಈ ಹಿಂದೆ ಇಂತಹುದೇ ಪ್ರಕರಣದಲ್ಲಿ ಮುಖ್ಯಶಿಕ್ಷಕ ಅಮಾನತುಗೊಂಡಿದ್ದ’ ಎಂದು ಸುನಂದಾ ತಿಳಿಸಿದ್ದರು.

‘ಇನ್ನೂ ವರದಿ ಕೈಸೇರಿಲ್ಲ. ಒಂದುವೇಳೆ ಮುಖ್ಯಶಿಕ್ಷಕನ ವಿರುದ್ಧದ ಆರೋಪ ಸಾಬೀತಾದರೆ ಪೋಕ್ಸೊ ಕಾಯ್ದೆಯಡಿ ದೂರು ದಾಖಲಿಸಲು ಕ್ಷೇತ್ರ ಶಿಕ್ಷಣಾಧಿಕಾರಿಗೆ ಸೂಚನೆ ಕೊಡುವೆ’ ಎಂದು ಡಿಡಿಪಿಐ ಸಿ. ರಾಮಪ್ಪ ತಿಳಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.