ಗುರುವಾರ , ಜನವರಿ 23, 2020
28 °C
ಐ.ಎಸ್‌.ಆರ್‌. ವಿರುದ್ಧ ಹಂತ ಹಂತವಾಗಿ ಹೋರಾಟಕ್ಕೆ ಕಾರ್ಮಿಕರ ನಿರ್ಧಾರ

ಹೊಸಪೇಟೆ| ಐ.ಎಸ್‌.ಆರ್‌. ಬಾಕಿ ವೇತನ ಬಿಡುಗಡೆಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ: ‘ಇಂಡಿಯನ್‌ ಶುಗರ್ಸ್‌ ರಿಫೈನರಿ (ಐ.ಎಸ್‌.ಆರ್‌.) ಸಕ್ಕರೆ ಕಾರ್ಖಾನೆಯು ಬಾಕಿ ಉಳಿಸಿಕೊಂಡಿರುವ ಕಾರ್ಮಿಕರ ವೇತನವನ್ನು ಶೀಘ್ರದಲ್ಲೇ ಬಿಡುಗಡೆ ಮಾಡಬೇಕು. ಇಲ್ಲವಾದಲ್ಲಿ ಹೋರಾಟ ನಡೆಸಲಾಗುವುದು’ ಎಂದು ಐ.ಎಸ್‌.ಆರ್‌. ವರ್ಕರ್ಸ್ ಯೂನಿಯನ್‌ ಅಧ್ಯಕ್ಷ ಮೊಹಮ್ಮದ್‌ ಗೌಸ್‌ ಎಚ್ಚರಿಕೆ ನೀಡಿದರು.

ಗುರುವಾರ ನಗರದಲ್ಲಿ ನಡೆದ ಯೂನಿಯನ್‌ ಸಭೆಯಲ್ಲಿ ಮಾತನಾಡಿದ ಅವರು, ‘2016ರ ಆಗಸ್ಟ್‌ನಿಂದ ಇದುವರೆಗೆ ಕಾರ್ಮಿಕರಿಗೆ ವೇತನ ಕೊಟ್ಟಿಲ್ಲ. ಬೋನಸ್‌ ನೀಡಿಲ್ಲ. ನಿವೃತ್ತ ನೌಕರರ ಗ್ರ್ಯಾಚುಟಿ ಕೊಟ್ಟಿಲ್ಲ. ಕೆಲವರು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಆಸ್ಪತ್ರೆ ಖರ್ಚಿಗೂ ಹಣವಿಲ್ಲ. ಮಕ್ಕಳ ವಿದ್ಯಾಭ್ಯಾಸಕ್ಕೆ ಶಾಲಾ ಶುಲ್ಕ ಪಾವತಿಸಲು ಆಗುತ್ತಿಲ್ಲ. ಕಾರ್ಖಾನೆ ಆಡಳಿತ ಮಂಡಳಿ ತಡಮಾಡದೆ ಕಾರ್ಮಿಕರಿಗೆ ನ್ಯಾಯಯುತವಾಗಿ ಕೊಡಬೇಕಾದದ್ದನ್ನು ಕೊಡಬೇಕು’ ಎಂದು ಒತ್ತಾಯಿಸಿದರು.

‘ಆರಂಭದಲ್ಲಿ ಕಾರ್ಖಾನೆಯಲ್ಲಿ ಒಟ್ಟು 350 ಜನ ಕೆಲಸ ನಿರ್ವಹಿಸುತ್ತಿದ್ದರು. ಸದ್ಯಕ್ಕೀಗ 48 ಕಾಯಂ ನೌಕರರು, 18 ಸ್ಟಾಫ್‌, 82 ಸೀಸನಲ್‌ ಕಾರ್ಮಿಕರಿದ್ದಾರೆ. ಕಾರ್ಖಾನೆ ಬಂದ್‌ ಆಗಿದ್ದರೂ ನಿತ್ಯ ಎಲ್ಲರ ಹಾಜರಿ ಪಡೆಯಲಾಗುತ್ತಿದೆ. ಆದರೆ, ಕಾಲಕಾಲಕ್ಕೆ ವೇತನ, ಬೋನಸ್‌ ಯಾವುದು ಕೂಡ ನೀಡುತ್ತಿಲ್ಲ. ಅನೇಕ ವರ್ಷಗಳ ಕಾಲ ಕಾರ್ಮಿಕರು ದುಡಿದು ಕಾರ್ಖಾನೆ ಕಟ್ಟಿದ್ದಾರೆ. ರೈತರಿಂದ ಷೇರುಗಳನ್ನು ಪಡೆಯಲಾಗಿದೆ. ಸರ್ಕಾರದಿಂದ ಸಬ್ಸಿಡಿ ಪಡೆದುಕೊಳ್ಳುತ್ತಿದ್ದಾರೆ. ಆದರೆ, ಕಾರ್ಮಿಕರಿಗೆ ವೇತನ ಕೊಡದೇ ವಂಚಿಸಲಾಗುತ್ತಿದೆ’ ಎಂದು ಆರೋಪಿಸಿದರು.

‘1998ರಿಂದ ಇದುವರೆಗೆ ಬೋನಸ್‌ ಕೊಟ್ಟಿಲ್ಲ. ಫಿಟ್‌ಮೆಂಟ್‌, ಡಿ.ಎ. ಹೆಚ್ಚಿಸಿಲ್ಲ. ವೇತನ ಆಯೋಗದ ಸೂಚನೆ ಪಾಲಿಸಿಲ್ಲ. ವೇತನ ಶ್ರೇಣಿ ಅನುಷ್ಠಾನಗೊಳಿಸಿಲ್ಲ. ನೌಕರರ ಪಿ.ಎಫ್‌., ವಿಮೆ ಹಣ ಕೂಡ ಸಂದಾಯ ಮಾಡಿಲ್ಲ. ಈ ಕುರಿತು ಹಲವು ಸಲ ಆಡಳಿತ ಮಂಡಳಿಗೆ ಯೂನಿಯನ್‌ನಿಂದ ಲಿಖಿತವಾಗಿ ಪತ್ರ ಬರೆದು ಮನವಿ ಮಾಡಿಕೊಂಡರೂ ಪ್ರಯೋಜನವಾಗಿಲ್ಲ’ ಎಂದು ಗೋಳು ತೋಡಿಕೊಂಡಿದ್ದಾರೆ.

‘ಈಗ ಪತ್ರ ವ್ಯವಹಾರ ಮಾಡಿ, ಮನವಿ ಮಾಡಿಕೊಳ್ಳುವ ಸಮಯ ಮುಗಿದಿದೆ. ಈಗ ಹೋರಾಟದ ಮೂಲಕ ನಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳುತ್ತೇವೆ. ಹಂತ ಹಂತವಾಗಿ ಹೋರಾಟ ಮಾಡಲು ನಿರ್ಧರಿಸಿದ್ದೇವೆ. ಎಲ್ಲಾ ನೌಕರರ ಬೆಂಬಲವೂ ಇದೆ’ ಎಂದು ಭರವಸೆ ವ್ಯಕ್ತಪಡಿಸಿದರು.

ಪ್ರಧಾನ ಕಾರ್ಯದರ್ಶಿ ಅನ್ವರ್‌ ಬಾಷಾ, ಕೆ. ಹುಲುಗಪ್ಪ, ಸೋಮಲಿಂಗಪ್ಪ, ಜೆ. ಹನುಮಂತಪ್ಪ, ಎಂ. ಮೊಹಮ್ಮದ್‌, ಮೈಕಾಸ್‌ ಕಾಳಿ, ಹಮಾಲಿ ಬಸಪ್ಪ, ಗೋವಿಂದ ರಾಜ ಇದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು